https://youtu.be/NHc6OMSu0K4?si=SI_K4goOPEgwo6h2

ಒಂದು ಪುಟ್ಟ ಮನೆಯಲ್ಲಿ ಕಪ್ಪು ಇರುವೆ ಮತ್ತು ಕೆಂಪು ಇರುವೆಗಳು ವಾಸಿಸುತ್ತಿದ್ದವು. ಅವು ಬಹಳ ಅನ್ಯೋನ್ಯತೆಯಿಂದ ಮತ್ತು ಪ್ರೀತಿಯಿಂದ ಬಾಳುತ್ತಿದ್ದವು. ಆದರೆ, ಕಪ್ಪು ಇರುವೆ ಸ್ವಲ್ಪ ಜಂಭದಿಂದ ಕೂಡಿತ್ತು. ಕೆಂಪು ಇರುವೆ ಮಾತ್ರ ಕಪ್ಪು ಇರುವೆಯನ್ನು ಬಹಳ ಪ್ರೀತಿಯಿಂದ ಕಾಣುತ್ತಿತ್ತು.
ಒಂದು ದಿನ ಈ ಎರಡು ಇರುವೆಗಳು ಸೀತಮ್ಮನ ಅಡುಗೆ ಮನೆ ಪ್ರವೇಶಿಸಿದವು. ಅಲ್ಲಿದ್ದ ಸಕ್ಕರೆ ಡಬ್ಬಿಯನ್ನು ನೋಡಿ ಅವುಗಳಿಗೆ ಬಹಳ ಖುಷಿಯಾಯಿತು. ನಿಧಾನವಾಗಿ ಎರಡೂ ಇರುವೆಗಳು ಡಬ್ಬಿಯೊಳಗೆ ಇಳಿದವು. ಅಲ್ಲಿನ ಸಕ್ಕರೆಯನ್ನು ಕಂಡು ತಮ್ಮ ಸೈನ್ಯವನ್ನೂ ಸಹ ಕರೆದವು. ಸಾಲಾಗಿ ಬಂದ ಇರುವೆಗಳೆಲ್ಲ ಡಬ್ಬಿಗೆ ಇಳಿದು ಸಕ್ಕರೆಯನ್ನು ತಿನ್ನಲು ಪ್ರಾರಂಭಿಸಿದವು.
ಇದನ್ನೂ ಓದಿ: ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು
ಹೊಟ್ಟೆ ತುಂಬಾ ತಿಂದ ಕೆಂಪು ಇರುವೆ, “ಗೆಳೆಯ ಸಾಕು, ಇನ್ನು ಹೋಗೋಣ ಬಾ,” ಎಂದು ಕಪ್ಪು ಇರುವೆಗೆ ಹೇಳಿತು. ಆದರೆ ಇನ್ನೂ ತಿನ್ನುವುದರಲ್ಲಿ ಮಗ್ನವಾಗಿದ್ದ ಕಪ್ಪು ಇರುವೆ ಜಂಭದಿಂದ ಕೆಂಪು ಇರುವೆಯ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಬೇಸತ್ತ ಕೆಂಪು ಇರುವೆ ತನ್ನ ಸೈನ್ಯವನ್ನು ಕರೆದುಕೊಂಡು ಅಲ್ಲಿಂದ ಹೊರಟಿತು. ಆದರೂ ಕೆಲವು ಇರುವೆಗಳು ಸಕ್ಕರೆಯ ಆಸೆಗೆ ಬಿದ್ದು ಅಲ್ಲೇ ಉಳಿದವು.

ಅಷ್ಟರಲ್ಲಿ ಸೀತಮ್ಮ ಅಡುಗೆ ಮನೆಗೆ ಬಂದಳು. ಹಾಲನ್ನು ಕಾಯಿಸಲು ಪಾತ್ರೆಯನ್ನು ಒಲೆಯ ಮೇಲಿಟ್ಟಳು. ಹಾಲು ಕುದಿಯುತ್ತಿದ್ದಂತೆ ಸಕ್ಕರೆ ಡಬ್ಬಿಯಿಂದ ಸಕ್ಕರೆಯನ್ನು ತೆಗೆದು ಹಾಲಿಗೆ ಹಾಕಿದಳು. ಸಕ್ಕರೆಯೊಂದಿಗೆ ಡಬ್ಬಿಯಲ್ಲಿದ್ದ ಇರುವೆಗಳೂ ಹಾಲಿನ ಪಾತ್ರೆಗೆ ಬಿದ್ದವು. ಹಾಲು ಬಿಸಿಯಾಗುತ್ತಿದ್ದಂತೆ ಇರುವೆಗಳು ಶಾಖದಿಂದ ತತ್ತರಿಸತೊಡಗಿದವು. ಅವು ಪಾತ್ರೆಯಿಂದ ಹೊರಬರಲು ಬಹಳ ಪ್ರಯತ್ನಿಸಿದವು. ಆ ಇರುವೆಗಳ ಗುಂಪಿನಲ್ಲಿ ಕಪ್ಪು ಇರುವೆಯೂ ಇತ್ತು.
ಇದನ್ನೆಲ್ಲಾ ಹತ್ತಿರದಿಂದ ನೋಡುತ್ತಿದ್ದ ಕೆಂಪು ಇರುವೆಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಕಪ್ಪು ಇರುವೆ ಚೀರುತ್ತಾ, “ಗೆಳೆಯನೇ, ಏನಾದರೂ ಮಾಡಿ ನನ್ನನ್ನು ಬದುಕಿಸು, ಇಲ್ಲದಿದ್ದರೆ ನನ್ನ ಸಾವು ಖಂಡಿತ!” ಎಂದು ಬೇಡಿಕೊಂಡಿತು. ಆದರೆ ಕೆಂಪು ಇರುವೆ ಅಸಹಾಯಕವಾಗಿತ್ತು. ಅದಕ್ಕೆ ತನ್ನ ಬಳಗವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇರುವೆಗಳೆಲ್ಲ ಕುದಿಯುವ ಹಾಲಿನಲ್ಲಿ ನರಳಿ ಸಾವನ್ನಪ್ಪಿದವು.
“ಸ್ನೇಹಿತರೇ, ನನ್ನ ಮಾತು ಕೇಳಿದ್ದರೆ ನೀವೆಲ್ಲ ಹೀಗೆ ಅನ್ಯಾಯವಾಗಿ ಸಾಯುತ್ತಿರಲಿಲ್ಲ,” ಎಂದು ಕೆಂಪು ಇರುವೆ ಕಂಬನಿ ಮಿಡಿಯಿತು. ತನ್ನ ಸ್ನೇಹಿತನನ್ನು ಕಳೆದುಕೊಂಡು ದುಃಖಿಸುತ್ತಿದ್ದ ಕೆಂಪು ಇರುವೆಗೆ ಅದರ ಸೈನಿಕ ಇರುವೆ ಸಾಂತ್ವನ ಹೇಳುತ್ತಾ, “ಇನ್ನು ಮುಂದೆ ನಾನು ನಿನ್ನ ಸ್ನೇಹಿತನಾಗಿರುತ್ತೇನೆ, ನೀನು ಹೇಳಿದಂತೆ ಕೇಳುತ್ತೇನೆ, ಬಾ ಹೋಗೋಣ,” ಎಂದಿತು. ಸ್ನೇಹಿತನ ಪ್ರೀತಿಯ ಎಚ್ಚರಿಕೆಯನ್ನು ತಪ್ಪಾಗಿ ತಿಳಿದುಕೊಂಡ ಕಪ್ಪು ಇರುವೆ ಆಸೆಗೆ ಬಿದ್ದು ಅನ್ಯಾಯವಾಗಿ ಸಾವನ್ನಪ್ಪಿತ್ತು. ಯಾವುದೇ ಸಂದರ್ಭದಲ್ಲೂ ಹಿತೈಷಿ ಸ್ನೇಹಿತರ ಮಾತನ್ನು ಕೇಳಬೇಕು ಎಂಬುದು ಇದರಿಂದ ತಿಳಿಯುತ್ತದೆ.
ಕೆ. ಉಷಾ 
೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಬಸರಕೋಡು.
ಹಗರಿಬೊಮ್ಮನಹಳ್ಳಿ (ತಾ),



More Stories
ಆಪತ್ತಿನಲ್ಲಿ ಆದವನೇ ನಿಜವಾದ ಸ್ನೇಹಿತ
ಬದುಕು ಬದಲಿಸುವ ಕಥೆಗಳು
ಅಮಂಡಾ ನವೇನ್ ಧೀಮಂತ ಹೋರಾಟ