https://youtu.be/NHc6OMSu0K4?si=SI_K4goOPEgwo6h2



ಹಂಪಿ ಟೈಮ್ಸ್ ಹೊಸಪೇಟೆ
ರೈತರು, ಬಡವರು ಹಾಗೂ ಕೂಲಿ ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿ ಬಗೆಹರಿಸುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಹರಪನಹಳ್ಳಿಯ ಡಾ. ಬಾಬು ಜಗಜೀವನ ರಾಂ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ 15 ದಿನಗಳ ಒಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಬೇಕು. ಸ್ಥಳದಲ್ಲೇ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಕಾನೂನು ತೊಡಕುಗಳಿರುವ ಪ್ರಕರಣಗಳಲ್ಲಿ ಅರ್ಜಿದಾರರಿಗೆ ಸ್ಪಷ್ಟ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು. ಸಾರ್ವಜನಿಕರ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೇರವಾಗಿ ಹಲವು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಮನೆಯ ಪಕ್ಕದಲ್ಲೇ ಅಳವಡಿಸಿರುವ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ತೆರವುಗೊಳಿಸಲು ಸಚಿವರು ಸೂಚಿಸಿದರು. ಹಿರಿಯರ ವಿಲ್ ಅನ್ವಯ ಆಸ್ತಿ ಪರಭಾರೆ ಮಾಡಿಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ಬಂದ ದೂರಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗೆ ನಿರ್ದೇಶಿಸಿದರು.
ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷಚೇತನ ಫಲಾನುಭವಿಯೊಬ್ಬರು ಬದುಕಿದ್ದರೂ ಆನ್‌ಲೈನ್‌ನಲ್ಲಿ ‘ಮೃತಪಟ್ಟಿದ್ದಾರೆ’ ಎಂದು ತಪ್ಪಾಗಿ ನಮೂದಿಸಿ ಪಿಂಚಣಿ ಸ್ಥಗಿತಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಎಸಗಿದ ಹಿಂದಿನ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಸೂಚಿಸಿದರು. ಪೂರ್ವಜರ ಕಾಲದಿಂದ ಉಳುಮೆ ಮಾಡುತ್ತಿರುವ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿರುವುದಾಗಿ ರೈತರು ಅಹವಾಲು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ತಾಲೂಕಿನ 37 ಗ್ರಾಮ ಪಂಚಾಯಿತಿಗಳಿಂದ ಅಹವಾಲು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳು, ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಜಾಗೃತಿ ಕೌಂಟರ್ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಕರಕುಶಲ ವಸ್ತುಗಳ ಪ್ರದರ್ಶನ-ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ವಹಿಸಿದ್ದರು. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಉಪವಿಭಾಗಾಧಿಕಾರಿ ಟಿ. ಸುರೇಶ ಕುಮಾರ್, ತಹಶೀಲ್ದಾರ್ ಗಿರೀಶ ಬಾಬು, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


More Stories
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ
ಹೈದರಾಬಾದ್ನಲ್ಲಿ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಕೃಷಿ ಸಮ್ಮೇಳನ ಮುಕ್ತಾಯ