https://youtu.be/NHc6OMSu0K4?si=SI_K4goOPEgwo6h2



ಐಚಿ-ನಗೋಯಾ (ಜಪಾನ್): ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಮಹಿಳೆಯರ 49 ಕೆಜಿ ವಿಭಾಗದ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಭಾರತದ ಹೆಮ್ಮೆಯ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ವೇಟ್‌ಲಿಫ್ಟಿಂಗ್ ಕಣದಲ್ಲಿ ಭಾರತಕ್ಕಿದ್ದ ಬರೋಬ್ಬರಿ 28 ವರ್ಷಗಳ ಸುದೀರ್ಘ ಪದಕದ ಬರವನ್ನು ಅವರು ಕೊನೆಗಾಣಿಸಿದ್ದಾರೆ. 1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಪದಕ ಗೆದ್ದ ನಂತರ ಭಾರತಕ್ಕೆ ಈ ವಿಭಾಗದಲ್ಲಿ ಸಿಕ್ಕ ಮೊದಲ ಪದಕ ಇದಾಗಿದೆ.

ವಿಶ್ವದ ಬಲಿಷ್ಠ ಲಿಫ್ಟರ್‌ಗಳ ತೀವ್ರ ಪೈಪೋಟಿಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ 32 ವರ್ಷದ ಮೀರಾಬಾಯಿ ಚಾನು, ಸ್ನ್ಯಾಚ್ ವಿಭಾಗದಲ್ಲಿ 87 ಕೆಜಿ ಹಾಗೂ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ 111 ಕೆಜಿ ಸೇರಿ ಒಟ್ಟು 198 ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಕ್ಕಿದರು. ಇದೇ ಸ್ಪರ್ಧೆಯಲ್ಲಿ ಉತ್ತರ ಕೊರಿಯಾದ ರಿ ಸಾಂಗ್-ಗುಮ್ ಒಟ್ಟು 215 ಕೆಜಿ ಭಾರ ಎತ್ತುವ ಮೂಲಕ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಇಂಡೋನೇಷ್ಯಾದ ಲುಲುಕ್ ಡಯಾನಾ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಹಿಂದಿನ ಕೂಟಗಳಲ್ಲಿ ಪದಕದ ಹೊಸ್ತಿಲಲ್ಲೇ ಎಡವಿ, ಗಾಯದ ಸಮಸ್ಯೆಯಿಂದ ಕಣ್ಣೀರಿಟ್ಟಿದ್ದ ಚಾನು, ಈ ಬಾರಿ ಅದ್ಭುತ ಸಂಯಮ ಮತ್ತು ಅಪ್ರತಿಮ ಹೋರಾಟ ಪ್ರದರ್ಶಿಸಿ ಜಯಭೇರಿ ಬಾರಿಸಿದ್ದಾರೆ. ಈ ಪದಕದೊಂದಿಗೆ ಅವರು ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಸೇರಿದಂತೆ ಜಾಗತಿಕ ಭಾರ ಎತ್ತುವಿಕೆಯ ಎಲ್ಲಾ ಪ್ರಮುಖ ವೇದಿಕೆಗಳಲ್ಲಿ ಪದಕ ಗೆದ್ದ ಭಾರತದ ಅಪರೂಪದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


More Stories
ಮಲೇಷ್ಯಾದಲ್ಲಿ ಕೆಲಸ: ಹೈಕಮಿಷನ್ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ
ಏಷ್ಯನ್ ಗೇಮ್ಸ್: ಭಾರತ ವನಿತೆಯರಿಗೆ ಬಂಗಾರದ ಗರಿ