
ಹಂಪಿ ಟೈಮ್ಸ್ ಕೊಪ್ಪಳ
ಸಾರ್ವಜನಿಕ ಹಿತಾಸಕ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂಮಿ ಒದಗಿಸುವುದು ಹಾಗೂ ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸುವುದು ಆಡಳಿತದ ಆದ್ಯತೆಯಾಗಿದ್ದು, ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಜಮೀನು ಮತ್ತು ನಿವೇಶನ ಸಮಸ್ಯೆಗಳನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಕ್ಟೋಬರ್ 16ರಂದು ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳಲ್ಲಿ ಜಮೀನು ಮತ್ತು ನಿವೇಶನಗಳ ಅವಶ್ಯಕತೆ ಹಾಗೂ ಸಮಸ್ಯೆಗಳ ಕುರಿತ ಅಂತರ ಇಲಾಖಾ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಗುರುತಿಸಲಾಗಿರುವ ನಿವೇಶನಗಳ ಗಡಿ ಗುರುತಿಸುವಿಕೆ (ಹದ್ದುಬಸ್ತು), ಸರ್ವೇ ಕಾರ್ಯ ಹಾಗೂ ದಾಖಲೆಗಳ ವರ್ಗಾವಣೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು. ನಿಯಮಾನುಸಾರ ದಾಖಲೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ, ಜಮೀನು ಮಂಜೂರಾತಿಗೆ ಸಂಬಂಧಿಸಿದ ಯಾವುದೇ ಕಡತಗಳು ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿ ಅನಗತ್ಯವಾಗಿ ಬಾಕಿ ಉಳಿಯದಂತೆ ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ತಾಕೀತು ಮಾಡಿದರು.

ಗ್ರಾಮೀಣ ಘನತ್ಯಾಜ್ಯ ನಿರ್ವಹಣಾ ಘಟಕಗಳು, ಶಾಲಾ-ಕಾಲೇಜುಗಳು, ಸಾರಿಗೆ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಇಲಾಖೆಗಳಿಗೆ ಅಗತ್ಯವಿರುವ ಭೂಮಿಯನ್ನು ಸಮರ್ಪಕವಾಗಿ ಪರಿಶೀಲಿಸಿ ನಿಯಮಾನುಸಾರ ಒದಗಿಸಬೇಕು. ಪ್ರಮುಖವಾಗಿ ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಗಳ ಭೂಮಿಯನ್ನು ಆಯಾ ಶಾಲೆಯ ಹೆಸರಿಗೆ ನೋಂದಾಯಿಸುವ ಪ್ರಕ್ರಿಯೆಯನ್ನು ಶಿಕ್ಷಣ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಚುರುಕುಗೊಳಿಸಬೇಕು ಎಂದು ನಿರ್ದೇಶಿಸಿದರು.
ಇದೇ ವೇಳೆ ಜಿಲ್ಲೆಯ ಮುಜರಾಯಿ ಇಲಾಖೆ ಹಾಗೂ ವಕ್ಫ್ ಮಂಡಳಿಗೆ ಸೇರಿದ ಸ್ಥಿರಾಸ್ತಿಗಳ ವಿವರಗಳನ್ನು ಕಂದಾಯ ದಾಖಲೆಗಳೊಂದಿಗೆ ಪರಿಶೀಲಿಸಿ ಕಾಲೋಚಿತಗೊಳಿಸಬೇಕು. ಈ ಆಸ್ತಿಗಳ ಪಹಣಿ ಮತ್ತು ನಕ್ಷೆಗಳನ್ನು ನವೀಕರಿಸುವುದರ ಜೊತೆಗೆ ಎಲ್ಲೆಲ್ಲಿ ಅತಿಕ್ರಮಣವಾಗಿದೆಯೋ ಅಂತಹ ಜಾಗಗಳನ್ನು ಯಾವುದೇ ಮುಲಾಜಿಲ್ಲದೆ ಕಾನೂನು ಪ್ರಕಾರ ತೆರವುಗೊಳಿಸಿ, ಆಸ್ತಿಗಳಿಗೆ ತಂತಿ ಬೇಲಿ ಅಥವಾ ರಕ್ಷಣಾ ಗೋಡೆ ನಿರ್ಮಿಸಿ ಸುರಕ್ಷಿತವಾಗಿ ಸಂರಕ್ಷಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಸಹಾಯಕ ಆಯುಕ್ತ ಮಹೇಬೂಬ್ ಜೀಲಾನಿ ಖುರೇಶಿ, ಎನ್.ಹೆಚ್.ಎ.ಐ., ರೈಲ್ವೇ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


More Stories
ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕರೆ
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ