https://youtu.be/NHc6OMSu0K4?si=SI_K4goOPEgwo6h2



ಏಕತಾ ನಗರ (ಗುಜರಾತ್): ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ ಹಾಗೂ ಧರ್ಮಭೂಮಿಯೂ ಹೌದು. ಈ ಮೂರು ಆಯಾಮಗಳೇ ನನ್ನ ಜೀವನ ಮತ್ತು ವೃತ್ತಿಜೀವನವನ್ನು ಮುನ್ನಡೆಸಿವೆ ಎಂದು ಹಿರಿಯ ನಟ ಶ್ರೀ ಅನಂತ್ ನಾಗ್ ಭಾವುಕರಾಗಿ ನುಡಿದರು.
ಗುಜರಾತ್‌ನ ಏಕತಾ ನಗರದಲ್ಲಿ (ಕೆವಾಡಿಯಾ) ಆಯೋಜಿಸಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಸಮಾರಂಭದ ಈ ಭವ್ಯತೆಗೆ ನಾನು ಮನಸೋತಿದ್ದೇನೆ. ಚಿತ್ರರಂಗದ ಇಂತಹ ಪರಮೋಚ್ಛ ಗೌರವವನ್ನು ಸ್ವೀಕರಿಸುತ್ತಿರುವುದು ನನ್ನಲ್ಲಿ ಅತೀವ ವಿನಮ್ರತೆಯ ಭಾವವನ್ನು ಮೂಡಿಸಿದೆ. ನಾನು ಬೆಳೆದದ್ದು ಒಂದು ಆಶ್ರಮದಲ್ಲಿ. ನಂತರ ಮುಂಬೈಗೆ ತೆರಳಿದಾಗ ರಂಗಭೂಮಿಯ ಮೂಲಕ ನನ್ನ ಅಭಿನಯದ ಹಾದಿ ಆರಂಭವಾಯಿತು. ಪ್ರತಿಯೊಬ್ಬರೂ ತಮ್ಮ ಜೀವನೋಪಾಯಕ್ಕಾಗಿ ಒಂದೊಂದು ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂತ ಕವಿ ಕನಕದಾಸರ ಕಾವ್ಯದಂತೆ, ನನ್ನ ಬದುಕಿನ ಪಯಣವು ಸಹಜವಾಗಿಯೇ ನನ್ನನ್ನು ಬೆಳ್ಳಿಪರದೆಯತ್ತ ತಂದು ನಿಲ್ಲಿಸಿತು” ಎಂದು ತಮ್ಮ ಆರಂಭಿಕ ದಿನಗಳನ್ನು ಮೆಲಕು ಹಾಕಿದರು.

“ಸಿನಿಮಾ ಪ್ರವೇಶಕ್ಕೂ ಮುನ್ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರ ಪ್ರಮುಖ ಕೃತಿಗಳು ಸೇರಿದಂತೆ ಸುಮಾರು 50 ನಾಟಕಗಳಲ್ಲಿ ಅಭಿನಯಿಸಿದ್ದೆ. ಆ ರಂಗಭೂಮಿಯೇ ನನ್ನ ನಟನಾ ವೃತ್ತಿಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟಿತು. ನಂತರ ಕರ್ನಾಟಕವನ್ನೇ ನನ್ನ ಕರ್ಮಭೂಮಿಯನ್ನಾಗಿ ಆರಿಸಿಕೊಂಡು, ನನ್ನ ಇಡೀ ಕಲಾ ಸೇವೆಯನ್ನು ಕನ್ನಡ ಚಿತ್ರರಂಗಕ್ಕೆ ಮುಡಿಪಾಗಿಡುವ ನಿರ್ಧಾರವನ್ನು ನಾನು ಅತ್ಯಂತ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡೆ. ಕಳೆದ ವರ್ಷವಷ್ಟೇ ಗೌರವಾನ್ವಿತ ರಾಷ್ಟ್ರಪತಿಯವರಿಂದ ಪದ್ಮಭೂಷಣ ಗೌರವ ಸ್ವೀಕರಿಸಿದ್ದೆ. ಈಗ ಈ ಪರಮೋಚ್ಚ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ನನ್ನಲ್ಲಿ ಕೃತಜ್ಞತೆಯ ಭಾವವನ್ನು ತುಂಬಿದೆ” ಎಂದರು.
ತಮ್ಮ ಏಳು ದಶಕಗಳ ಸುದೀರ್ಘ ಪಯಣದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಈ ಪ್ರಶಸ್ತಿಯನ್ನು ಅರ್ಪಿಸಿದ ಅನಂತ್ ನಾಗ್, “ಈ ಪುರಸ್ಕಾರವು ಕೇವಲ ನನಗೆ ಮಾತ್ರ ಸೀಮಿತವಾದುದಲ್ಲ. ನನ್ನ ಜತೆಯಲ್ಲಿ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಪ್ರತಿಯೊಬ್ಬ ತಂತ್ರಜ್ಞರು, ಸಹ ಕಲಾವಿದರು ಮತ್ತು ನನ್ನ ನಟನೆಯನ್ನು ದಶಕಗಳಿಂದ ಪ್ರೀತಿಯಿಂದ ಹರಸಿದ ಕೋಟ್ಯಂತರ ಪ್ರೇಕ್ಷಕ ಮಹಾಪ್ರಭುಗಳಿಗೆ ಇದನ್ನು ಸಮರ್ಪಿಸುತ್ತಿದ್ದೇನೆ” ಎಂದು ಕೃತಜ್ಞತೆ ಸಲ್ಲಿಸಿದರು.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಇತರೆ ನಟರು
ರಕ್ಷಿತ್ ಶೆಟ್ಟಿ ನಿರ್ಮಾಣದ ಹಾಗೂ ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಭಾಜನವಾಯಿತು. ಇದೇ ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ಅತೀಶ್ ಎಸ್. ಶೆಟ್ಟಿ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರೆ, ರೂಪಾಶ್ರೀ ವಾರ್ಕಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡರು. ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ ವಿಭಾಗದಲ್ಲಿ ‘ನಾನಿರುವುದೇ ನಿಮಗಾಗಿ, ನಾಡಿರುವುದು ನಮಗಾಗಿ’ ಕೃತಿಗೆ ಲೇಖಕ ಪ್ರದೀಪ್ ಕೆಂಚನೂರು ಪ್ರಶಸ್ತಿ ಸ್ವೀಕರಿಸಿದರು.
ಇತರ ಪ್ರಮುಖ ವಿಭಾಗಗಳಲ್ಲಿ, ಮಲಯಾಳಂ ನಟ ಮಮ್ಮುಟಿ (‘ಬ್ರಮಯುಗಂ’) ಹಾಗೂ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (‘ಚಂದು ಚಾಂಪಿಯನ್’) ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡರು. ‘ಆರ್ಟಿಕಲ್ 370’ ಚಿತ್ರದ ನಟನೆಗೆ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ಇದೇ ಚಿತ್ರಕ್ಕಾಗಿ ನಿರ್ಮಾಪಕ ಆದಿತ್ಯ ಧರ್ ಪ್ರಶಸ್ತಿ ಸ್ವೀಕರಿಸಿದರು. ನಟ ಧನುಶ್ ಅವರಿಗೆ ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ರಾಯನ್’ ಚಿತ್ರಗಳಿಗಾಗಿ ಎರಡು ಪ್ರಶಸ್ತಿಗಳು ದೊರೆತರೆ, ‘ಪುಷ್ಪ 2’ ಚಿತ್ರಕ್ಕಾಗಿ ಸುಕುಮಾರ್ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.


More Stories
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ
ಕರ್ನಾಟಕದ ರೇಷ್ಮೆಗೆ ನಂ.1 ಸ್ಥಾನ