https://
youtu.be/NHc6OMSu0K4?si=SI_K4goOPEgwo6h2
ಹೊಸಪೇಟೆ: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ತೆರವುಗೊಳಿಸಿರುವುದನ್ನು ಖಂಡಿಸಿ, ನಗರದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಸಂಘದ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ರಸ್ತೆಗಳು, ಬಸ್ ನಿಲ್ದಾಣ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತಲುಪಿತು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಆರ್. ಕೊಟ್ರೇಶ್, “ರಾಜ್ಯ ಕಂಡ ಅತ್ಯಂತ ಧೀಮಂತ, ಅಹಿಂದ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಅವರಂತಹ ನಾಯಕ ಹಿಂದೆ ಹುಟ್ಟಿಲ್ಲ, ಮುಂದೆಯೂ ಹುಟ್ಟುವುದಿಲ್ಲ. ಜನಪರ ಯೋಜನೆಗಳ ಮೂಲಕ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕನ ಪ್ರತಿಮೆಯನ್ನು ಅಭಿಮಾನಿಗಳು ಕಲಬುರಗಿಯಲ್ಲಿ ನಿರ್ಮಿಸಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ಅದನ್ನು ತೆರವುಗೊಳಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ. ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮಾಧಾನವಾಗಿದ್ದೇವೆ. ನೀತಿ ಸಂಹಿತೆ ಮುಗಿದ ತಕ್ಷಣ ಸರ್ಕಾರವೇ ಪ್ರತಿಮೆ ಮರುನಿರ್ಮಾಣಕ್ಕೆ ಆದೇಶಿಸಬೇಕು; ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ,” ಎಂದು ಎಚ್ಚರಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, “ಸಿದ್ದರಾಮಯ್ಯ ಅವರು ಕೇವಲ ಒಂದು ಜಾತಿಗೆ ಸೀಮಿತರಾಗದೆ ಎಲ್ಲ ವರ್ಗಗಳಿಗೂ ಜನಪರ ಯೋಜನೆಗಳನ್ನು ನೀಡಿದವರು. ಪ್ರತಿಮೆ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅದೇ ಸ್ಥಳದಲ್ಲಿ ಮರುಸ್ಥಾಪಿಸಬೇಕು,” ಎಂದು ಆಗ್ರಹಿಸಿದರು.
ಮುಖಂಡ ಬುಡ್ಡಿ ಬಸವರಾಜ ಮಾತನಾಡಿ, “ಪಕ್ಷಾತೀತ ಹಾಗೂ ಜಾತ್ಯಾತೀತ ನಾಯಕರಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ತೆರವುಗೊಳಿಸಿರುವುದು ತೀವ್ರ ಆಶ್ಚರ್ಯ ತಂದಿದೆ. ಪ್ರತಿಮೆ ತೆರವಿಗೆ ಅಧಿಕಾರ ಕೊಟ್ಟವರು ಯಾರು?” ಎಂದು ಪ್ರಶ್ನಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್. ಮಹೇಶ ಮಾತನಾಡಿ, “ರಾಜ್ಯದಲ್ಲಿ 17 ಬಾರಿ ಬಜೆಟ್ ಮಂಡಿಸಿ, 8 ವರ್ಷಗಳ ಕಾಲ ಆಡಳಿತ ನಡೆಸಿ, ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿಗೊಳಿಸಿದ ನಾಯಕನ ಪ್ರತಿಮೆ ತೆರವುಗೊಳಿಸಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಅದೇ ಸ್ಥಳದಲ್ಲಿ ಮರುನಿರ್ಮಾಣವಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ,” ಎಂದರು.
ಕಾರ್ಯಕ್ರಮದಲ್ಲಿ ರಾಮಚಂದ್ರಗೌಡ, ಅಯ್ಯಾಳಿ ಮೂರ್ತಿ, ವೈ. ಎರಿಸ್ವಾಮಿ, ದಲ್ಲಾಲಿ ಕುಬೇರ ಮಾತನಾಡಿದರು. ಪ್ರತಿಭಟನೆಯಲ್ಲಿ ಡಿ. ಚೆನ್ನಪ್ಪ, ಬಸವಂತಪ್ಪ ಮೇಟಿ, ಎಲ್.ಎಸ್. ಆನಂದ, ಕೆ. ಬೆಟ್ಟದೇಶಪ್ಪ, ಬಂದಿ ಭರಮಪ್ಪ, ಸಂಕ್ಲಾಪುರ ಗೋಪಿ, ಬಿಸಾಟಿ ತಾಯಪ್ಪ, ಪಲ್ಲೇದ ಸಿದ್ದೇಶ, ಗಂಟೆ ಮಾರುತಿ, ಜೊಂಡಿ ನಿಂಗಪ್ಪ, ಬದ್ತಿನಾಥ, ಪ್ರಶಾಂತ ಸೇರಿದಂತೆ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


More Stories
ಗುಲ್ಬರ್ಗಾ ತೊಗರಿ ಬೇಳೆ ಮಾಲ್ಡೀವ್ಸ್ಗೆ ರಫ್ತು
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಭಾವಯಾನ