April 23, 2026

Hampi times

Kannada News Portal from Vijayanagara

ಕ್ರೀಡಾ ಜಗತ್ತಿಗೆ ಸ್ಫೂರ್ತಿ ಭಾರತದ ಮಹಿಳಾ ಆರ್ಚರಿ ಪಟು ಪಾಯಲ್ ನಾಗ್

https://youtu.be/NHc6OMSu0K4?si=SI_K4goOPEgwo6h2

ಸಾಧನೆ ಎಂಬುದು  ಸಾಧಕನ ಸೊತ್ತು, ಸಾಧಿಸುವ ಛಲವಿದ್ದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬ ಮಾತನ್ನು ಅಕ್ಷರಶಃ ಸತ್ಯ ಮಾಡಿ ತೋರಿಸಿದವರು ಎರಡೂ ಕೈಗಳು ಹಾಗೂ ಎರಡೂ ಕಾಲುಗಳಿಲ್ಲದ ಪಾಯಲ್ ನಾಗ್ ಎಂಬ ಭಾರತೀಯ ಮಹಿಳೆ. ಇವರು ಇತ್ತೀಚಿಗೆ ಬ್ಯಾಂಕಾಕ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಪ್ಯಾರಾ ಆರ್ಚರಿ ಸಿರಿಸ್‌ನ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಶೀತಲ್ ವಿರುದ್ಧ 139-136 ಅಂಕಗಳಿಂದ ಗೆಲುವನ್ನು ಸಾಧಿಸಿದರು.

ಶೀತಲ್ ಅವರು ಎರಡೂ ಕೈಗಳಿಲ್ಲದಿರುವ ಆರ್ಚರಿ ಪಟುವಾಗಿದ್ದಾರೆ. ಕೇವಲ 18 ವರ್ಷದವರಾದ ಪಾಯಲ್‌ಗೆ ಇದು ಶೀತಲ್ ವಿರುದ್ಧ 2ನೇ ಗೆಲುವಾಗಿದ್ದು, 2025ರ ರಾಷ್ಟಿçÃಯ ಟೂರ್ನಿಯಲ್ಲಿಯೂ ಅವರನ್ನು ಸೋಲಿಸಿದ್ದರು. ಪಾಯಲ್‌ಗೆ ವಿಶೇಷ ರೀತಿಯ ಕೃತಕ ಕಾಲು ಮಾಡಿಸಿ ಅಭ್ಯಾಸ ಮಾಡಿಸುತ್ತಾರೆ. ಕೃತಕ  ಕಾಲು ಮತ್ತು ಭುಜ ಬಳಸಿ ಬಾಣವನ್ನು ಬಿಡುವುದು ಪ್ರತಿಯೊಬ್ಬರನ್ನೂ ಮೂಕವಿಸ್ಮಿತಗೊಳಿಸುತ್ತದೆ. ಪಾಯಲ್‌ನಾಗ್ ಅವರು ಒಡಿಶಾದ ಬಲಾಂಗೀರ್ ಜಿಲ್ಲೆಯವರು. ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಹುಟ್ಟಿದ್ದರು. ಅವರು ಕೇವಲ 8ನೇ ವಯಸ್ಸಿನಲ್ಲಿ ಆಕಸ್ಮಿಕ ವಿದ್ಯುತ್ ಅಪಘಾತದಿಂದ ತಮ್ಮ ನಾಲ್ಕು ಅಂಗಗಳನ್ನು ಕಳೆದುಕೊಂಡರು.  ಈ ದುರ್ಘಟನೆಯ ನಂತರವೂ ಅವರು ಧೈರ್ಯ  ಕಳೆದುಕೊಳ್ಳದೇ ಬದುಕನ್ನು ಹೊಸದಾಗಿ ಪ್ರಾರಂಭಿಸಿದರು.

ಅವರ ತಂದೆಯವರು ದಿನಗೂಲಿ ಗಾರೆ ಕೆಲಸವನ್ನು ಮಾಡುತ್ತಿದ್ದರು. ಆರ್ಥಿಕವಾಗಿಯೂ ಬಡತನದ  ಕುಟುಂಬದಿಂದ ಬಂದವರು, ಹೀಗಾಗಿ ತಮ್ಮ ಬಾಲ್ಯದ ಒಂದು ಭಾಗವನ್ನು ಅನಾಥಾಶ್ರಮದಲ್ಲಿ ಕಳೆಯಬೇಕಾಯಿತು. ಬಿಲ್ಲುಗಾರಿಕೆಯ ಮೊದಲು, ಪಾಯಲ್ ತನ್ನ ಬಾಯಿಯನ್ನು ಬಳಸಿ ಚಿತ್ರಿಸಲು ಕಲಿತರು. ಇದುವೇ ಮುಂದೆ ಬಿಲ್ಲುಗಾರಿಕೆಗೆ  ದಾರಿ ತೋರಿಸಿತು. ಕಾರ್ಯಕ್ರಮವೊಂದರಲ್ಲಿ ಪಾಯಲ್ ಅವರು ಸ್ಥಳೀಯ ಆಡಳಿತ ಅಧಿಕಾರಿಯೊಬ್ಬರ ಭಾವಚಿತ್ರವನ್ನು ಬಿಡಿಸಿದ್ದರು.ಈ ಚಿತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಖ್ಯಾತ ಆರ್ಚರಿ ಕೋಚ್ ಕುಲ್ದೀಪ್ ವೆದ್ವಾನ್ಅ ವರನ್ನೂ ಕೂಡ ತಲುಪಿತ್ತು. ನಂತರ ತಮ್ಮ ಕೋಚಿಂಗ್ ಅಕಾಡೆಮಿಗೆ ಕರೆತಂದು ಅವರಿಗಾಗಿ ವಿಶೇಷ ಕೃತಕ ಕಾಲುಗಳನ್ನು ಮಾಡಿಸಿ ಮಾರ್ಗದರ್ಶನ ಮಾಡಿದರು ಕುಲ್ದೀಪ್ ವೆದ್ವಾನ್ ಅವರು ಅಲ್ಲಿಂದ ಆಕೆಯ ಜೀವನವೇ ಬದಲಾಯಿತು.

ಶೀತಲ್ ದೇವಿಯವರಿಗೂ ಕೂಡ ಇವರೇ  ತರಬೇತುದಾರರಾಗಿದ್ದರು. ಪಾಯಲ್‌ನಾಗ್  ಅವರು ಬೆಳೆಸಿಕೊಂಡ ವಿಶೇಷವಾದ ಗಮನ, ಕುತ್ತಿಗೆ ನಿಯಂತ್ರಣ, ನಿಖರತೆಯಂತಹ ಕೌಶಲ್ಯಗಳು ಬಿಲ್ಲುಗಾರಿಕೆಯಲ್ಲಿ ಯಶಸ್ಸನ್ನು ಸಾಧಿಸಲು ನಿರ್ಣಾಯಕವಾದವು. ಪಾಯಲ್ ನಾಗ್ ಅವರು ಶೀತಲ್‌ದೇವಿಯವರ ಆರ್ಚರಿ ವಿಡಿಯೋಗಳನ್ನು ನೋಡುವ  ಮೂಲಕ ಸ್ಫೂರ್ತಿ ಪಡೆದು, ನಂತರ ತನ್ನಲ್ಲಿ ಕೆಲವು  ಬದಲಾವಣೆಗಳನ್ನು ಮಾಡಿಕೊಂಡು ಅವರನ್ನೇ ಸೋಲಿಸುವ ಮೂಲಕ ಚಿನ್ನವನ್ನು ಗೆದ್ದಿರುವುದು ಇನ್ನೊಂದು ವಿಶೇಷ ಸಂಗತಿಯಾಗಿದೆ.

 

ವಿಶೇಷ ದಾಖಲೆಗಳು: ವಿಶ್ವದ ಮೊದಲ ನಾಲ್ಕು ಅಂಗಗಳಿಲ್ಲದ ಆರ್ಚರಿ  ಆಟಗಾರ್ತಿಯರಲ್ಲಿ ಒಬ್ಬರು. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 18 ವಯಸ್ಸಿನಲ್ಲಿಯೇ ವಿಶ್ವ ಮಟ್ಟದಲ್ಲಿ ಚಿನ್ನ ಗೆದ್ದಿರುವುದು ತುಂಬಾ ಅಪರೂಪ. ಪ್ರೇರಣೆ: ಪಾಯಲ್ ನಾಗ್ ಅವರ ಜೀವನವು ನೀಡುವ ಪ್ರಮುಖ ಸಂದೇಶವೆಂದರೆ: ದೈಹಿಕ ಅಡಚಣೆಗಳು ಎಂದಿಗೂ ಕೂಡ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ. ಸಂಕಲ್ಪ, ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು.

ರಾಷ್ಟ್ರೀಯ ಮಟ್ಟದ ಸಾಧನೆಗಳು:  2025ರ ರಾಷ್ಟ್ರೀಯ  ಪ್ಯಾರಾ ಆರ್ಚರಿ ಚಾಂಪಿಯನ್ ಶಿಪ್‌ನಲ್ಲಿ 2ಚಿನ್ನದ ಪದಕಗಳು. 2026 ರಾಷ್ಟ್ರೀಯ ಸ್ಪರ್ಧೆಯಲ್ಲಿ ಹಲವಾರು ಪದಕಗಳು. ಖೇಲೋ ಇಂಡಿಯಾ ಪ್ಯಾರಾ ಗೇಮ್ಸ-2025ರಲ್ಲಿ ಸಿಲ್ವರ್ ಪದಕ ಪಡೆದಿರುತ್ತಾರೆ

ಭವಿಷ್ಯದ ಗುರಿಗಳು: 2026 ಏಷಿಯನ್  ಪ್ಯಾರಾ ಗೇಮ್ಸನಲ್ಲಿ ಭಾಗವಹಿಸುವ ಗುರಿ. 2028 ಪ್ಯಾರಾಲಿಂಪಿಕ್‌ನಲ್ಲಿ ಭಾರತಕ್ಕೆ ಚಿನ್ನ ತರುವ ಕನಸು. ಒಟ್ಟಾರೆಯಾಗಿ ಅಸಾಧ್ಯ ಎಂಬುದು ಒಂದು ಮಾನಸಿಕ ಸ್ಥಿತಿಯಾಗಿದ್ದು, ಅದರಿಂದ ಹೊರಬಂದು ನನ್ನಿಂದ ಸಾಧ್ಯ, ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಎಲ್ಲವನ್ನೂ
ಸಾಧ್ಯವಾಗಿಸಬಲ್ಲದು. ಪಾಯಲ್ ನಾಗ್ ಅವರ ಸಾಧನೆ ಮತ್ತು  ಜೀವನ ಚರಿತ್ರೆ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ. ಇದು ಧೈರ್ಯ, ಆತ್ಮವಿಶ್ವಾಸ ಮತ್ತು ಸಾಧನೆಗೆ ಪ್ರೇರಣೆ ನೀಡುವ ಜೀವನ ಕಥೆಯಾಗಿದೆ ಎಂದು ಹೇಳಬಹುದು.

 

ರಾಜು. ಭೂಶೆಟ್ಟಿ 

Please follow and like us:

 

 

 

 

 

Translate »
[t4b-ticker]
error: Content is protected !!