ಹೈದರಾಬಾದ್: ಕೃಷಿ ಸಮ್ಮೇಳನಗಳು ಕೇವಲ ಭೇಟಿ ಮತ್ತು ಊಟಕ್ಕೆ ಸೀಮಿತವಾಗದೆ, ಅಳೆಯಬಹುದಾದ ಕಾಂಕ್ರೀಟ್ ಫಲಿತಾಂಶಗಳನ್ನು ನೀಡುವಂತಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಕೃಷಿ ಸಮ್ಮೇಳನದ ಸಮಾರೋಪ ಸತ್ರವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ದಿನಪೂರ್ತಿ ನಡೆದ ಚರ್ಚೆಗಳಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ನೀಡಿದ ಬದ್ಧತೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರೆ ನೀಡಿದರು. ಕೇಂದ್ರ, ರಾಜ್ಯ ಸರ್ಕಾರಗಳು, ವಿಜ್ಞಾನಿಗಳು ಹಾಗೂ ರೈತರು ಒಂದೇ ಕೃಷಿ ತಂಡವಾಗಿ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ದೇಶದ ಕೃಷಿ ರಂಗದ ಮುಖಚರ್ಯೆಯನ್ನು ಬದಲಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿ ಡಿಜಿಟಲೀಕರಣದ ಮಹತ್ವವನ್ನು ಪ್ರಸ್ತಾಪಿಸಿದ ಸಚಿವರು, ಯಾವುದೇ ರಾಜ್ಯವೂ ಹಿಂದೆ ಬೀಳದಂತೆ ಅಗ್ರಿಸ್ಟಾಕ್ ಮತ್ತು ಫಾರ್ಮರ್ ಐಡಿ ಜನರೆಶನ್ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಫಾರ್ಮರ್ ಐಡಿ ವಿತರಣೆಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವುದನ್ನು ಶ್ಲಾಘಿಸಿದ ಅವರು, ಕೇರಳ, ತಮಿಳುನಾಡು ರಾಜ್ಯಗಳು ಭೂದಾಖಲೆಗಳು ಹಾಗೂ ಫಾರ್ಮರ್ ರಿಜಿಸ್ಟ್ರಿ ಸಂಯೋಜನೆಯನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ರೈತರಿಗೆ ಸ್ಥಳೀಯ ಮಟ್ಟದಲ್ಲೇ ಸಲಹೆಗಳನ್ನು ಒದಗಿಸಲು ರೂಪಿಸಲಾಗಿರುವ ‘ಭಾರತ್ ವಿಸ್ತಾರ್’ ಮೊಬೈಲ್ ವ್ಯವಸ್ಥೆಯನ್ನು ಕನ್ನಡ, ತೆಲುಗು, ತಮಿಳು ಸೇರಿದಂತೆ 13 ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು. ದೇಶದಲ್ಲಿರುವ 16,000 ಕೃಷಿ ವಿಜ್ಞಾನಿಗಳ ಸಂಶೋಧನೆಗಳು ಪ್ರಯೋಗಾಲಯದಿಂದ ನೇರವಾಗಿ ರೈತರ ಹೊಲಗಳಿಗೆ ತಲುಪಬೇಕು ಎಂದ ಅವರು, ಭಾರತವನ್ನು ವಿಶ್ವದ ‘ಆಹಾರ ಭಂಡಾರ’ವನ್ನಾಗಿ (Food Basket) ರೂಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.
ಇದೇ ಸೆಪ್ಟೆಂಬರ್ 28 ಮತ್ತು 29 ರಂದು ನವದೆಹಲಿಯ ಪೂಸಾ ಸಂಸ್ಥೆಯಲ್ಲಿ ರಾಷ್ಟ್ರೀಯ ಹಿಂಗಾರು ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ಸಮ್ಮೇಳನದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ರಾಮ್ ನಾಥ್ ಠಾಕೂರ್, ಭಗೀರಥ್ ಚೌಧರಿ, ತೆಲಂಗಾಣ, ಕೇರಳ, ಆಂಧ್ರಪ್ರದೇಶ ಹಾಗೂ ಪುದುಚೇರಿ ರಾಜ್ಯಗಳ ಕೃಷಿ ಸಚಿವರು, ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಅತೀಶ್ ಚಂದ್ರ ಮತ್ತು ಐಸಿಎಆರ್ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಭಾಗವಹಿಸಿದ್ದರು.


More Stories
ಮೀರಾಲಾಂ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್ ಸುಲಿಗೆ
ಪ್ರತಿಷ್ಠಿತ ಪಿಯು ಕಾಲೇಜು ಪ್ರವೇಶಕ್ಕೆ ಹೆದ್ದಾರಿ… ವಿಷನ್ 625: ಸ್ಟಡಿ ಎಕ್ಸ್ಪ್ರೆಸ್’ ಮಾರ್ಗದರ್ಶಿ
13 ಗಣಿ ಬಾಧಿತ ಕ್ಯಾಂಪ್ಗಳ ಅಭಿವೃದ್ಧಿಗೆ ₹146 ಕೋಟಿ ಅನುದಾನ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ