September 20, 2026

Hampi times

Kannada News Portal from Vijayanagara

ಸ್ವದೇಶಿ ವಿಮಾನಗಳ ಹಸ್ತಾಂತರ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಬೆಂಗಳೂರು
ದೇಶದ ರಕ್ಷಣಾ ಹಾಗೂ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ಮೋಹನ್ ನಾಯ್ಡು ಅವರ ಸಮ್ಮುಖದಲ್ಲಿ, ಭಾರತೀಯ ವಾಯುಪಡೆಗೆ (ಐಎಎಫ್) ಎರಡು ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಎಫ್‌ಒಸಿ ಟ್ವಿನ್ ಸಿಟರ್ ಟ್ರೈನರ್‌ಗಳು, ಮೂರು ಎಚ್‌ಟಿಟಿ-೪೦ ಬೇಸಿಕ್ ಟ್ರೈನರ್‌ಗಳು ಹಾಗೂ ಪವನ್ ಹನ್ಸ್ ಲಿಮಿಟೆಡ್‌ಗೆ ನಾಲ್ಕು ಧ್ರುವ ನೆಕ್ಸ್ಟ್ ಜನರೇಷನ್ (ಎನ್‌ಜಿ) ಹೆಲಿಕಾಪ್ಟರ್‌ಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಈ ಹಸ್ತಾಂತರ ಸಮಾರಂಭವು ಭಾರತದ ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯ, ತಾಂತ್ರಿಕ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯತ್ತ ದೇಶದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಭವಿಷ್ಯದ ವಾಯು ಕಾರ್ಯಾಚರಣೆಗಳು ತಂತ್ರಜ್ಞಾನ ಆಧಾರಿತವಾಗಿರಲಿದ್ದು, ಕಠಿಣ ಸನ್ನಿವೇಶಗಳಿಗೆ ಪೈಲಟ್‌ಗಳನ್ನು ಸಜ್ಜುಗೊಳಿಸಲು ಸ್ವದೇಶಿ ತರಬೇತಿ ವಿಮಾನಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿವೆ.

 

ಧ್ರುವ-ಎನ್‌ಜಿ ನಮ್ಮ ಸ್ವದೇಶಿ ನಾಗರಿಕ ಏರೋಸ್ಪೇಸ್ ಸಾಮರ್ಥ್ಯವನ್ನು ಬಿಂಬಿಸಿದರೆ, ಎಲ್‌ಸಿಎ ತೇಜಸ್ ಟ್ರೈನರ್ ನಮ್ಮ ಯುದ್ಧ ವಿಮಾನ ಪರಿಸರ ವ್ಯವಸ್ಥೆಯ ಪ್ರಬುದ್ಧತೆಯ ಸಂಕೇತವಾಗಿದೆ. ತಂತ್ರಜ್ಞಾನ ಯೋಜನೆಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ನಿಗದಿತ ಕಾಲಮಿತಿಯಲ್ಲಿ ಗುರಿ ತಲುಪಬೇಕು. ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಭವಿಷ್ಯದ ಪರಿವರ್ತನಾತ್ಮಕ ತಂತ್ರಜ್ಞಾನಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ಮೋಹನ್ ನಾಯ್ಡು ಮಾತನಾಡಿ, ಧ್ರುವ ಎನ್‌ಜಿ ಹೆಲಿಕಾಪ್ಟರ್‌ನ ಪ್ರಮಾಣೀಕರಣ ಮತ್ತು ನಾಗರಿಕ ಕಾರ್ಯಾಚರಣೆಗೆ ಸೇರ್ಪಡೆಯು ದೇಶದ ನಾಗರಿಕ ವಿಮಾನಯಾನ ಪರಿಸರ ವ್ಯವಸ್ಥೆಯಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ. ವಾಣಿಜ್ಯ ಬಳಕೆಗೆ ಸುಧಾರಿತ ಏರೋಸ್ಪೇಸ್ ಪ್ಲಾಟ್‌ಫಾರ್ಮ್ ಗಳನ್ನು ನಿರ್ಮಿಸುವಲ್ಲಿ ಭಾರತೀ ಯ ಉದ್ಯಮ ಪ್ರವರ್ಧಮಾನಕ್ಕೆ ಬರುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಚ್‌ಎಎಲ್ ಸಿಎಂಡಿ ರವಿ ಕೆ. ಮಾತನಾಡಿ, ತೇಜಸ್ ತರಬೇತಿ ವಿಮಾನಗಳು, ಎಚ್‌ಟಿಟಿ-೪೦ ಹಾಗೂ ಧ್ರುವ-ಎನ್‌ಜಿ ಹಸ್ತಾಂತರವು ನಾಗರಿಕ ಮತ್ತು ರಕ್ಷಣಾ ವಲಯಗಳೆರಡರ ಅಗತ್ಯಗಳನ್ನು ನಿಖರವಾಗಿ ಪೂರೈಸುವ ಎಚ್‌ಎಎಲ್ ಸಂಸ್ಥೆಯ ದೃಢ ಸಾಮರ್ಥ್ಯ ಮತ್ತು ಸ್ವದೇಶಿ ತಂತ್ರಜ್ಞಾನದ ಶಕ್ತಿಯನ್ನು ಪ್ರದರ್ಶಿಸಿದೆ ಎಂದರು. ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಸಂಜೀವ್ ಕುಮಾರ್ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಉಪಸ್ಥಿತರಿದ್ದರು.

Please follow and like us:

 

 

Translate »
[t4b-ticker]