
ಹರಪನಹಳ್ಳಿ: ಗ್ರಾಮೀಣ ಭಾಗದಲ್ಲಿ ಸಮುದಾಯ ಕಾಮಗಾರಿ ಸ್ಥಳಗಳಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಯೋಜನೆಯಡಿ ಕಾರ್ಯನಿರ್ವಹಿಸುವ ಎಲ್ಲಾ ಕೂಲಿಕಾರರಿಗೆ ಅಕ್ಟೋಬರ್ 31ರೊಳಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಚಂದ್ರಶೇಖರ್ ವೈ.ಎಚ್. ತಿಳಿಸಿದರು.
ತಾಲೂಕಿನ ಬಾಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ‘ಗ್ರಾಮ ಆರೋಗ್ಯ’ ಅಭಿಯಾನದಡಿ ಕೂಲಿಕಾರರಿಗೆ ಆಯೋಜಿಸಿದ್ದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ವಿವಿಧ ಗ್ರಾಮೀಣ ಕಾಮಗಾರಿ ಸ್ಥಳಗಳಲ್ಲಿ ಇತ್ತೀಚೆಗೆ ಕೂಲಿ ಕಾರ್ಮಿಕರ ಆಕಸ್ಮಿಕ ಸಾವು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಪಂ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಅದರನ್ವಯ ಕೂಲಿಕಾರರು ಕಾರ್ಯನಿರ್ವಹಿಸುವ ಸ್ಥಳಗಳಲ್ಲೇ ಕಡ್ಡಾಯವಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ತಾಲೂಕಿನ ಎಲ್ಲಾ 37 ಗ್ರಾಮ ಪಂಚಾಯಿತಿಗಳಲ್ಲಿ ಅಕ್ಟೋಬರ್ 1ರಿಂದ 31ರವರೆಗೆ ನಿಗದಿತ ವೇಳಾಪಟ್ಟಿಯಂತೆ ಅಭಿಯಾನದ ರೂಪದಲ್ಲಿ ಶಿಬಿರಗಳನ್ನು ಏರ್ಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್. ಮಾತನಾಡಿ, ಶ್ರಮಿಕ ವರ್ಗದವರು ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಅಭಿವೃದ್ಧಿ ಯೋಜನೆಗಳ ಸಾರ್ಥಕತೆ ಸಾಧ್ಯ. ಕೂಲಿಕಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಪ್ಪದೇ ತಪಾಸಣೆ ಮಾಡಿಸಿಕೊಳ್ಳಬೇಕು. ಶಿಬಿರಗಳ ಮೇಲ್ವಿಚಾರಣೆಗಾಗಿ ತಾಲೂಕು ಪಂಚಾಯಿತಿಯಿಂದ ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಕಾರ್ಯದರ್ಶಿಗಳು, ಸಿಬ್ಬಂದಿ, ತಾಂತ್ರಿಕ ಸಹಾಯಕರು, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು ಹಾಗೂ ತಾಂಡಾ ರೋಜ್ಗಾರ್ ಮಿತ್ರರು ಕಡ್ಡಾಯವಾಗಿ ಸ್ಥಳದಲ್ಲಿದ್ದು ಸಹಕರಿಸಬೇಕು ಎಂದು ಹೇಳಿದರು.
ಶಿಬಿರದಲ್ಲಿ ಕೂಲಿಕಾರರಿಗೆ ನಡೆಸಿದ ಎಲ್ಲಾ ತಪಾಸಣೆಗಳ ವಿವರಗಳನ್ನು ‘ಪಂಚಾಯಿತಿ ಕಿಟ್ ರಿಜಿಸ್ಟರ್’ನಲ್ಲಿ ದಾಖಲಿಸಿ, ಡೇಟಾ ಎಂಟ್ರಿ ಆಪರೇಟರ್ ಹಾಗೂ ಗ್ರಾಮ ಕಾಯಕ ಮಿತ್ರರ ನೆರವಿನಿಂದ ‘ಪಂಚತಂತ್ರ 2.0’ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಶಿಬಿರಕ್ಕೆ ಬೇಕಾದ ಗ್ಲೂಕೋಸ್ ಸ್ಟ್ರಿಪ್ಸ್, ಲ್ಯಾನ್ಸೆಟ್ಸ್, ಹಿಮೋಗ್ಲೋಬಿನ್ ಸ್ಟ್ರಿಪ್ಸ್, ಪರೀಕ್ಷಾ ಸಾಧನಗಳ ಬ್ಯಾಟರಿ ಹಾಗೂ ಶಾಮಿಯಾನ, ಕುರ್ಚಿ, ಮೇಜು ಮತ್ತಿತರ ಸೌಲಭ್ಯಗಳನ್ನು ಆಯಾ ಗ್ರಾಮ ಪಂಚಾಯಿತಿಗಳೇ ಒದಗಿಸಬೇಕು ಎಂದು ತಿಳಿಸಲಾಗಿದೆ.
ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡವು ನೂರಾರು ಕೂಲಿಕಾರರ ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಚರ್ಮ ರೋಗಗಳ ತಪಾಸಣೆ ನಡೆಸಿ ಸ್ಥಳದಲ್ಲೇ ಉಚಿತ ಔಷಧಿ ವಿತರಿಸಿತು. ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದವರಿಗೆ ಉನ್ನತ ಆಸ್ಪತ್ರೆಗಳಿಗೆ ತೆರಳಲು ಶಿಫಾರಸು ಮಾಡಲಾಯಿತು. ಇದೇ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಶುದ್ಧ ನೀರು, ಪೌಷ್ಟಿಕ ಆಹಾರ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಿದರು.


More Stories
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್