https://youtu.be/NHc6OMSu0K4?si=SI_K4goOPEgwo6h2



ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ವಿದ್ಯಾರ್ಥಿಗಳು, ಉದ್ಯಮ ವಲಯ ಹಾಗೂ ಸಮಾಜಕ್ಕೆ ದೊರೆಯುವ ಪ್ರತ್ಯಕ್ಷ ಫಲಿತಾಂಶಗಳ ಆಧಾರದ ಮೇಲೆ ಅಳೆಯಬೇಕಾಗಿದ್ದು, ಉನ್ನತ ಶಿಕ್ಷಣದಲ್ಲಿ ತರುವ ಗಮನಾರ್ಹ ಸುಧಾರಣೆಯೇ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಅತ್ಯಗತ್ಯವಾದ ಅಡಿಪಾಯವಾಗಿದೆ ಎಂದು ನೀತಿ ಆಯೋಗದ ಸದಸ್ಯ ಪ್ರೊ. ಗೋಬರ್ಧನ್ ದಾಸ್ ಪ್ರತಿಪಾದಿಸಿದರು.
ನಗರದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಆವರಣದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ೩೨ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪದವೀಧರರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವುದು, ನಾವೀನ್ಯತೆ ಹಾಗೂ ನವೋದ್ಯಮಗಳಿಗೆ ನಿರಂತರ ಉತ್ತೇಜನ ನೀಡುವುದು ಮತ್ತು ಗುಣಮಟ್ಟದ ಸಂಶೋಧನೆಗಳ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ಕೊಂಡೊಯ್ಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನ್ಯಾಕ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ. ನಾಗೇಶ್ವರ ರಾವ್, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-೨೦೨೦ರ ಆಶಯದಂತೆ ಮಾನ್ಯತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ‘ವಿಬಿಎಸ್‌ಎ’ ಎಂಬ ಹೊಸ ಆಡಳಿತ ವಿಭಾಗವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು. ಸಂಸ್ಥೆ ಮತ್ತು ಕೋರ್ಸ್ ಆಧಾರಿತ ಮೌಲ್ಯಮಾಪನಗಳನ್ನು ಒಗ್ಗೂಡಿಸಿ, ಅತ್ಯಂತ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ‘ಒಂದು ರಾಷ್ಟ್ರ, ಒಂದು ಡೇಟಾ ವೇದಿಕೆ’ ಸಿದ್ಧಪಡಿಸಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಶೇ. ೪೫ ವಿಶ್ವವಿದ್ಯಾಲಯಗಳು ಮತ್ತು ಶೇ. ೨೫ ಕಾಲೇಜುಗಳು ಮಾತ್ರ ಮಾನ್ಯತೆ ಹೊಂದಿದ್ದು, ಗ್ರಾಮೀಣ ಹಾಗೂ ಹಿಂದುಳಿದ ಭಾಗದ ಸಂಸ್ಥೆಗಳನ್ನೂ ಗುಣಮಟ್ಟದ ಚೌಕಟ್ಟಿಗೆ ತರುವ ಕಾರ್ಯ ನಡೆಯುತ್ತಿದೆ ಎಂದರು.
ನ್ಯಾಕ್ ನಿರ್ದೇಶಕ ಪ್ರೊ. ಗಣೇಶನ್ ಕನ್ನಬಿರನ್ ಮಾತನಾಡಿ, ಡಾ.ರಾಧಾಕೃಷ್ಣನ್ ಸಮಿತಿಯ ಶಿಫಾರಸಿನ ಮೇರೆಗೆ ಶಿಕ್ಷಣ ಸಂಸ್ಥೆಗಳ ಕನಿಷ್ಠ ಗುಣಮಟ್ಟ ಖಾತರಿಗೆ ಮೂಲ ಮಾನ್ಯತೆ ಹಾಗೂ ಹಂತ-ಹAತವಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ‘ಮೆಚ್ಯೂರಿಟಿ ಬೇಸ್ಡ್ ಗ್ರೇಡೆಡ್ ಲೆವೆಲ್ಸ್’ ಎಂಬ ದ್ವಿಮುಖ ಮಾನ್ಯತಾ ವಿಧಾನವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು. ಸಮಾರಂಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು ಹಾಗೂ ನ್ಯಾಕ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


More Stories
ಸೆಪ್ಟೆಂಬರ್ 22 ರಂದು ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಏಕೈಕ ಟಿ20 ಪಂದ್ಯ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ