https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಕೊಟ್ಟೂರು
12ನೇ ಶತಮಾನದ ವಚನ ಸಾಹಿತ್ಯವು ಕೇವಲ ಒಂದು ಸಾಹಿತ್ಯ ಪ್ರಕಾರವಾಗಿ ಉಳಿಯದೆ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ಶ್ರೇಷ್ಠ ಸಾಮಾಜಿಕ ಕ್ರಾಂತಿಯಾಗಿದೆ. ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ಸಮಾನತೆ, ಕಾಯಕ, ದಾಸೋಹ, ಸದಾಚಾರ ಮತ್ತು ಮಹಿಳಾ ಸಬಲೀಕರಣದಂತಹ ಸುಸ್ಥಿರ ಸಮಾಜಕ್ಕೆ ಅಗತ್ಯವಿರುವ ಪ್ರಮುಖ ಅಂಶಗಳು ಅಡಗಿವೆ ಎಂದು ಕುರುಗೋಡು ಸರಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಅಭಿಪ್ರಾಯಪಟ್ಟರು.

ಪಟ್ಟಣದ ಪಂಚಮಸಾಲಿ ಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮಹಾಮನೆಯ ಲಿಂ. ಶರಣಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು. ಶರಣರ ವಚನಗಳನ್ನು ಕೇವಲ ಸಾಹಿತ್ಯದ ದೃಷ್ಟಿಯಿಂದ ನೋಡದೆ, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಶರಣರು ಜಾತಿ ಮತ್ತು ಲಿಂಗ ಭೇದವನ್ನು ಸಂಪೂರ್ಣವಾಗಿ ನಿರಾಕರಿಸುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಬಸವಣ್ಣನವರ ವಿಶ್ವ ಮಾನವ ಸಂದೇಶ ಮತ್ತು ಕಾಯಕವೇ ಕೈಲಾಸ ಎಂಬ ತತ್ವಗಳು ಮನುಷ್ಯನ ಬದುಕಿಗೆ ದಾರಿದೀಪವಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ಮಾತನಾಡಿ, ಪರಿಷತ್ತಿನ ಮೂಲಕ ಶರಣರ ವಚನಗಳ ಶ್ರೇಷ್ಠತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಮನಿ ಕರಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ಕೆ.ಎಸ್. ಸ್ನೇಹಾ, ಶಿಕ್ಷಕ ಕೆ.ಟಿ. ಸಿದ್ದರಾಮೇಶ್ ಹಾಗೂ ಪರಿಷತ್ ಪ್ರಧಾನ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್