
ಹಗರಿಬೊಮ್ಮನಹಳ್ಳಿ: ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಮೂಲಭೂತ ಅಗತ್ಯಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ, ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಕಾಲೇಜು ಹಾಗೂ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಉದಾರವಾಗಿ ಭೂಮಿ ದಾನ ಮಾಡಿದ ಗಂಗಾವತಿ ವೆಂಕಟರಮಣ ಶ್ರೇಷ್ಠಿಯವರು ದಾನಿಗಳಲ್ಲಿಯೇ ಅತ್ಯಂತ ಶ್ರೇಷ್ಠರಾಗಿದ್ದಾರೆ ಎಂದು ಶಾಸಕ ಕೆ. ನೇಮಿರಾಜ್‌ನಾಯ್ಕ್ ಮುಕ್ತ ಕಂಠದಿಂದ ಶ್ಲಾಘಿಸಿದರು.
ಪಟ್ಟಣದ ಕೂಡ್ಲಿಗಿ ವೃತ್ತಕ್ಕೆ ‘ದಾನಿ ಗಂಗಾವತಿ ವೆಂಕಟರಮಣ ಶ್ರೇಷ್ಠಿ ವೃತ್ತ’ ಎಂದು ನಾಮಕರಣ ಮಾಡಿ, ಗುರುವಾರ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ಸುಮಾರು 50 ವರ್ಷಗಳ ಹಿಂದೆಯೇ ಸರ್ಕಾರಿ ಆಸ್ಪತ್ರೆ, ಪದವಿ ಕಾಲೇಜು, ಧರ್ಮಛತ್ರ, ದೇವಸ್ಥಾನಗಳು ಹಾಗೂ ಸಾರ್ವಜನಿಕ ಸ್ಮಶಾನ ಸೇರಿದಂತೆ ಸಮಾಜದ ವಿವಿಧ ಹಿತಕಾರ್ಯಗಳಿಗೆ ಅವರು ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನಿಸ್ವಾರ್ಥವಾಗಿ ದಾನ ಮಾಡಿದ್ದಾರೆ. ಅವರು ಮಾಡಿರುವ ಜನಪರ ಕಾರ್ಯಗಳು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯುವಂಥವು. ತಲೆಮಾರುಗಳು ಕಳೆದರೂ ಸಮಾಜಕ್ಕೆ ಅವರು ನೀಡಿದ ಕೊಡುಗೆ ಚಿರಸ್ಥಾಯಿಯಾಗಿ ನಿಲ್ಲುತ್ತದೆ. ಅಂತಹ ಮಹಾನ್ ಚೇತನದ ಹೆಸರನ್ನು ಈ ವೃತ್ತಕ್ಕೆ ನಾಮಕರಣ ಮಾಡಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಹಿರೇಹಡಗಲಿಯ ಹಾಲವೀರಪ್ಪಜ್ಜ ಹಾಗೂ ಸುಭಾಷ್ ಶಾಸ್ತ್ರಿ ಆಶೀರ್ವಚನ ನೀಡಿದರು.
ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ಟ್ರಸ್ಟ್ ಹಾಗೂ ಹೊಸಪೇಟೆಯ ಆರ್. ಪಂಪಾಪತಿ ರೋಟರಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 160ಕ್ಕೂ ಹೆಚ್ಚು ಜನರನ್ನು ತಪಾಸಣೆಗೊಳಪಡಿಸಿ, ಅದರಲ್ಲಿ 60ಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಯಿತು. ಇದೇ ವೇಳೆ ಶ್ರೇಷ್ಠಿ ಟ್ರಸ್ಟ್ ವತಿಯಿಂದ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಆರ್ಯವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಕೋರಗಲ್ ರಾಘವೇಂದ್ರ, ನಿಕಟಪೂರ್ವ ಅಧ್ಯಕ್ಷ ಜಿ. ಲಕ್ಷ್ಮೀಪತಿ, ಕಾರ್ಯದರ್ಶಿ ಡಿ. ಗೋಪಾಲಕೃಷ್ಣ, ಶ್ರೇಷ್ಠಿ ಟ್ರಸ್ಟ್ ಅಧ್ಯಕ್ಷ ಗಂಗಾವತಿ ವಿಜಯಕುಮಾರ್, ಕಾರ್ಯದರ್ಶಿ ಜಿ.ವಿ. ವಿನಯ್, ಧರ್ಮದರ್ಶಿ ನಾಣ್ಯಪರ ಕೃಷ್ಣಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಪ್ರಮುಖರಾದ ಜಿ. ಮಂಜಣ್ಣ, ಜಿ. ಸುದರ್ಶನ, ಜಿ.ವಿ. ವಿಜೇತ್, ಬೆಲ್ಲಂಕೊಂಡ ರಮೇಶ್, ವೆಂಕಟಾಚಲಪತಿ, ವೇಣುಗೋಪಾಲ, ಎಂಜಿನಿಯರ್ ಕುಮಾರ್, ಎನ್.ಬಿ. ವಾಗೇಶ, ಕೆ.ಪಿ. ಮಠದ್, ಬಾರಿಕರ ಬಾಪೂಜಿ, ಹುಡುಚಪ್ಪ, ಎಚ್. ಶ್ರೀನಿವಾಸ, ವಸಂತ ಮಾಲವಿ, ರಮೇಶಬಾಬು, ಪ್ರಸಾದ್, ಸಂಚಿ ಶಿವಕುಮಾರ, ಸಂದೀಪ್ ಶಿವಮೊಗ್ಗ, ಶ್ರೀಶೈಲಪ್ಪ, ಬಡಿಗೇರ್ ಬಸವರಾಜ, ಡಿಶ್ ಪಾಂಡುನಾಯ್ಕ್, ವಕೀಲ ಚಂದ್ರಶೇಖರ್, ವಿ. ಗುರುರಾಜ್, ಬಾರಿಕರ ನಿಂಗಪ್ಪ, ಕೆ. ಪ್ರಭಾಕರ್ ಶೆಟ್ರು, ಆಂಜನೇಯ ಶೆಟ್ರು, ಬೇಳೂರು ಮಾರುತಿ ಶ್ರೇಷ್ಠ, ಕುಪ್ಪಾ ಶಿವಕುಮಾರ್, ಬಾಲಾಜಿ, ಪ್ರವೀಣ್, ಪ್ರಕಾಶ್, ಬಸಾಪುರ ರಾಘವೇಂದ್ರ, ಚಿದ್ರಿ ಅನಿಲ್, ರಾಜೇಂದ್ರ ಗೋಪಾಲ ಹಾಗೂ ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.


More Stories
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ