
ಹಗರಿಬೊಮ್ಮನಹಳ್ಳಿ: ಪಟ್ಟಣದಿಂದ ತಾಲೂಕಿನ ತಂಬ್ರಹಳ್ಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ಯಡ್ರಮ್ಮನಹಳ್ಳಿ ಗ್ರಾಮಸ್ಥರು ಗುರುವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಗ್ರಾಮದಿಂದ ಪಟ್ಟಣಕ್ಕೆ ಮೌನ ಮೆರವಣಿಗೆಯ ಮೂಲಕ ಆಗಮಿಸಿದ ಗ್ರಾಮಸ್ಥರು ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯಡ್ರಮ್ಮನಹಳ್ಳಿ ಗ್ರಾಮದ ಮುಖಂಡ ಗುರುಮ್ಮನವರ ವೀರೇಶ್ ಮಾತನಾಡಿ, “ಪಟ್ಟಣದಿಂದ ತಂಬ್ರಹಳ್ಳಿಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಮಾಡುವಂತೆ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ), ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಡ್ರಮ್ಮನಹಳ್ಳಿ ಹಾಗೂ ಚಿಲುಗೋಡು ಗ್ರಾಮಗಳ ಮುಂಭಾಗ ರಸ್ತೆಯುದ್ದಕ್ಕೂ ಬೃಹತ್ ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕ ಸಾರಿಗೆ ಬಸ್‌ಗಳು, ಖಾಸಗಿ ವಾಹನಗಳು, ಆಂಬುಲೆನ್ಸ್‌ಗಳು ಹಾಗೂ ರೈತರ ಕೃಷಿ ಉತ್ಪನ್ನಗಳನ್ನು ಸಾಗಿಸುವ ಆಟೋಗಳು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಇತ್ತೀಚೆಗೆ ಸಾರಿಗೆ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇಂತಹ ಅವಘಡಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ತಾಲೂಕು ಆಡಳಿತವು ತಕ್ಷಣವೇ ಪಿಡಬ್ಲ್ಯೂಡಿ ಇಲಾಖೆಗೆ ನಿರ್ದೇಶನ ನೀಡಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಉಪ ತಹಸೀಲ್ದಾರ್ ಶಿವಕುಮಾರಗೌಡರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಬರದೂರ್ ನಿಂಗರಾಜ, ಎಚ್. ಮರಿಯಪ್ಪ, ಡಿ. ರಾಘು, ಕೆ. ಮುದುಕಪ್ಪ, ಡಿ. ವಿನಾಯಕ, ವಿ. ಗೋವಿಂದ್, ಪಿ. ಶರೀಫ್‌ಸಾಬ್, ಡಿ. ಅಶೋಕ, ಎಚ್. ಹಮೀದ್, ಟಿ. ಶಿವಕುಮಾರ, ಜೆ. ನಿಂಗರಾಜ, ಎಚ್. ಅಂಜಿನಪ್ಪ ಸೇರಿದಂತೆ ಯಡ್ರಮ್ಮನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.


More Stories
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್