ಹಗರಿಬೊಮ್ಮನಹಳ್ಳಿ:
ಆಕಾಶದ ಬಾನಂಗಳದಲ್ಲಿ ಸೂರ್ಯನ ಸುತ್ತಲೂ ವೃತ್ತಾಕಾರದ ಪ್ರಕಾಶಮಾನ ಉಂಗುರದಂತೆ ಮೂಡಿಬಂದ ಅಪರೂಪದ ಪ್ರಭಾವಲಯ (ಸನ್ ಹಾಲೋ) ಸಾರ್ವಜನಿಕರಲ್ಲಿ ತೀವ್ರ ಕೌತುಕ ಹಾಗೂ ಆಶ್ಚರ್ಯ ಮೂಡಿಸಿತು.

ಬುಧವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಆಕಾಶದಲ್ಲಿ ಗೋಚರಿಸಿದ ಈ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ತಾಲೂಕಿನ ಬಸರಕೋಡ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಆರ್.ಬಿ. ಗುರುಬಸವರಾಜ್ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಈ ಅಪರೂಪದ ದೃಶ್ಯದ ವೈಜ್ಞಾನಿಕ ಹಿನ್ನೆಲೆಯನ್ನು ಅವರು ಸಮಗ್ರವಾಗಿ ವಿವರಿಸಿದ್ದಾರೆ.
ಈ ವಿದ್ಯಮಾನವನ್ನು ಖಗೋಳ ಹಾಗೂ ಹವಾಮಾನ ವಿಜ್ಞಾನದಲ್ಲಿ ಸೂರ್ಯನ ಪ್ರಭಾವಲಯ ಅಥವಾ ‘22-ಡಿಗ್ರಿ ಹಾಲೋ’ (22° Halo) ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು. ವಾತಾವರಣದ ಅತ್ಯಂತ ಎತ್ತರದ ಪದರದಲ್ಲಿರುವ ‘ಸಿರಸ್’ (Cirrus) ಮೋಡಗಳಲ್ಲಿ ಲಕ್ಷಾಂತರ ಸಣ್ಣ, ಷಡ್ಭುಜೀಯ (hexagonal) ಆಕಾರದ ಮಂಜುಗಡ್ಡೆಯ ಹರಳುಗಳು ತೇಲುತ್ತಿರುತ್ತವೆ. ಸೂರ್ಯನ ತೀಕ್ಷ್ಣ ಬೆಳಕು ಈ ಮಂಜುಗಡ್ಡೆಯ ಹರಳುಗಳ ಮೂಲಕ ಹಾದುಹೋಗುವ ಸಂದರ್ಭದಲ್ಲಿ ಬೆಳಕಿನ ವಕ್ರೀಭವನ (refraction) ಉಂಟಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ ಸೂರ್ಯನ ಸುತ್ತಲೂ ಪರಿಪೂರ್ಣ ವೃತ್ತಾಕಾರದ ಉಂಗುರ ರಚನೆಯಾಗುತ್ತದೆ.
ಈ ಪ್ರಭಾವಲಯವು ಸೂರ್ಯನ ಕೇಂದ್ರದಿಂದ ನಿಖರವಾಗಿ 22 ಡಿಗ್ರಿ ಕೋನದಲ್ಲಿ ರೂಪುಗೊಳ್ಳುವುದರಿಂದ ಇದಕ್ಕೆ ‘22-ಡಿಗ್ರಿ ಹಾಲೋ’ ಎಂಬ ಹೆಸರು ಬಂದಿದೆ. ಕೆಲವೊಮ್ಮೆ ಇದು ಕಾಮನಬಿಲ್ಲಿನ ಲಘು ಛಾಯೆಯನ್ನು ಪ್ರದರ್ಶಿಸಲಿದ್ದು, ಉಂಗುರದ ಒಳಭಾಗದಲ್ಲಿ ಕೆಂಪು ಹಾಗೂ ಹೊರಭಾಗದಲ್ಲಿ ನೀಲಿ ಬಣ್ಣದ ಹೊಳಪು ಕಾಣಿಸುತ್ತದೆ. ಸಾಮಾನ್ಯವಾಗಿ ಇಂತಹ ಮೋಡಗಳು ವಾತಾವರಣದಲ್ಲಿ ಮಳೆ ಸುರಿಯುವ ಮುನ್ನ ಮುನ್ಸೂಚನೆಯಾಗಿ ಕಂಡುಬರುತ್ತವೆ. ಹೀಗಾಗಿ ಈ ವಿದ್ಯಮಾನವು ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿ ಉತ್ತಮ ಮಳೆ ಅಥವಾ ಹವಾಮಾನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂಬುದರ ನೈಸರ್ಗಿಕ ಸಂಕೇತವಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.


More Stories
ಮೀರಾಲಾಂ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್ ಸುಲಿಗೆ
ಪ್ರತಿಷ್ಠಿತ ಪಿಯು ಕಾಲೇಜು ಪ್ರವೇಶಕ್ಕೆ ಹೆದ್ದಾರಿ… ವಿಷನ್ 625: ಸ್ಟಡಿ ಎಕ್ಸ್ಪ್ರೆಸ್’ ಮಾರ್ಗದರ್ಶಿ
13 ಗಣಿ ಬಾಧಿತ ಕ್ಯಾಂಪ್ಗಳ ಅಭಿವೃದ್ಧಿಗೆ ₹146 ಕೋಟಿ ಅನುದಾನ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ