https://youtu.be/NHc6OMSu0K4?si=SI_K4goOPEgwo6h2



ಹೊಸಪೇಟೆ: ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನವೀಕೃತವಾಗಿ ಸಿದ್ಧಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಸೆಪ್ಟೆಂಬರ್ 19 ಮತ್ತು 20 ರಂದು ವಿಜಯನಗರ ಜಿಲ್ಲಾದ್ಯಂತ ವಿಶೇಷ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ಜಿಲ್ಲಾದ್ಯಂತ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗಿರುವ ಒಟ್ಟು 30,622 ನೋಟಿಸ್‌ಗಳ ಪೈಕಿ ಶೇ. 98.56 ರಷ್ಟು, ಅಂದರೆ 30,184 ನೋಟಿಸ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಇವುಗಳಲ್ಲಿ 10,983 ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದ್ದು, ಉಳಿದ 19,047 ವಿಚಾರಣೆಗಳು ಪ್ರಗತಿಯಲ್ಲಿವೆ. ಎಲ್ಲಾ ವಿಚಾರಣೆಗಳನ್ನು ಮುಕ್ತಾಯಗೊಳಿಸಲು ಅಕ್ಟೋಬರ್ 12 ಕೊನೆಯ ದಿನಾಂಕವಾಗಿದ್ದು, ಸ್ವೀಕೃತವಾದ ಆಕ್ಷೇಪಣೆಗಳ ಅಂತಿಮ ವಿಲೇವಾರಿಗೆ ಅಕ್ಟೋಬರ್ 22ರ ಗಡುವು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಜಿಲ್ಲೆಯ ಹಡಗಲಿ (1,74,737), ಹಗರಿಬೊಮ್ಮನಹಳ್ಳಿ (2,14,921), ವಿಜಯನಗರ (2,11,152), ಕೂಡ್ಲಿಗಿ (1,95,344) ಹಾಗೂ ಹರಪನಹಳ್ಳಿ (1,99,539) ಸೇರಿದಂತೆ ಒಟ್ಟು 9,95,693 ಮತದಾರರಿದ್ದಾರೆ. ಇವರಲ್ಲಿ 4,99,838 ಪುರುಷ, 4,95,749 ಮಹಿಳಾ ಮತ್ತು 106 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ. ಕಳೆದ ಜೂನ್ 16 ರಿಂದ ಸೆಪ್ಟೆಂಬರ್ 16 ರವರೆಗಿನ ಮೂರು ತಿಂಗಳ ಅವಧಿಯಲ್ಲಿ ಹೊಸ ನೋಂದಣಿ, ಹೆಸರು ತೆಗೆದುಹಾಕುವಿಕೆ, ವಿಳಾಸ ಬದಲಾವಣೆ ಹಾಗೂ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಒಟ್ಟು 48,044 ಅರ್ಜಿಗಳು ಸ್ವೀಕೃತವಾಗಿವೆ ಎಂದರು.
2026ರ ಅಕ್ಟೋಬರ್ 1ಕ್ಕೆ 18 ವರ್ಷ ಪೂರೈಸುವ ಯುವಜನರು ನಮೂನೆ 6ರ ಮೂಲಕ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 17 ರಿಂದ ಸೆಪ್ಟೆಂಬರ್ 16 ರವರೆಗೆ ಸಲ್ಲಿಕೆಯಾದ ಅರ್ಹ ಅರ್ಜಿಗಳನ್ನು ಪರಿಶೀಲಿಸಿ, ಅಕ್ಟೋಬರ್ 19 ರಂದು ಪ್ರಕಟವಾಗಲಿರುವ ಅಂತಿಮ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ನಾಗರಿಕರು voters.eci.gov.in ಜಾಲತಾಣ, ECINET ಮೊಬೈಲ್ ಆ್ಯಪ್ ಅಥವಾ ನೇರವಾಗಿ ಎಆರ್‌ಒ ಮತ್ತು ಬಿಎಲ್‌ಒ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಪರವಾಗಿ ಕುಟುಂಬದ ಹಿರಿಯ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.


More Stories
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ
ಅಹವಾಲುಗಳಿಗೆ 15 ದಿನದೊಳಗೆ ಪರಿಹಾರ: ಸಚಿವ ಕೆ.ಎಸ್.ಬಸವಂತಪ್ಪ