October 11, 2026

Hampi times

Kannada News Portal from Vijayanagara

ಕೆಲಸದವಳು “ಅಮ್ಮಾ ನಾಳೆ ಬರಲ್ಲ”: ಒಂದೇ ಮಾತಿಗೆ ತಲೆಕೆಳಗಾಯ್ತು ಇಡೀ ಸಂಸಾರ! : ನಂದಿನಿ ಸನಬಾಳ

ಇವತ್ತು ಮನೆಕೆಲಸದವಳು ಬಂದಿಲ್ಲ…

“ಅಮ್ಮ, ನಾನು ನಾಳೆ ಕೆಲಸಕ್ಕೆ ಬರಲ್ಲ…”

ಈ ಮಾತು ಕೇಳಿದೊಡನೆ ಆಕಾಶವೇ ತಲೆಮೇಲೆ ಬಿದ್ದಂತೆ ಮನೆಯೊಡತಿಯ ಹಾವಭಾವ ಬದಲಾಯಿತು.

ಸಂಜೆ ಯಜಮಾನರು ಮನೆಗೆ ಬಂದಾಗ ಎಲ್ಲವೂ ಎಂದಿನಂತೆ ಇರಲಿಲ್ಲ. ದಿನಾ ಖುಷಿಯಿಂದ ಇರುತ್ತಿದ್ದ ಹೆಂಡತಿಯ ಮುಖ ಕೆಂಡಾಮಂಡಲವಾಗಿತ್ತು. ಅಡುಗೆಮನೆಯಲ್ಲಿ ಗಂಡ ಪ್ರೀತಿಯಿಂದ ಹೆಂಡತಿಯೊಂದಿಗೆ ಮಾತನಾಡಲು ಹೋದಾಗ, ಆಕೆ ಗಂಡನಿಗೆ ಏನೂ ಉತ್ತರಿಸದೆ, “ನಾಳೆ ಬೆಳಗ್ಗೆ ಎಲ್ಲರೂ ಬೇಗ ಏಳಬೇಕು, ನಿಮ್ಮ ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಬೇಕು” ಎಂದಳು.

ಏನೂ ತೋಚದ ಯಜಮಾನ, “ಟೀ ಕೊಡು” ಎನ್ನುತ್ತಿರುವಾಗಲೇ ಕೋಪದಲ್ಲಿ ರುಚಿಯಿಲ್ಲದ ಟೀ ಬಂತು; ಆತ ಸುಮ್ಮನೆ ಕುಡಿದುಬಿಟ್ಟ.

ರಾತ್ರಿ ಊಟಕ್ಕೆ ಅನ್ನ-ಸಾರು ಮಾತ್ರ ಇತ್ತು. ಹೆಂಡತಿಯ ಮುಖದಲ್ಲಿ ಇನ್ನೂ ಕೋಪ ಹಾಗೆಯೇ ಇತ್ತು. ಕೇಳಲಿಕ್ಕೂ ಧೈರ್ಯವಾಗದೆ ಒದ್ದಾಡುತ್ತಿದ್ದ ಬಡಪಾಯಿ, ರಾತ್ರಿ ಮಲಗುವಾಗ ಮಾತಾಡಿಸಲು ಹೋದರೆ, “ಸುಮ್ಮನೆ ಮಲಗಿ, ಬೇಗ ಎದ್ದು ಮಕ್ಕಳಿಗೆ ನೀವೇ ರೆಡಿ ಮಾಡಿ” ಎಂದಳು.

“ಯಾಕೆ?”

“ನಾಳೆ ಕೆಲಸದವಳು ಬರಲ್ಲ!”

“ಓಹ್, ಇದಾ ವಿಷಯ… ಯಪ್ಪಾ, ಸತ್ತೆ ನಾನು!”

ಬೆಳಗಾಯಿತು. ದಿನಾ ಪ್ರೀತಿಯಿಂದ ಕಾಫಿ ಕೊಡುವ ಹೆಂಡತಿಯ ಬದಲಿಗೆ ಜೋರಾದ ಅಲಾರಾಂ ಶಬ್ದ. ಹೊರಗೆ ಬಂದು ನೋಡಿದರೆ ಅಮ್ಮನ ಹಳೇ ಕಾಲದ ಮೂರು ಚುಕ್ಕಿಯ ರಂಗೋಲಿ ಚದುರಿಹೋಗಿತ್ತು. ಅಪ್ಪ ತರಕಾರಿ ಸೋಸುತ್ತಿದ್ದರು. ಗಾಬರಿಗೊಂಡ ಗಂಡ ಗಡಿಬಿಡಿಯಲ್ಲಿ ಪಾತ್ರೆ ತೊಳೆಯಲು ಪ್ರಾರಂಭಿಸಿದ. ಅಮ್ಮ ದೇವರ ಪೂಜೆ ಮುಗಿಸಿ ಅಡುಗೆಮನೆಗೆ ಬರುವಷ್ಟರಲ್ಲಿ ಮಗ ಪಾತ್ರೆ ತೊಳೆಯುತ್ತಿರುವುದನ್ನು ಕಂಡು, “ಅಮ್ಮಾ…” ಎನ್ನುವಷ್ಟರಲ್ಲಿ ಹೆಂಡತಿಯ ಎಂಟ್ರಿ ಆಯಿತು. “ಈಗ ಸೊಸೆಯ ಕಾಟ ಬೇಡಪ್ಪ” ಎನ್ನುತ್ತ ಅಮ್ಮ ಅಲ್ಲಿಂದ ಕಾಲ್ಕಿತ್ತರು.

ಇನ್ನು ಕಸ ಗುಡಿಸುವಾಗ ಅಪ್ಪ ಎದುರಿಗೇ ಇದ್ದರೂ ಯಾವುದೇ ಸಹಾಯ ಮಾಡದೆ ಮುಗುಳ್ನಗುತ್ತ ನಿಂತಿದ್ದರು. “ಅಪ್ಪಾ…” ಎಂದಾಗ, “ನಾನು ಸಾಕಷ್ಟು ಬಾರಿ ಕಸ ಗುಡಿಸಿ ಅನುಭವ ಇದೆ ಮಗನೇ, ಈಗ ನಿನ್ನ ಸರದಿ” ಎನ್ನುತ್ತ ಅವರೂ ಜಾಗ ಖಾಲಿ ಮಾಡಿದರು.

ಅಷ್ಟರಲ್ಲಿ ಸಕ್ಕರೆಗಾಗಿ ಬಂದ ಪಕ್ಕದ ಮನೆಯ ಜ್ಯೋತಿ, ದಿನಾ ಲೈನ್ ಹೊಡೆಯುತ್ತ ಹೋಗುತ್ತಿದ್ದ ರಾಮ್ ಕಸ ಹೊಡೆಯುತ್ತಿರುವುದನ್ನು ನೋಡಿ, “ಅಯ್ಯೋ, ಹೀರೋ ಮನೇಲಿ ಝೀರೋನಾ?” ಎನ್ನುತ್ತ ಅಲ್ಲೇ ಟೀ ಕುಡಿಯುತ್ತ ರೇಗಿಸಿದ್ದು ಈತನಿಗೆ ಎಲ್ಲಿಲ್ಲದ ಮುಜುಗರ ತಂದಿಟ್ಟಿತು.

ಅಡುಗೆಮನೆಯಲ್ಲಿ ಜೋರಾದ ಶಬ್ದ, ಎಲ್ಲರೂ ಗಡಿಬಿಡಿಯಲ್ಲಿದ್ದರು. “ಅಮ್ಮಾ, ಯೂನಿಫಾರ್ಮ್ ಹಾಕು” ಎಂದು ಮಗ ಕೇಳಿದಾಗ, “ನಿಮ್ಮಪ್ಪ ಹಾಕ್ತಾರೆ, ಹೋಗು” ಎಂದಳು. ಅಪ್ಪ ಯೂನಿಫಾರ್ಮ್ ಹಾಕಿದರು… ಅದು ಹೇಗೆ ಗೊತ್ತೇ? ಧರಿಸಿದ್ದ ಮನೆ ಉಡುಪನ್ನು ಬದಲಾಯಿಸದೆ, ಚಡ್ಡಿ ಮೇಲೆಯೇ ಚಡ್ಡಿ ಹಾಕಿದ ಅಪ್ಪ!

“ಅಮ್ಮಾ, ತಲೆಯಾದರೂ ಬಾಚು” ಎನ್ನುವಾಗ, “ನೀನು ನನ್ನ ಮಗ ಮಾತ್ರವಲ್ಲಪ್ಪ, ನಿನ್ನ ಜನುಮಕ್ಕೆ ನಿಮ್ಮಪ್ಪನದೂ ಸಮಾನ ಪಾತ್ರವಿದೆ. ಹೋಗಿ ಅಲ್ಲೇ ತಲೆ ಬಾಚಿಸಿಕೊ” ಎಂದಳು. ಪರಿಣಾಮ: ಒಂದು ಜಡೆ ಮೇಲೆ, ಇನ್ನೊಂದು ಜಡೆ ಕೆಳಗೆ!

“ತಿಂಡಿ ಏನಿದೆ?”

“ಅನ್ನ-ಸಾರು.”

“ಮಧ್ಯಾಹ್ನದ ಲಂಚ್‌ಗೆ?”

“ಅನ್ನ-ಸಾರು!”

“ಸರಿ, ನನ್ನ ಬಟ್ಟೆ ಕೊಡು, ಆಫೀಸ್ ಟೈಮ್ ಆಯ್ತು” ಎಂದಾಗ, “ನಿಮ್ಮ ಬಟ್ಟೆ ನೀವೇ ನೋಡಿಕೊಳ್ಳಿ” ಎಂದಳು.

ಆಫೀಸ್‌ಗೆ ಹೋದದ್ದು ಒಂದೂವರೆ ಗಂಟೆ ತಡವಾಗಿ. ದಿನಾ ಹೀರೋನಂತೆ ಬರುತ್ತಿದ್ದ ರಾಮ್‌ಗೆ ಅಂದು ಯಾರೂ ವಿಶ್ ಮಾಡಲಿಲ್ಲ. ಕಾರಣ: ಇಸ್ತ್ರಿ ಇಲ್ಲದ ಬಟ್ಟೆ, ಗಡಿಬಿಡಿಯಲ್ಲಿ ಹಾಕಿಕೊಂಡ ಸ್ಲಿಪ್ಪರ್, ಕೂಲಿಂಗ್ ಗ್ಲಾಸ್ ಬದಲಿಗೆ ಅಪ್ಪನ ಸೋಡಾ ಗ್ಲಾಸ್!

ಸಂಜೆ ಮರಳಿ ಮನೆಗೆ ಬಂದಾಗ ಅಮ್ಮ ಮತ್ತೆ ಅದನ್ನೇ ಹೇಳಿದರು: “ನಾಳೆ ಕೂಡ ಕೆಲಸದವಳು ಬರಲ್ವಂತೆ…!”

ಬಿಡುವಿಲ್ಲದ ಬ್ಯುಸಿ ಜೀವನ, ಕೆಲಸದವರ ಮೇಲಿನ ಅತಿಯಾದ ಅವಲಂಬನೆ ಹಾಗೂ ತಾಳ್ಮೆಯಿಲ್ಲದ ಆತಂಕ ನಮಗೆ ತೊಂದರೆ ತರುತ್ತದೆ. ಮನೆಕೆಲಸದವರು ಇರಲಿ, ಬಿಡಲಿ—ನಾವು ನಮ್ಮ ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲು ಸದಾ ಸಿದ್ಧರಾಗಿರಬೇಕು. ಅವರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾದರೆ ದಿನಚರಿ ಸಂಪೂರ್ಣ ಅಸ್ತವ್ಯಸ್ತವಾಗುವುದಂತೂ ಖಂಡಿತ.

— ನಂದಿನಿ ಸನಬಾಳ, ಕಲಬುರಗಿ

Please follow and like us: