ಬೆಂಗಳೂರು: ಕರ್ನಾಟಕದ ಕಲಬುರಗಿ ಭಾಗದ ವಿಶಿಷ್ಟ ಕೃಷಿ ಗುರುತಾಗಿರುವ, ಜಿಐ-ಟ್ಯಾಗ್ (ಭೌಗೋಳಿಕ ಸೂಚ್ಯಂಕ) ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಿದ್ದು, ರೈತರಿಗೆ ಮಾರುಕಟ್ಟೆ ದರಕ್ಕಿಂತ ಶೇಕಡಾ 30ಕ್ಕೂ ಹೆಚ್ಚು ಲಾಭ ತಂದುಕೊಡುವ ಐತಿಹಾಸಿಕ ರಫ್ತು ವಹಿವಾಟಿಗೆ ಚಾಲನೆ ದೊರೆತಿದೆ.
ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಸೆಪ್ಟೆಂಬರ್ 24 ರಂದು ಕರ್ನಾಟಕದಿಂದ ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಹೊಂದಿದ ಗುಲ್ಬರ್ಗಾ ತೊಗರಿ ಬೇಳೆಯ ರಫ್ತು ಸರಕನ್ನು ಯಶಸ್ವಿಯಾಗಿ ಬೀಳ್ಕೊಟ್ಟಿತು. ಅಪೆಡಾ ಅಧ್ಯಕ್ಷರಾದ ಶ್ರೀ ಅಭಿಷೇಕ್ ದೇವ್, ಐಎಎಸ್ ಅವರು ಈ ರಫ್ತು ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಪೆಡಾದ ಹಿರಿಯ ಸಲಹೆಗಾರರಾದ ಡಾ. ತರುಣ್ ಬಜಾಜ್, ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ವಿನೀತಾ ಸುಧಾಂಶು, ಕೆಎಸ್‌ಪಿಎಎಮ್‌ಎಲ್ (KSPAML) ಗುಲ್ಬರ್ಗಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿ. ಸದಾಶಿವ ಹಾಗೂ ಮೈಸೂರಿನ ಎಮ್/ಎಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ ಶ್ರೀ ಇಮ್ರಾನ್ ಪಾಷಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಉದ್ಯಮದ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪೆಡಾ ಅಧ್ಯಕ್ಷ ಶ್ರೀ ಅಭಿಷೇಕ್ ದೇವ್, ಭಾರತದ ಜಿಐ-ಟ್ಯಾಗ್ ಹೊಂದಿರುವ ವಿಶಿಷ್ಟ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸುವುದು ಮತ್ತು ಸ್ಥಳೀಯ ಬೆಳೆಗಾರರಿಗೆ ಭದ್ರವಾದ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅಪೆಡಾದ ಪ್ರಮುಖ ಗುರಿಯಾಗಿದೆ. ಮಾಲ್ಡೀವ್ಸ್‌ಗೆ ನಡೆದಿರುವ ಈ ರಫ್ತು ಕೇವಲ ಒಂದು ಬಾರಿಯ ಸರಕಾಗದೆ, ಗುಲ್ಬರ್ಗಾ ತೊಗರಿ ಬೇಳೆಗೆ ಜಾಗತಿಕ ಮನ್ನಣೆ ಒದಗಿಸಿ, ಮುಂದಿನ ದಿನಗಳಲ್ಲಿ ನಿಯಮಿತ ವಹಿವಾಟಿಗೆ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಹೆದ್ದಾರಿಯಾಗಲಿದೆ ಎಂದು ತಿಳಿಸಿದರು.
ರೈತರ ಕೈಹಿಡಿದ ನೇರ ಬೆಲೆ: ಈ ರಫ್ತು ಸರಪಳಿಯ ಪ್ರಮುಖ ವೈಶಿಷ್ಟ್ಯವೆಂದರೆ ರೈತರಿಗೆ ಸಿಕ್ಕಿರುವ ಉತ್ತಮ ಬೆಲೆ. ಪ್ರಸ್ತುತ ಸ್ಥಳೀಯ ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೇಳೆಗೆ ಪ್ರತಿ ಕೆಜಿಗೆ ಸರಾಸರಿ ₹60 ಬೆಲೆ ಇರುವಾಗ, ಈ ಸಂಘಟಿತ ರಫ್ತು ಒಪ್ಪಂದದ ಮೂಲಕ ರೈತರಿಗೆ ಪ್ರತಿ ಕೆಜಿಗೆ ₹82 ಲಭ್ಯವಾಗಿದೆ. ಇದು ಮಾರುಕಟ್ಟೆ ದರಕ್ಕಿಂತ ಶೇಕಡಾ 30ಕ್ಕೂ ಅಧಿಕ ಆದಾಯವನ್ನು ರೈತರಿಗೆ ನೇರವಾಗಿ ತಂದುಕೊಟ್ಟಿದೆ.
ಮೈಸೂರಿನ ಎಮ್/ಎಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯು ತನ್ನ ರೈತ ಉತ್ಪಾದಕ ಸಂಸ್ಥೆಗಳ (FPO) ನೇತೃತ್ವದ ಬ್ರ್ಯಾಂಡ್ ಮುಖಾಂತರ ಈ ಸರಕನ್ನು ಸಿದ್ಧಪಡಿಸಿದ್ದು, ಸಮುದ್ರ ಮಾರ್ಗದ ಮೂಲಕ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿದೆ. ಇದು ಎಫ್‌ಪಿಒಗಳು ಜಾಗತಿಕ ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ.
ಗುಲ್ಬರ್ಗಾ ತೊಗರಿಯ ಹಿನ್ನೆಲೆ: ಕರ್ನಾಟಕದ ಒಣಭೂಮಿ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯಲ್ಲಿ ತೊಗರಿ ಬೆಳೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಜ್ಯದ ಪ್ರಮುಖ ತೊಗರಿ ಕಣಜವಾಗಿರುವ ಕಲಬುರಗಿ ಪ್ರದೇಶದ ತೊಗರಿ ಬೇಳೆಯು ತನ್ನ ವಿಶಿಷ್ಟ ರುಚಿ, ನಾರಿನಂಶ ಹಾಗೂ ಗುಣಮಟ್ಟದಿಂದಾಗಿ 2019 ರಲ್ಲಿ ಭೌಗೋಳಿಕ ಸೂಚಕ (GI) ಮಾನ್ಯತೆ ಪಡೆದುಕೊಂಡಿದೆ. ಅಪೆಡಾ ಪಟ್ಟಿಯಲ್ಲಿರುವ ಈ ಜಿಐ ಬೆಳೆಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗಿರುವುದು ಕಲ್ಯಾಣ ಕರ್ನಾಟಕ ಭಾಗದ ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ.


More Stories
ಮೀರಾಲಾಂ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್ ಸುಲಿಗೆ
ಪ್ರತಿಷ್ಠಿತ ಪಿಯು ಕಾಲೇಜು ಪ್ರವೇಶಕ್ಕೆ ಹೆದ್ದಾರಿ… ವಿಷನ್ 625: ಸ್ಟಡಿ ಎಕ್ಸ್ಪ್ರೆಸ್’ ಮಾರ್ಗದರ್ಶಿ
13 ಗಣಿ ಬಾಧಿತ ಕ್ಯಾಂಪ್ಗಳ ಅಭಿವೃದ್ಧಿಗೆ ₹146 ಕೋಟಿ ಅನುದಾನ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ