November 27, 2026

Hampi times

Kannada News Portal from Vijayanagara

ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ವಿಶ್ವದ ಮೆಚ್ಚುಗೆ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ವೀರ

ನವದೆಹಲಿ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ಭೀಕರ ಹಲ್ಲೆಯ ನಡುವೆಯೂ ಅದ್ಭುತ ಸಮಯಪ್ರಜ್ಞೆ ಮೆರೆದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಅಪ್ರತಿಮ ಸಾಹಸಕ್ಕೆ ವಿಶ್ವದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಫ್ಲೈದುಬೈ ವಿಮಾನವು ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಓಮನ್ ಮೂಲದ ಸಹ-ಪೈಲಟ್ ಇದ್ದಕ್ಕಿದ್ದಂತೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಚಾಕುವಿನಿಂದ ಇರಿದು, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಬರೋಬ್ಬರಿ 17,400 ಅಡಿ ಕೆಳಗೆ ಕುಸಿದಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದರೂ ಎದೆಗುಂದದ ಕ್ಯಾಪ್ಟನ್ ಸ್ಮಿತ್, ದಾಳಿಕೋರನ ವಿರುದ್ಧ ಪ್ರತಿಹೋರಾಟ ನಡೆಸಿ ಕಾಕ್‌ಪಿಟ್‌ನ ಬಾಗಿಲು ತೆರೆದು ನೆರವಿಗೆ ಕೂಗಿಕೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ದಾಳಿಕೋರನನ್ನು ಹಿಡಿದು ನಿಯಂತ್ರಿಸಿದ್ದಾರೆ. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ವಾಯುವ್ಯ ಭಾಗದ ತಬೂಕ್ ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಈ ಮೂಲಕ ವಿಮಾನದಲ್ಲಿದ್ದ 174 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರತೀಯ ಪೈಲಟ್‌ನ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, “ಗಂಭೀರ ಅಪಾಯದ ಕ್ಷಣದಲ್ಲೂ ತೀವ್ರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ಇತರರ ಜೀವ ಉಳಿಸಲು ತೋರಿದ ಅಪ್ರತಿಮ ಸಾಹಸ ಮತ್ತು ಸಮಯಪ್ರಜ್ಞೆ ಎಲ್ಲರ ಮನ ಮುಟ್ಟಿದೆ. ಅವರ ಧೈರ್ಯ ದೊಡ್ಡ ದುರಂತವನ್ನು ತಪ್ಪಿಸಿದೆ. ಇಡೀ ದೇಶ ಅವರ ಬಗ್ಗೆ ಹೆಮ್ಮೆಪಡುತ್ತದೆ” ಎಂದು ತಿಳಿಸಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, “ಗಂಭೀರ ಗಾಯಗಳ ಹೊರತಾಗಿಯೂ ಮಧ್ಯ ಆಗಸದಲ್ಲಿ ಸಮಯೋಚಿತ ನಿರ್ಧಾರ ಕೈಗೊಂಡು ಮಹಾದುರಂತವನ್ನು ತಪ್ಪಿಸಿದ ಇಂತಹ ಅಸಾಧಾರಣ ವೀರನ ಬಗ್ಗೆ ರಾಷ್ಟ್ರವು ಹೆಮ್ಮೆಪಡುತ್ತದೆ” ಎಂದಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಪ್ರತಿಕ್ರಿಯಿಸಿ, “ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆಯು ನೂರಾರು ಜೀವಗಳನ್ನು ರಕ್ಷಿಸಿದೆ ಮತ್ತು ಭಾರೀ ದುರಂತವನ್ನು ತಪ್ಪಿಸಿದೆ” ಎಂದು ಪ್ರಶಂಸಿಸಿದ್ದಾರೆ. ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್, ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಸಹ ಪೈಲಟ್‌ನ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ. ಯುಎಇಯಲ್ಲಿನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ದುಬೈನಲ್ಲಿರುವ ಕ್ಯಾಪ್ಟನ್ ಸ್ಮಿತ್ ಕುಟುಂಬವನ್ನು ಭೇಟಿ ಮಾಡಿ ಸರ್ಕಾರದ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಘಟನೆಯನ್ನು ಭಯೋತ್ಪಾದನಾ ಕೃತ್ಯ ಎಂದು ಬಣ್ಣಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ನಿಜವಾದ ಹೀರೋ, ಅವರು 174 ಜನರ ಜೀವ ಉಳಿಸಿದ್ದಾರೆ” ಎಂದು ಬಣ್ಣಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಪೈಲಟ್‌ನ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದಾಳಿಕೋರ ಓಮನ್ ಸಹ-ಪೈಲಟ್‌ನನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿದ್ದು, ತಬೂಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Please follow and like us: