November 27, 2026

Hampi times

Kannada News Portal from Vijayanagara

ಸದ್ಗುಣಗಳೇ ನಮ್ಮ ಸಂಪತ್ತು

ಅದು ಮಹಾಭಾರತದ ಸಮಯ. ಸತ್ಯದೇವ ಎಂಬ ಒಬ್ಬ ರಾಜನಿದ್ದ. ಅವನು ಸದ್ಗುಣಕ್ಕೆ ಹೆಸರಾದವನು. ಒಂದು ಮುಂಜಾವಿನಲ್ಲಿ ಎದ್ದು ರಾಜ ತನ್ನ ಕೋಣೆಯಿಂದ ಹೊರಬಂದ. ಸ್ಫುರದ್ರೂಪಿ ಮಹಿಳೆಯೊಬ್ಬಳು ಅರಮನೆಯಿಂದ ಹೊರಹೋಗುವುದನ್ನು ಕಂಡ. ಸತ್ಯದೇವನಿಗೆ ಅಚ್ಚರಿಯುಂಟಾಯಿತು. ರಾಜನು ಸುಂದರ ಸ್ತ್ರೀಯನ್ನು ಹಿಂಬಾಲಿಸಿ ಅವಳೆದುರು ತನ್ನೆರಡು ಕೈಗಳನ್ನು ಜೋಡಿಸಿ ನಿಂತನು. ರಾಜನು ಬಹು ವಿನಂತಿಯಿಂದ ಮಹಿಳೆಯನ್ನು ಕೇಳಿದನು, “ದೇವಿ, ನೀವು ಯಾರು? ನಾನು ನಿಮ್ಮನ್ನು ಅರಮನೆಯಲ್ಲಿ ಮುಂಚೆಯೆಂದೂ ನೋಡಿಯೇ ಇಲ್ಲ” ಎಂದನು. “ನಾನು ಲಕ್ಷ್ಮಿ, ನಾನೀಗ ಅರಮನೆಯನ್ನು ತೊರೆಯುತ್ತಿದ್ದೇನೆ” ಎಂದಳು. ರಾಜನು ತುಸು ಯೋಚಿಸಿ ಲಕ್ಷ್ಮಿಯನ್ನು ಕೇಳಿದನು, “ತಾಯಿ ನೀನು ಅರಮನೆಯನ್ನು ತೊರೆಯಲು ಕಾರಣವೇನು? ಅರಮನೆಯನ್ನು ಬಿಡಬೇಡಿ” ಎಂದು ಪರಿಪರಿಯಾಗಿ ಬೇಡಿಕೊಂಡನು. ಲಕ್ಷ್ಮಿ ಮಾತಿಗೆ ಸಮ್ಮತಿ ನೀಡಲಿಲ್ಲ. ರಾಜನು ಲಕ್ಷ್ಮಿಯನ್ನು ಒತ್ತಾಯಿಸಲಿಲ್ಲ. “ನಿನ್ನ ಇಚ್ಛೆಯಂತೆ ತಾಯಿ” ಎಂದು ತೆರಳಲು ಬಿಟ್ಟನು. ಲಕ್ಷ್ಮಿ ಅರಮನೆಯನ್ನು ಬಿಟ್ಟು ಹೋದಳು.

ಸ್ವಲ್ಪ ಸಮಯದ ಬಳಿಕ, ಒಬ್ಬ ಸುಂದರ ಪುರುಷ ಅರಮನೆಯಿಂದ ಹೊರಬರುತ್ತಿರುವುದನ್ನು ಗಮನಿಸಿದನು. ಆ ವ್ಯಕ್ತಿ ಯಾರು? ಅರಮನೆಯಿಂದ ಏಕೆ ಹೋಗುತ್ತಿದ್ದಾನೆ? ಎಂಬ ಪ್ರಶ್ನೆ ರಾಜನ ಮನದಲ್ಲಿ ಉದ್ಭವಿಸಿತು. ಆ ವ್ಯಕ್ತಿಯನ್ನು ರಾಜ ಯಾರೆಂದು ಕೇಳಿದನು. “ನನ್ನ ಹೆಸರು ದಾನ. ಲಕ್ಷ್ಮಿ ಎಲ್ಲಿ ವಾಸ ಮಾಡುತ್ತಾಳೋ, ಅಲ್ಲಿಯೇ ನಾನು ಇರುತ್ತೇನೆ. ನಿನ್ನ ಬಳಿ ಲಕ್ಷ್ಮಿ ಅಂದರೆ ಸಂಪತ್ತು ಇಲ್ಲದ ಕಾರಣ, ದಾನ ಮಾಡಲು ನಿನ್ನಿಂದಾಗದು. ಅದಕ್ಕೆ ನಾನು ಹೊರಡುತ್ತೇನೆ” ಎಂದು ಉತ್ತರಿಸಿತು. ದಾನಕ್ಕೆ, “ನಿನ್ನಿಷ್ಟದಂತೆ ಆಗಲಿ” ಎಂದ ರಾಜ.

ಸ್ವಲ್ಪ ಹೊತ್ತಿನ ಬಳಿಕ, ಯಶಸ್ಸು ಹೊರಡಲು ಸಿದ್ಧವಾಯಿತು. ರಾಜನು ಲಕ್ಷ್ಮಿ, ದಾನಕ್ಕೆ ಕೇಳಿದ ಪ್ರಶ್ನೆಗಳನ್ನೇ ಕೇಳಿದ. “ಲಕ್ಷ್ಮಿ, ದಾನವಿರದ ಮನೆಯಲ್ಲಿ ನಾನು ಇರಲಾರೆ” ಎಂದು ಹೊರಟಿತು. ರಾಜ “ಆಗಲಿ” ಎಂದ.

ನಂತರ ಮತ್ತೊಬ್ಬ ವ್ಯಕ್ತಿ, “ನಾನು ಸದ್ಗುಣ, ನಾನು ನಿನ್ನ ಅರಮನೆಯನ್ನು ತೊರೆಯುತ್ತಿದ್ದೇನೆ” ಎಂದಿತು. ರಾಜನು ಕೈಮುಗಿದು ಬೇಡಿದನು, “ನಾನು ಹೋಗಲು ಬಿಡುವುದಿಲ್ಲ ಸದ್ಗುಣವೇ. ನಾನು ಬದುಕಿನಲ್ಲಿ ಉತ್ತಮವಾಗಿ ಬಾಳಿದ್ದೇನೆ. ಯಾರ ಬಳಿಯೂ ಅನಾಗರಿಕನಂತೆ ವರ್ತಿಸಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ್ದೇನೆ. ಸದ್ವರ್ತನೆಯನ್ನೇ ಪಾಲಿಸಿಕೊಂಡು ಬರುತ್ತಿದ್ದೇನೆ. ಹೀಗಿರುವಾಗ ನೀವು ನನ್ನನ್ನು ಬಿಟ್ಟು ಹೋಗಲು ಕಾರಣವೇನು? ನನಗೆ ಯಾವುದೇ ಆಸೆಗಳಿಲ್ಲ. ಸಂಪತ್ತು, ದಾನ, ಯಶಸ್ಸಿಗಿಂತ ಉತ್ತಮ ಗುಣಗಳೇ ನನಗೆ ತುಂಬಾ ಮುಖ್ಯ” ಎಂದು ನುಡಿದನು.

ರಾಜನ ಮಾತುಗಳನ್ನು ಅರಿತ ಸದ್ಗುಣ, ರಾಜನ ಬಳಿಯಲ್ಲೇ ಉಳಿಯಲು ನಿರ್ಧರಿಸಿತು. ಅರಮನೆಯಲ್ಲಿ ಉಳಿದ ಸದ್ಗುಣವನ್ನು ಕಂಡು ಲಕ್ಷ್ಮಿ, ದಾನ, ಯಶಸ್ಸು ಅರಮನೆಗೆ ವಾಪಸಾದರು. ಉತ್ತಮ ನಡತೆ ಹೊಂದಿದವರೊಂದಿಗೆ ದೇವರು ಸದಾ ಜೊತೆಗಿರುತ್ತಾನೆ. ನಮ್ಮಲ್ಲಿನ ಒಳ್ಳೆಯ ಗುಣಗಳಿಗೆ ದೇವರೇ ಒಲಿಯುತ್ತಾನೆ.

• ದೀಪಶ್ರೀ ಎಸ್. ಕೂಡ್ಲಿಗಿ

Please follow and like us:

 

 

 

 

 

 

 

 

 

 

Translate »
[t4b-ticker]