September 20, 2026

Hampi times

Kannada News Portal from Vijayanagara

ವಿಜಯನಗರ ಪ್ರಗತಿಗೆ ಸರ್ಕಾರದ ಸಂಕಲ್ಪ

https://youtu.be/NHc6OMSu0K4?si=SI_K4goOPEgwo6h2

ಹೊಸಪೇಟೆ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಪ್ರಗತಿ ಹಾಗೂ ವಿಜಯನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ಕಾರ್ಯಕ್ಕೆ ಜಿಲ್ಲೆಯ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಬಸವಂತಪ್ಪ ಕರೆ ನೀಡಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈದರಾಬಾದ್ ನಿಜಾಮರ ಕಪಿಮುಷ್ಟಿ ಮತ್ತು ದಬ್ಬಾಳಿಕೆಯ ಆಡಳಿತದಿಂದ ಈ ಭಾಗ ವಿಮುಕ್ತಿಗೊಂಡು 79 ವರ್ಷಗಳನ್ನು ಪೂರೈಸುತ್ತಿರುವ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ ಅವರು, ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ, ನಿಜಾಮರ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಪ್ರದೇಶಗಳ ಜನರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ.

ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ಸ್ವಾಮಿ ರಮಾನಂದ ತೀರ್ಥರ ನಾಯಕತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ಹಾಗೂ ಡಾ. ಮೇಲ್ಕೋಟೆ, ಅನ್ನದಾನಯ್ಯ ಪುರಾಣಿಕ ಸೇರಿದಂತೆ ಪ್ರಮುಖ ನಾಯಕರ ತ್ಯಾಗ ಬಲಿದಾನಗಳನ್ನು ಕೃತಜ್ಞತೆಯಿಂದ ನೆನೆಯಬೇಕು ಎಂದರು. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರದ ಫಲವಾಗಿ ನಡೆದ ‘ಆಪರೇಷನ್ ಪೋಲೋ’ ಸೇನಾ ಕಾರ್ಯಾಚರಣೆಯ ಮೂಲಕ 1948ರ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಅಧಿಕೃತವಾಗಿ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು ಎಂದು ವಿವರಿಸಿದರು.

 

ಈ ಹಿಂದುಳಿದ ಭಾಗದ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಂವಿಧಾನದ 371(ಜೆ) ತಿದ್ದುಪಡಿ ತಂದು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಕೆಕೆಆರ್‌ಡಿಬಿ ಮುಖಾಂತರ ಮೂಲಸೌಕರ್ಯ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರದಿಂದ ನಿರಂತರ ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ನೃತ್ಯ ಪ್ರದರ್ಶನ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನೆಯ ಕಿರು ನಾಟಕ ಪ್ರದರ್ಶನ ಗಮನ ಸೆಳೆದವು. ಪೊಲೀಸ್, ಗೃಹರಕ್ಷಕ ಹಾಗೂ ಸ್ಕೌಟ್ಸ್ & ಗೈಡ್ಸ್ ತುಕಡಿಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಹೆಚ್.ಆರ್. ಗವಿಯಪ್ಪ ವಹಿಸಿದ್ದರು. ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ್ ನಾಯ್ಕ್, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿ.ಪಂ ಸಿಇಒ ಗರಿಮಾ ಪನ್ವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us: