https://youtu.be/NHc6OMSu0K4?si=SI_K4goOPEgwo6h2

ವೇದಾಂತ ಮತ್ತು ವೈಶಾಖ ಇಬ್ಬರೂ ಸ್ನೇಹಿತರು. ವೇದಾಂತ ಶ್ರೀಮಂತ ಕುಟುಂಬದಿಂದ ಬಂದವನು. ವೈಶಾಖ ಬಡತನದಲ್ಲಿ ಬೆಳೆದವಳು. ಇಬ್ಬರೂ ಅಕ್ಕಪಕ್ಕದ ಮನೆಯವರು. ವೇದಾಂತ ಯಾವತ್ತೂ ಶ್ರೀಮಂತ ಅಂತ ಮೆರೆಯುತ್ತಿರಲಿಲ್ಲ. ವೈಶಾಖಳ ಜೊತೆ ಚೆನ್ನಾಗಿ ಮಾತನಾಡುತ್ತಿದ್ದ. ಅವನು ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ವೈಶಾಖ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದಳು. ಕಾಲೇಜಿನಲ್ಲಿ ಏನಾದರೂ ಉಪಯುಕ್ತ ಮಾಹಿತಿ ಸಿಕ್ಕರೆ ವೈಶಾಖಳಿಗೆ ಕೊಡುತ್ತಿದ್ದ. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು.
ಇದನ್ನೂ ಓದಿ:ಸ್ವಾವಲಂಬಿ ಬದುಕು ಕಲಿಸಿದ ಅಪ್ಪ
ವೇದಾಂತ ವೈಶಾಖಳೊಂದಿಗೆ ಸಲುಗೆಯಿಂದ ಇರುವುದು ಅವನ ತಾಯಿಗೆ ಇಷ್ಟವಿರಲಿಲ್ಲ. ವೈಶಾಖ ನೋಡಲು ಸುಂದರವಾಗಿದ್ದಳು, ಆದರೆ ಬಡ ಹುಡುಗಿ. ಮಗ ಏನಾದರೂ ದಾರಿ ತಪ್ಪಿದರೆ ಹೇಗೆ ಎಂಬ ಅಳುಕು ಅವರಿಗಿತ್ತು. ‘ನಮ್ಮ ಅಂತಸ್ತಿಗೆ ಅವಳು ಸರಿಯಾದವಳಲ್ಲ’ ಎನಿಸಿತ್ತು. ಹಾಗಾಗಿ ಅವಳಿಂದ ದೂರ ಇರುವಂತೆ ಮಗನಿಗೆ ಹೇಳಿದರು. ವೇದಾಂತ ಹಂತ ಹಂತವಾಗಿ ಅವಳಿಂದ ದೂರವಾದ. ವೇದಾಂತ ಕೊಡುತ್ತಿದ್ದ ನೋಟ್ಸ್ ಓದಿಕೊಳ್ಳುತ್ತಿದ್ದ ವೈಶಾಖ ಉತ್ತಮ ಅಂಕಗಳನ್ನು ಪಡೆದಳು. ಆದರೆ ವೇದಾಂತ ಈಗೀಗ ನೋಡಿದರೂ ನೋಡದಂತೆ ದೂರ ಸರಿಯುತ್ತಿದ್ದ. ಇದರಿಂದ ವೈಶಾಖಳಿಗೆ ತುಂಬಾ ಬೇಜಾರಾಯಿತು.
ಒಮ್ಮೆ ವೇದಾಂತನಿಗೆ ಬೈಕ್ ಅಪಘಾತವಾಗಿ ಆಸ್ಪತ್ರೆಗೆ ಸೇರಿಸಿದರು. ತಲೆಗೆ ಪೆಟ್ಟು ಬಿದ್ದು ತುಂಬಾ ರಕ್ತ ಹೋಗಿತ್ತು. ತುರ್ತಾಗಿ ರಕ್ತ ಬೇಕಾಗಿತ್ತು. ರಕ್ತನಿಧಿಯಲ್ಲಿ (Blood Bank) ಅವನ ಗುಂಪಿನ ರಕ್ತ ಇರಲಿಲ್ಲ. ಆಗ ವೈದ್ಯರು “ಯಾರಾದರೂ ನಿಮ್ಮ ಪರಿಚಿತರು ಗೊತ್ತಿದ್ದರೆ ಬೇಗನೇ ರಕ್ತ ಕೊಡಲು ಏರ್ಪಾಟು ಮಾಡಿ” ಎಂದರು. ಎಲ್ಲಾ ಕಡೆ ಹುಡುಕಾಡಿದರು, ವೇದಾಂತನಿಗೆ ಹೊಂದುವ ಗುಂಪಿನ ರಕ್ತ ಸಿಗಲೇ ಇಲ್ಲ. ಏನು ಮಾಡುವುದೆಂದು ತೋಚದೇ ಅಳುತ್ತಾ ಕುಳಿತರು.

ಅಪಘಾತವಾದ ವಿಷಯ ತಿಳಿದ ವೈಶಾಖ ಆಸ್ಪತ್ರೆಗೆ ಬಂದಳು. ಆಸ್ಪತ್ರೆಯಲ್ಲಿದ್ದ ವೇದಾಂತನ ಅಮ್ಮನನ್ನು ಕಂಡು “ಏನಾಯಿತು? ಹೇಗಾಯಿತು?” ಎಂದು ಮಾತನಾಡಿಸಿದಳು. ಆದರೆ ವೇದಾಂತನ ಅಮ್ಮ “ಛೀ ಭಿಕಾರಿ, ಇಲ್ಲಿಗ್ಯಾಕೆ ಬಂದೆ? ನಿನಗ್ಯಾಕೆ ನಮ್ಮ ಕುಟುಂಬದ ಉಸಾಬರಿ?” ಎಂದು ಬಾಯಿಗೆ ಬಂದಂತೆ ಬೈದು ಹೊರಗೆ ಕಳುಹಿಸಿದರು. ವೇದಾಂತನ ಅಪ್ಪ ಎಲ್ಲಾ ವಿಷಯವನ್ನು ತಿಳಿಸಿದರು. ತಲೆಗೆ ಪೆಟ್ಟು ಬಿದ್ದಿರುವುದರಿಂದ ತುಂಬಾ ರಕ್ತ ಹೋಗಿದೆ, ತುರ್ತಾಗಿ ರಕ್ತ ಬೇಕು, ಆದರೆ ಎಲ್ಲೂ ಅವನ ಗುಂಪಿನ ರಕ್ತ ಸಿಗುತ್ತಿಲ್ಲ ಎಂದು ನೊಂದು ನುಡಿದರು.
ಆಗ ವೈಶಾಖ “ಯಾವ ಗುಂಪಿನ ರಕ್ತ ಅಂಕಲ್?” ಎಂದಳು. “ಓ ಪಾಸಿಟಿವ್” ಎಂದರು. “ನನ್ನದೂ ಅದೇ ಗುಂಪು. ನಿಮಗೆ ಅಭ್ಯಂತರ ಇಲ್ಲದಿದ್ದರೆ ನಾನು ರಕ್ತ ಕೊಡುವೆ” ಎಂದಳು ವೈಶಾಖ. ಅದಕ್ಕೆ ಅವರು ಒಪ್ಪಿದರು. ಕೂಡಲೇ ಅವಳ ರಕ್ತ ಪಡೆದು ವೇದಾಂತನಿಗೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಮಾಡಿದರು.
ಸಕಾಲದಲ್ಲಿ ರಕ್ತದ ವ್ಯವಸ್ಥೆಯಾಗಿದ್ದರಿಂದ ಜೀವಕ್ಕೆ ತೊಂದರೆಯಿಲ್ಲ ಎಂದರು ವೈದ್ಯರು. ಆಗ ವೇದಾಂತನ ಅಮ್ಮನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಸ್ವಲ್ಪ ದಿನಗಳ ನಂತರ ವೇದಾಂತ ಮನೆಗೆ ಬಂದನು. ಮನೆಗೆ ಬಂದ ದಿನ ವೈಶಾಖಳನ್ನು ಭೇಟಿಯಾಗಿ ಕ್ಷಮೆ ಕೇಳಿದ. ಯಾಕೆ ಎಂದಿದ್ದಕ್ಕೆ “ನಿನ್ನ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನಿಂದ ತುಂಬಾ ದೊಡ್ಡ ತಪ್ಪಾಗಿದೆ, ನನ್ನನ್ನು ಕ್ಷಮಿಸು” ಎಂದನು. ವೈಶಾಖ ಏನನ್ನೂ ಮಾತನಾಡದೇ ಒಳಗೆ ಹೋದಳು. ಹೋಗುವಾಗ ಕೊನೆಯದಾಗಿ ಒಂದು ಮಾತು ಹೇಳಿದಳು: “ಜೀವನದಲ್ಲಿ ಏನೋ ಕಳೆದುಕೊಂಡೆ ಎಂದು ದುಃಖಿಸಬೇಡ. ಬದಲಾಗಿ ಮುಂದೆ ಸಿಗುವುದು ಅದಕ್ಕಿಂತ ಜಾಸ್ತಿ ಖುಷಿ ಕೊಡುತ್ತೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ, ಖುಷಿಯಾಗಿರು” ಎಂದಷ್ಟೇ ಹೇಳಿದಳು.
ಕೆಲವರ ಗುಣ ಗೊತ್ತಾದಾಗ ನಾವೇ ಬದಲಾಗಬೇಕೇ ಹೊರತು, ಅವರನ್ನು ಬದಲಾಯಿಸಲು ಹೋಗಬಾರದು. ಕೆಲವರು ನಮ್ಮನ್ನು ನಿರ್ಲಕ್ಷಿಸುತ್ತಾರೆ ಎಂದರೆ ನಮ್ಮ ಬೆಲೆ ಕಡಿಮೆಯಾಗಿದೆ ಎಂದಲ್ಲ; ನಿರ್ಲಕ್ಷಿಸುವವರಿಗೆ ನಿಯತ್ತಿಲ್ಲ ಎಂದರ್ಥ. ಬಡತನ, ಸಿರಿತನ ಎಂಬ ಅಹಂ ಎಲ್ಲಿಯವರೆಗೆ ಇರುತ್ತದೋ, ಅಲ್ಲಿಯವರೆಗೆ ಇಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.
– ಜಯಶ್ರೀ ಎಂ. ಕರ್ಜಗಿ, ಹುಬ್ಬಳ್ಳಿ 



More Stories
ಸ್ನೇಹಿತರ ಹಿತವಚನ ಪಾಲಿಸಿ
ಬದುಕು ಬದಲಿಸುವ ಕಥೆಗಳು
ಅಮಂಡಾ ನವೇನ್ ಧೀಮಂತ ಹೋರಾಟ