October 13, 2026

Hampi times

Kannada News Portal from Vijayanagara

ಕಬ್ಬು ಬೆಳೆಗಾರರ ಹಿತಕ್ಕೆ ಬದ್ಧ

ಹೊಸಪೇಟೆ: ಕಬ್ಬು ಬೆಳೆಗಾರರ ಆರ್ಥಿಕ ಹಿತ ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸದಾ ಬದ್ಧವಾಗಿದ್ದು, ರೈತರ ಬೇಡಿಕೆಯಂತೆ ಶೀಘ್ರದಲ್ಲೇ ಮತ್ತೊಮ್ಮೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆಯನ್ನು (ಎಫ್.ಆರ್.ಪಿ.) ಹೆಚ್ಚಿಸುವ ಮೂಲಕ ಸಿಹಿ ಸುದ್ದಿ ನೀಡಲಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ತಿಳಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಮತ್ತು ಕಬ್ಬಿನ ದರಕ್ಕೆ ಯಾವುದೇ ನೇರ ಸಂಬಂಧವಿಲ್ಲ. ಎಂ.ಎಸ್.ಪಿ. ಸಕ್ಕರೆಯ ದರ ನಿಗದಿಗೆ ಅನ್ವಯಿಸಿದರೆ, ಎಫ್.ಆರ್.ಪಿ. ಕಬ್ಬಿಗೆ ಅನ್ವಯಿಸುತ್ತದೆ. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸದೃಢತೆಗೆ ಎಂ.ಎಸ್.ಪಿ. ಇದ್ದರೆ, ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಎಫ್.ಆರ್.ಪಿ. ನಿಗದಿಪಡಿಸಲಾಗಿದೆ.

ಸಕ್ಕರೆ ದರ ಕುಸಿತದಿಂದ ರೈತರ ಬಿಲ್ಲುಗಳು ಬಾಕಿ ಉಳಿಯುತ್ತಿದ್ದ ಸಂಕಷ್ಟವನ್ನು ಮನಗಂಡು ಪ್ರಧಾನಿ ಮೋದಿ ಅವರು 2018ರಲ್ಲಿ ಸಕ್ಕರೆಗೆ ಎಂ.ಎಸ್.ಪಿ. ಜಾರಿಗೆ ತಂದರು. ಪ್ರಸ್ತುತ ಸಕ್ಕರೆಗೆ ಎಂ.ಎಸ್.ಪಿ. ದರ 31 ರೂ. ಇದ್ದರೂ, ಮಾರುಕಟ್ಟೆಯಲ್ಲಿ ಕಾರ್ಖಾನೆಗಳು ಕೆಜಿಗೆ 40 ರಿಂದ 47 ರೂ.ಗೆ ಮಾರಾಟ ಮಾಡುತ್ತಿವೆ ಎಂದು ವಿವರಿಸಿದರು.

ಕರ್ನಾಟಕದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತ್ವರಿತವಾಗಿ ಸ್ಪಂದಿಸಿದ್ದಾರೆ. ಇದೇ ಅಕ್ಟೋಬರ್ 12ರಂದು ದೆಹಲಿಯಲ್ಲಿ ಪ್ರಮುಖ ಸಭೆ ನಡೆಯುವ ನಿರೀಕ್ಷೆಯಿದ್ದು, ಕೇಂದ್ರ ಸರ್ಕಾರ ಈ ಬಾರಿಯೂ ಎಫ್.ಆರ್.ಪಿ. ಹೆಚ್ಚಳ ಮಾಡುವ ಮೂಲಕ ರೈತರಿಗೆ ನೆರವಾಗಲಿದೆ. ರೈತರು ಮಳೆ-ಬಿಸಿಲಿನಲ್ಲಿ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿಲ್ಲ, ಕೇಂದ್ರ ಸರ್ಕಾರ ಸದಾ ರೈತರ ಪರವಾಗಿದೆ ಎಂದರು.

ಯುಪಿಎ ಅವಧಿಯಲ್ಲಿ ಬಾಕಿ ಉಳಿದಿದ್ದ ₹16,600 ಕೋಟಿ ಮೊತ್ತವನ್ನು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪಾವತಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ನೇರ ಪಾವತಿ ವ್ಯವಸ್ಥೆ ತಂದು ಕ್ರಾಂತಿಕಾರಿ ಸುಧಾರಣೆ ಮಾಡಿದ್ದು, ಮೇ ತಿಂಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ಎಫ್.ಆರ್.ಪಿ. 365 ರೂ.ಗೆ ಹೆಚ್ಚಿಸಲಾಗಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಸಿದ್ಧವಿದೆ ಎಂದರು.

ಹಿಂದೆ ಕೇವಲ 38 ಕೋಟಿ ಲೀಟರ್ ಇದ್ದ ಎಥೆನಾಲ್ ಖರೀದಿಯನ್ನು ಕೇಂದ್ರ ಸರ್ಕಾರ ಬರೋಬ್ಬರಿ 1200 ಕೋಟಿ ಲೀಟರ್‌ಗೆ ಹೆಚ್ಚಿಸಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಒಂದೇ ತಿಂಗಳಲ್ಲಿ ಹಣ ಸಂದಾಯವಾಗುತ್ತಿದ್ದು, ಈ ವರ್ಷ ಶೇ. 97ರಷ್ಟು ಬಾಕಿ ಹಣ ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.

 ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ತಕ್ಷಣವೇ ರಾಜ್ಯ ಪರಾಮರ್ಶಿತ ಬೆಲೆ (ಎಸ್.ಎ.ಪಿ.) ಜಾರಿಗೆ ತರಬೇಕು. ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ ರೈತರ ಕಬ್ಬಿಗೆ ದರ ಹೆಚ್ಚಿಸಲು ಏಕೆ ಹಿಂದೇಟು ಹಾಕುತ್ತಿದೆ? ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಶುಲ್ಕವನ್ನು 5 ಲಕ್ಷದಿಂದ 1 ಕೋಟಿಗೆ ಏರಿಸಿ ಹೊರೆ ಮಾಡಿರುವ ರಾಜ್ಯ ಸರ್ಕಾರಕ್ಕೆ ರೈತರ ಹಿತ ಕಾಯುವ ಯಾವುದೇ ಕಾಳಜಿಯಿಲ್ಲ ಎಂದು ಕಿಡಿಕಾರಿದರು.

Please follow and like us: