
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಇಂದಿನಿಂದ ನಡೆಸಲು ನಿರ್ಧರಿಸಿದ್ದ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಾಳವಾಗಿ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಲಿವೆ.

ಭಾರತೀಯ ಬ್ಯಾಂಕುಗಳ ಸಂಘ (IBA) ಹಾಗೂ ಬ್ಯಾಂಕ್ ನೌಕರರ ಏಳು ಪ್ರಮುಖ ಸಂಘಟನೆಗಳ ಒಕ್ಕೂಟವಾದ ‘ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್’ (UFBU) ಮುಖಂಡರ ನಡುವೆ ಭಾನುವಾರ ರಾತ್ರಿ ನಡೆದ ಸಂಧಾನ ಸಭೆಯಲ್ಲಿ ಮಾಡಿಕೊಂಡ ಒಪ್ಪಂದದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಭೆಯಲ್ಲಿ ಸಕಾರಾತ್ಮಕ ಚರ್ಚೆಗಳು ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
ವಾರಕ್ಕೆ 5 ದಿನಗಳ ಕೆಲಸದ ದಿನ ನಿಗದಿಪಡಿಸುವುದು (ವಾರದಲ್ಲಿ 2 ದಿನ ರಜೆ) ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯನ್ನು ಹಿಂಪಡೆಯುವುದು ನೌಕರರ ಎರಡು ಮುಖ್ಯ ಬೇಡಿಕೆಗಳಾಗಿದ್ದವು. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 28 ರಿಂದ 30 ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಂಪೂರ್ಣ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಯೂನಿಯನ್ಗಳು ಕರೆ ನೀಡಿದ್ದವು. ಇದೀಗ ಸಂಧಾನದ ಬಳಿಕ ಮುಷ್ಕರ ಮುಂದೂಡಿಕೆಯಾಗಿರುವುದರಿಂದ ಎಂದಿನಂತೆ ಎಲ್ಲಾ ಬ್ಯಾಂಕ್ ಶಾಖೆಗಳ ವಹಿವಾಟು ಸುಗಮವಾಗಿ ಮುಂದುವರಿಯಲಿದೆ.


More Stories
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್