October 16, 2026

Hampi times

Kannada News Portal from Vijayanagara

ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕರೆ

ಹಂಪಿ ಟೈಮ್ಸ್‌ ಹೊಸಪೇಟೆ

ನವೆಂಬರ್ 1ರಂದು ಜರುಗಲಿರುವ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕನ್ನಡಾಭಿಮಾನಿಗಳು, ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಂಡು ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನವೆಂಬರ್ 1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಸಕಲ ಗೌರವಗಳೊಂದಿಗೆ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಸಿದ್ಧತೆ ಮಾಡಿಕೊಳ್ಳಬೇಕು. ಅಂದು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಬೇಕು. ಸರ್ಕಾರಿ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಗೌರವಪೂರ್ವಕವಾಗಿ ಆಹ್ವಾನಿಸಬೇಕು ಎಂದು ಸೂಚಿಸಿದರು. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

ತುರ್ತು ಸೇವೆಗಾಗಿ ಆಂಬುಲೆನ್ಸ್ ಹಾಗೂ ಆರೋಗ್ಯ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಬೇಕು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ಶೇ. 60 ಕನ್ನಡ ಬಳಕೆ ಕಡ್ಡಾಯಕ್ಕೆ ಮನವಿ: ಸಭೆಯಲ್ಲಿ ಕನ್ನಡಪರ ಮುಖಂಡರು ಮಾತನಾಡಿ, ಅನಂತಶಯನಗುಡಿ ಮೇಲ್ಸೇತುವೆಗೆ ‘ಶ್ರೀಕೃಷ್ಣದೇವರಾಯ’ರ ಹೆಸರಿಡಬೇಕು ಹಾಗೂ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಾಯಿ ಭುವನೇಶ್ವರಿ ದೇವಿಯ ವೃತ್ತ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಕೆಲವು ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಇಂದಿಗೂ ಶೇ.60ರಷ್ಟು ಕಡ್ಡಾಯ ಕನ್ನಡ ಬಳಕೆ ಜಾರಿಯಾಗುತ್ತಿಲ್ಲ, ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕ ದೀಪಾಲಂಕಾರ, ಕನ್ನಡ ಧ್ವಜ ಮತ್ತು ತೋರಣಗಳನ್ನು ಅಳವಡಿಸಿ ಹಬ್ಬದ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಸೇರಿದಂತೆ ಪ್ರಸ್ತಾಪಿಸಲಾದ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Please follow and like us: