October 13, 2026

Hampi times

Kannada News Portal from Vijayanagara

ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ

ಇಂದಿನ ಕಾಲಘಟ್ಟದಲ್ಲಿ ಹೊಸ ತಂತ್ರಜ್ಞಾನಗಳನ್ನು ಕಲಿಯುವುದು ಮತ್ತು ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯ. ವಿಶೇಷವಾಗಿ ಮಕ್ಕಳಿಗೆ ತಂತ್ರಜ್ಞಾನದ ಸೌಲಭ್ಯಗಳು ಶಿಕ್ಷಣಕ್ಕೆ ಪೂರಕವಾಗಿ ದೊರೆಯಬೇಕು. ಆನ್‌ಲೈನ್ ತರಗತಿಗಳಿಗೆ ಅನುಕೂಲವಾಗುವಂತೆ ಸರ್ಕಾರವು ಮಕ್ಕಳಿಗೆ ಉಚಿತವಾಗಿ ಮೊಬೈಲ್‌ಗಳನ್ನು ಒದಗಿಸುವುದರ ಜೊತೆಗೆ, ಅವುಗಳಲ್ಲಿ ಶೈಕ್ಷಣಿಕ ಉದ್ದೇಶದ ಅಪ್ಲಿಕೇಶನ್‌ಗಳನ್ನು ಅಳವಡಿಸಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟಗಿರಿ ದಳವಾಯಿ ಆಶಯ ವ್ಯಕ್ತಪಡಿಸಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ‘ನಮ್ಮ ನೋಟ-19’ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡದ ‘ಅಲೆಗಳು ಹೇಳಿದ ಕಥೆ’ ಹಾಗೂ ಹಿಂದಿಯ ‘ಮುಂಬೈ ವಾರಣಾಸಿ ಎಕ್ಸ್‌ಪ್ರೆಸ್’ ಸಿನಿಮಾಗಳ ಪ್ರದರ್ಶನ ಮತ್ತು ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲೆಗಳು ಹೇಳಿದ ಕಥೆ’ ಚಿತ್ರವು ಒಂದು ಕಡೆ ಬಡತನವನ್ನೂ, ಮತ್ತೊಂದು ಕಡೆ ಶ್ರೀಮಂತಿಕೆಯ ದರ್ಪವನ್ನೂ ಅನಾವರಣಗೊಳಿಸುತ್ತದೆ. ಉಳ್ಳವರು ಜನರ ಬೇಡಿಕೆಗಳನ್ನು ಹಾಗೂ ಅವರ ಸ್ವಂತ ಬದುಕಿನ ಆಧಾರವಾಗಿರುವ ಸಾಧನಗಳನ್ನು ಅವರಿಂದಲೇ ಹೇಗೆ ನಾಶಪಡಿಸುತ್ತಾರೆ ಎಂಬುದನ್ನು ಈ ಸಿನಿಮಾ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಕುಶಲಕರ್ಮಿಗಳು ಎದುರಿಸುವ ಸಂಕಷ್ಟಗಳು ಮತ್ತು ಸವಾಲುಗಳನ್ನು ಇದು ಕಟ್ಟಿಕೊಡುತ್ತದೆ” ಎಂದರು.

ಈ ಚಿತ್ರವು ಧಾರ್ಮಿಕ ನಂಬಿಕೆಗಳು ಮತ್ತು ಬದುಕಿನ ಅರ್ಥವನ್ನು ಅನ್ವೇಷಿಸುತ್ತದೆ. ದೇವರು ಮತ್ತು ಧರ್ಮದ ವಿಷಯ ಬಂದಾಗ ಮನುಷ್ಯರು ಬಹಳ ಸರಳವಾಗಿ ನಡೆದುಕೊಳ್ಳುತ್ತಾರೆ. ಆದರೆ, ತಮ್ಮದೇ ಬದುಕಿನ ನೆಲೆಯಲ್ಲಿ ಅಸ್ತಿತ್ವವನ್ನು ಅರಿತುಕೊಂಡು ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳುವ ಸಾಧ್ಯತೆಗಳನ್ನೂ ಪರಿಶೀಲಿಸಬೇಕು. ಮನುಷ್ಯನು ಸಹಜೀವಿಗಳೊಂದಿಗೆ ಸಹಬಾಳ್ವೆ ನಡೆಸುತ್ತ, ಇಡೀ ಜೀವಜಾಲವನ್ನು ಗಮನದಲ್ಲಿಟ್ಟುಕೊಂಡು ಬದುಕು ಕಟ್ಟಿಕೊಳ್ಳಬೇಕು. ವೈರಾಗ್ಯದ ಮನೋಭಾವದಲ್ಲಿದ್ದ ವ್ಯಕ್ತಿ ನಂತರ ಜೀವನೋತ್ಸಾಹವನ್ನು ಕಂಡುಕೊಳ್ಳುವ ಸಂದರ್ಭದಲ್ಲಿ ಸಾವು ಎದುರಾಗುವ ವೈರುಧ್ಯವನ್ನು ಈ ಸಿನಿಮಾ ಸೂಕ್ಷ್ಮವಾಗಿ ತೋರಿಸುತ್ತದೆ” ಎಂದು ವಿಶ್ಲೇಷಿಸಿದರು.

ಒಟ್ಟಾರೆಯಾಗಿ, ಎರಡೂ ಸಿನಿಮಾಗಳು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವುದರ ಜೊತೆಗೆ ಮನುಷ್ಯನ ಬದುಕು, ಸಾಮಾಜಿಕ ಪರಿಸರ, ಆರ್ಥಿಕ ಅಸಮಾನತೆ ಹಾಗೂ ಜೀವನದ ವಾಸ್ತವಗಳನ್ನು ನೆನಪಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪಿ.ಡಿ.ಎಫ್. ಸಂಶೋಧನಾರ್ಥಿ ಡಾ. ಕೆ.ಎಂ. ರೂಪ ಹಾಗೂ ಸಂಶೋಧನಾರ್ಥಿ ಮಂಜುಳ ಮಣ್ಣೂರು ಟಿಪ್ಪಣಿ ಮಂಡಿಸಿದರು. ಪತ್ರಿಕೋದ್ಯಮ ವಿಭಾಗದ ಖಾಜಾ ಸಾಬ್, ಪ್ರವೀಣ್ ಕಿತ್ನೋರ್, ಕುಮಾರ್ ಡಿ.ಬಿ, ರಘು ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಂಶೋಧನಾರ್ಥಿ ಶಬ್ರೀನಬಾನು ಮಕರಬ್ಬಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ವಿಭಾಗಗಳ ಡೀನರು, ಬೋಧಕರು, ಆಡಳಿತ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us: