https://youtu.be/NHc6OMSu0K4?si=SI_K4goOPEgwo6h2



ಕೋಲ್ಕತಾ: ಸಾಂಪ್ರದಾಯಿಕ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಪಿಎಂ ವಿಶ್ವಕರ್ಮ ಯೋಜನೆ’ಯಂತಹ ಮಹತ್ವದ ಹಾಗೂ ಪರಿವರ್ತನಾತ್ಮಕ ಯೋಜನೆಯನ್ನು ರೂಪಿಸಿ ಜಾರಿಗೆ ತಂದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ರಾಜ್ಯದ ಸಮಸ್ತ ಜನರ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದರು.
ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಕೋಲ್ಕತ್ತಾದ ಧೋನೊ ಧನ್ಯೋ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಎಂ ವಿಶ್ವಕರ್ಮ ಅವರ ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಪ್ರಧಾನಮಂತ್ರಿಯವರ ದೂರದೃಷ್ಟಿಯ ಫಲವಾಗಿ ೨೦೨೩ರ ಸೆಪ್ಟೆಂಬರ್ ೧೭ರಂದು ದೇಶಾದ್ಯಂತ ಜಾರಿಗೆ ಬಂದ ಈ ಕ್ರಾಂತಿಕಾರಿ ಯೋಜನೆಯು ಇಂದು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಈಗಾಗಲೇ ದೇಶಾದ್ಯಂತ ಬರೋಬ್ಬರಿ ೩೦ ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಯೋಜನೆಯಡಿ ನೋಂದಾಯಿಸಿಕೊಂಡು ಪ್ರಯೋಜನ ಪಡೆಯುತ್ತಿರುವುದು ಯೋಜನೆಯ ಬೃಹತ್ ವ್ಯಾಪ್ತಿ ಮತ್ತು ಯಶಸ್ಸಿಗೆ ಸಾಕ್ಷಿಯಾಗಿದೆ.
ಅದರಲ್ಲಿಯೂ ಸುಮಾರು ೨೪.೫೦ ಲಕ್ಷ ಶ್ರಮಿಕರಿಗೆ ವೃತ್ತಿಪರ ಮೂಲಭೂತ ಕೌಶಲ್ಯ ತರಬೇತಿ ನೀಡಿರುವುದು ಹಾಗೂ ಇಂಡಿಯಾ ಪೋಸ್ಟ್ ಮುಖಾಂತರ ೧೮.೧೫ ಲಕ್ಷ ಜನರಿಗೆ ಅತ್ಯಾಧುನಿಕ ಟೂಲ್‌ಕಿಟ್‌ಗಳನ್ನು ನೇರವಾಗಿ ತಲುಪಿಸಿರುವುದು ಅತ್ಯಂತ ಶ್ಲಾಘನೀಯ ಸಾಧನೆ. ಅಷ್ಟೇ ಅಲ್ಲದೆ, ವಾರ್ಷಿಕ ಕೇವಲ ಶೇ. ೫ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ೬.೧೮ ಲಕ್ಷ ಫಲಾನುಭವಿಗಳಿಗೆ ಬರೋಬ್ಬರಿ ೫,೨೯೭ ಕೋಟಿ ರೂಪಾಯಿಗಳ ಆರ್ಥಿಕ ನೆರವು (ಸಾಲ) ನೀಡಿರುವುದು ಸಾಂಪ್ರದಾಯಿಕ ವೃತ್ತಿದಾರರ ಬದುಕಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ” ಎಂದು ಯೋಜನೆಯ ದೇಶವ್ಯಾಪಿ ಪ್ರಗತಿಯನ್ನು ಕೊಂಡಾಡಿದರು.

ಪಶ್ಚಿಮ ಬಂಗಾಳದಲ್ಲಿಯೂ ಈ ಯೋಜನೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ ೭ ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ ಕಟ್ಟಕಡೆಯ ಅರ್ಹ ಕುಶಲಕರ್ಮಿಗೂ ತರಬೇತಿ, ಟೂಲ್‌ಕಿಟ್ ಮತ್ತು ಕಡಿಮೆ ಬಡ್ಡಿಯ ಸಾಲ ಸೌಲಭ್ಯ ಸೇರಿದಂತೆ ಯೋಜನೆಯ ಎಲ್ಲಾ ಪ್ರಯೋಜನಗಳು ಪೂರ್ಣ ಪ್ರಮಾಣದಲ್ಲಿ ತಲುಪುವಂತೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಕೈಜೋಡಿಸಿ ಯೋಜನೆಯ ತ್ವರಿತ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಲಿದೆ. ಎಂಎಸ್‌ಎಂಇ ಉಪಕ್ರಮಗಳ ಸಮರ್ಪಕ ಬಳಕೆಯು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ದ ಸಂಕಲ್ಪವನ್ನು ಸಾಕಾರಗೊಳಿಸಲು ಭದ್ರ ಬುನಾದಿಯಾಗಲಿದೆ” ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಎಂಎಸ್‌ಎಂಇ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆ’ಯ ಯಶಸ್ವಿ ೩ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಫಲಾನುಭವಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಸಾಂಪ್ರದಾಯಿಕ ವೃತ್ತಿಯಿಂದ ಸ್ವಾವಲಂಬಿ ಉದ್ಯಮಶೀಲತೆಯತ್ತ ಹೆಜ್ಜೆಯಿಡುತ್ತಿರುವ ನಿಮ್ಮೆಲ್ಲರ ಹೊಸ ಪಯಣಕ್ಕೆ ಶುಭ ಹಾರೈಸುತ್ತೇನೆ,” ಎಂದರು.
“ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ ಕೌಶಲ್ಯ ತರಬೇತಿ, ಅತ್ಯಾಧುನಿಕ ಉಪಕರಣಗಳು ಹಾಗೂ ರಿಯಾಯಿತಿ ಬಡ್ಡಿದರದ ಸಾಲದಂತಹ ಅಗಾಧ ಅವಕಾಶಗಳು ಲಭ್ಯವಿವೆ. ಪ್ರತಿಯೊಬ್ಬ ವಿಶ್ವ ಕರ್ಮರೂ ಈ ಎಲ್ಲಾ ಸೌಲಭ್ಯಗಳನ್ನು ಸಂಪೂರ್ಣ ವಾಗಿ ಸದ್ಬಳಕೆ ಮಾಡಿಕೊಂಡು ಯಶಸ್ವಿ ಉದ್ಯಮಿ ಗಳಾಗಿ ಹೊರಹೊಮ್ಮಬೇಕು. ಇತ್ತೀಚೆಗಷ್ಟೇ ಈ ಯೋಜನೆಯನ್ನು ಅಳವಡಿಸಿಕೊಂಡಿರುವ ಪಶ್ಚಿಮ ಬಂಗಾಳ ರಾಜ್ಯಕ್ಕೆ ಈ ದಿನ ಅತ್ಯಂತ ವಿಶೇಷವಾದದ್ದು. ಏಕೆಂದರೆ, ರಾಜ್ಯದಲ್ಲಿ ಯೋಜನೆ ಜಾರಿ ಯಾದ ಬಳಿಕ ಕೇಂದ್ರ ಎಂಎಸ್‌ಎಂಇ ಸಚಿವಾಲಯವು ನಡೆಸುತ್ತಿರುವ ಚೊಚ್ಚಲ ಬೃಹತ್ ಕಾರ್ಯಕ್ರಮ ಇದಾಗಿದೆ ಎಂದರು.
ಎಂಎಸ್‌ಎಂಇ ಸಚಿವಾಲಯದ ಕೇಂದ್ರ ಸಂಪುಟ ಸಚಿವ ಜಿತನ್ ರಾಮ್ ಮಾಂಝಿ, ಕೇಂದ್ರ ಎಂಎಸ್‌ಎಂಇ ರಾಜ್ಯ ಸಚಿವ ಶೋಭಾ ಕರಂದ್ಲಾಜೆ, ಪಶ್ಚಿಮ ಬಂಗಾಳ ಸರ್ಕಾರದ ಎಂಎಸ್‌ಎಂಇ ಮತ್ತು ಜವಳಿ ಸಚಿವ ದೀಪಕ್ ಬರ್ಮನ್ ಇತರರಿದ್ದರು.


More Stories
ಸೆಪ್ಟೆಂಬರ್ 22 ರಂದು ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಏಕೈಕ ಟಿ20 ಪಂದ್ಯ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ