March 4, 2026

Hampi times

Kannada News Portal from Vijayanagara

ಸಮೃದ್ಧ ಭಾರತಕ್ಕೆ ವಿಜಯನಗರ ಪ್ರೇರಣೆ: ಸಚಿವೆ ನಿರ್ಮಲ ಸೀತಾರಾಮನ್

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಹೊಸಪೇಟೆ

ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಸಮೃದ್ಧಿಯ ಆದರ್ಶದೊಂದಿಗೆ 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಂಪನಿ ವ್ಯವಹಾರಗಳ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದರು.

ಭಾನುವಾರ ಕಮಲಾಪುರ ಸಮೀಪದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಹುಣಸೆ, ಸೀತಾಫಲ, ಲಕ್ಷಣಫಲ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕಂಪನಿ ವ್ಯವಹಾರಗಳು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವರಾದ ಹರ್ಷ ಮಲ್ಹೋತ್ರಾ, ಸಂಸದರಾದ ಈ. ತುಕಾರಾಂ, ಶಾಸಕರಾದ ಹೆಚ್.ಆರ್. ಗವಿಯಪ್ಪ ಹಾಗೂ ಡಾ. ಎನ್.ಟಿ. ಶ್ರೀನಿವಾಸ್ ಅವರು ಸಚಿವೆಯವರೊಂದಿಗೆ ಸಸಿಗಳನ್ನು ನೆಟ್ಟು ನೀರೆರೆದರು.

 

ನಂತರ ಕಮಲಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿದ ಸಚಿವರು, ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದರು. ಈ ಲಸಿಕಾ ಅಭಿಯಾನದಲ್ಲಿ ಸಂಸದ ಈ. ತುಕಾರಾಂ ಹಾಗೂ ಶಾಸಕರಾದ ಹೆಚ್.ಆರ್. ಗವಿಯಪ್ಪ ಮತ್ತು ಡಾ. ಎನ್.ಟಿ. ಶ್ರೀನಿವಾಸ್ ಅವರು ಕೂಡ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕೈಜೋಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಮುಂದಿನ ಬಜೆಟ್ ಮಂಡನೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಹಣಕಾಸು ಇಲಾಖೆಯ 120 ಅಧಿಕಾರಿಗಳ ತಂಡದೊಂದಿಗೆ ಹಂಪಿಯಲ್ಲಿ ನಡೆಸಿದ ಚಿಂತನ ಮಂಥನ ಸಭೆಯು ಅತ್ಯಂತ ಅರ್ಥಪೂರ್ಣವಾಗಿದೆ. ವಿಜಯನಗರದ ‘ಎಲ್ಲರಿಗೂ ಸಮೃದ್ಧಿ’ ಎಂಬ ಸಂದೇಶವನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಲಾಗುವುದು,” ಎಂದರು.

ಇದೇ ವೇಳೆ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ನಾಗರಾಜು ಮದ್ದೀರಲಾ, ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ರವಿ ಅಗರ್ವಾಲ್, ಹಣಕಾಸು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅನುರಾಧ ಠಾಕೂರ್, ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿ ಅನಿವೃದ್ದ ಶ್ರವಣ್ ಪಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ ಕೆ. ಮೋಸಸ್ ಚಲೈ ಹಾಗೂ ಕಂಪನಿ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದೀಪ್ತಿ ಗೌರ್ ಮುಖರ್ಜಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿಷಾ, ಜಿಲ್ಲಾ ರಕ್ಷಣಾಧಿಕಾರಿ ಎಸ್. ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಹಾಗೂ ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:

 

 

 

 

 

Translate »
[t4b-ticker]
error: Content is protected !!