September 22, 2026

Hampi times

Kannada News Portal from Vijayanagara

ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ

https://youtu.be/NHc6OMSu0K4?si=SI_K4goOPEgwo6h2

ಬೆಂಗಳೂರು: ರಾಜ್ಯದಲ್ಲಿ ವಿತ್ತೀಯ ಕೊರತೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವ ಮುನ್ನ ಹಣಕಾಸಿನ ಲಭ್ಯತೆಯ ವಾಸ್ತವಿಕ ಲೆಕ್ಕಾಚಾರ ಮಾಡಿಕೊಳ್ಳುವಂತೆ ಹಣಕಾಸು ಇಲಾಖೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಹತ್ವದ ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್ 17ರಂದು ಹಣಕಾಸು ಇಲಾಖೆ ಹೊರಡಿಸಿರುವ ಅಧಿಕೃತ ಟಿಪ್ಪಣಿಯಲ್ಲಿ ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಕಳವಳಕಾರಿ ವಿವರಗಳನ್ನು ಬಹಿರಂಗಪಡಿಸಲಾಗಿದೆ. 2026-27ನೇ ಸಾಲಿನಲ್ಲಿ ರಾಜ್ಯದ ವಿತ್ತೀಯ ಕೊರತೆ ಶೇಕಡಾ 2.95ಕ್ಕೆ ಮುಟ್ಟುವ ಸಾಧ್ಯತೆಯಿದ್ದು, ಒಟ್ಟು ಆದಾಯ ಕೊರತೆ 22,957 ಕೋಟಿ ರೂಪಾಯಿಗಳಿಗೆ ತಲುಪಿದೆ.

ಎಫ್‌ಆರ್‌ಬಿಎಂ ಮಾನದಂಡಗಳ ಅನ್ವಯ ಆದಾಯ ಕೊರತೆ ಶೂನ್ಯವಾಗಿರಬೇಕಾಗಿದ್ದು, ವಿತ್ತೀಯ ಕೊರತೆಯ ಮಿತಿ ಶೇಕಡಾ 3ರ ಆಸುಪಾಸಿನಲ್ಲಿದೆ. ಇದೇ ವೇಳೆ ರಾಜ್ಯದ ಒಟ್ಟು ಸಾಲದ ಪ್ರಮಾಣವು ಜಿಎಸ್‌ಡಿಪಿಯ ಶೇಕಡಾ 24.94ಕ್ಕೆ ಏರಿಕೆಯಾಗಿದ್ದು, ಗರಿಷ್ಠ ಸಾಲ ಮಿತಿಯಾದ ಶೇಕಡಾ 25 ಅನ್ನು ಬಹುತೇಕ ತಲುಪಿದೆ.

 

ರಾಜ್ಯದಲ್ಲಿ ಈಗಾಗಲೇ ಅನುಮೋದನೆ ಪಡೆದುಕೊಂಡಿರುವ ಕಾಮಗಾರಿಗಳ ಬಾಕಿ ವೆಚ್ಚವೇ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಪ್ರಮುಖವಾಗಿ ಲೋಕೋಪಯೋಗಿ (ಪಿಡಬ್ಲ್ಯೂಡಿ), ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಗಳಲ್ಲೇ ಒಟ್ಟು 36,136 ಕೋಟಿ ರೂಪಾಯಿಗಳ ಗುತ್ತಿಗೆ ಬಿಲ್ ಬಾಕಿ ಉಳಿದಿದೆ. ಇಷ್ಟೊಂದು ಭಾರಿ ಪ್ರಮಾಣದ ಬಾಕಿ ಇರುವಾಗ ಹೊಸ ಯೋಜನೆಗಳ ಹೊರೆಯನ್ನು ಮತ್ತಷ್ಟು ಹೆಚ್ಚಿಸದಂತೆ ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ.

ಪ್ರಸಕ್ತ ಸಾಲಿನ ಮೊದಲ ಆರು ತಿಂಗಳ ಅವಧಿಯಲ್ಲೇ 5,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹೊಸ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದರೂ, ಇವುಗಳಿಗೆ ಪೂರಕವಾದ ಆರ್ಥಿಕ ಮೂಲಗಳನ್ನು ಇನ್ನೂ ಗುರುತಿಸಿಲ್ಲ. ಇದರ ನಡುವೆ ಜಲಸಂಪನ್ಮೂಲ, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಹಾಗೂ ಸಾರಿಗೆ ಇಲಾಖೆಗಳಿಂದಲೂ ಭಾರಿ ಮೊತ್ತದ ಹೆಚ್ಚುವರಿ ಅನುದಾನದ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ.

ತೀವ್ರ ಬರ ಪರಿಸ್ಥಿತಿಯಿಂದಾಗಿ ಕೃಷಿ ಪಂಪ್‌ಸೆಟ್‌ಗಳ (ಐಪಿ-ಸೆಟ್) ವಿದ್ಯುತ್ ಸಬ್ಸಿಡಿ ವೆಚ್ಚಕ್ಕೆ ಹೆಚ್ಚುವರಿಯಾಗಿ 4,000 ದಿಂದ 5,000 ಕೋಟಿ ರೂಪಾಯಿಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆ ಬೀಳುವ ಆತಂಕ ಎದುರಾಗಿದೆ.

ಆರ್ಥಿಕ ಇಲಾಖೆಯ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆಶಿ,  ಆರ್ಥಿಕ ಇಲಾಖೆಯು ನೀಡಿರುವ ಎಚ್ಚರಿಕೆಯಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರದ ಹಿತದೃಷ್ಟಿಯಿಂದ ಎಚ್ಚರಿಕೆಯಿಂದ ಇರುವಂತೆ ಅವರು ಸಲಹೆ ನೀಡಿದ್ದಾರೆ. ಅಧಿಕಾರದಲ್ಲಿರುವ ನಮಗೆ ಆಡಳಿತವನ್ನು ಹೇಗೆ ನಡೆಸಬೇಕು ಎಂಬ ಸಂಪೂರ್ಣ ಅರಿವಿದೆ, ಅದನ್ನು ನಾವು ಸಮರ್ಥವಾಗಿ ಮಾಡುತ್ತೇವೆ. ಈ ವಿಷಯದ ಬಗ್ಗೆ ಮಾತನಾಡುವವರೆಲ್ಲರೂ ಮೊದಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ನ್ಯಾಯಯುತ ಪಾಲನ್ನು ಕೊಡಿಸಲಿ ಎಂದು ಸ್ಪಷ್ಟಪಡಿಸಿದರು.

Please follow and like us:

 

 

Translate »
[t4b-ticker]