https://youtu.be/NHc6OMSu0K4?si=SI_K4goOPEgwo6h2



ಹೊಸಪೇಟೆ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯನ್ನು ಇದೇ ಸೆಪ್ಟೆಂಬರ್ 19ರಂದು ಹಾವೇರಿಯ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆಯೇ ಸಂಘದ ಅಧಿಕೃತ ವಾರ್ಷಿಕ ಮಹಾಸಭೆಯಾಗಿದ್ದು, ಸಂಘದ ಸದಸ್ಯರು ಯಾವುದೇ ಗೊಂದಲ ಅಥವಾ ಅಪಪ್ರಚಾರಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ನಿಕಟಪೂರ್ವ ಅಧ್ಯಕ್ಷರುಗಳು ಮನವಿ ಮಾಡಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು, ನಾಗನಗೌಡ್ರು ಹಾಗೂ ಜಿ.ಪಿ. ಪಾಟೀಲ್ ಅವರು, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಯಾವುದೇ ವ್ಯಕ್ತಿ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಸ್ಥಾಪನೆಯಾದ ಸಂಸ್ಥೆಯಲ್ಲ. ಸಮಾಜದ ಸಮಗ್ರ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ರೂಪುಗೊಂಡ ಸಂಘವಾಗಿದೆ ಎಂದು ಸ್ಪಷ್ಟಪಡಿಸಿದರು.
1994ರಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಹನುಮಾನಾಳು ಗುರುಗಳ ನೇತೃತ್ವದಲ್ಲಿ ಸ್ಥಾಪನೆಯಾದ ಸಂಘ, ಅಂದಿನಿಂದ ಇಂದಿನವರೆಗೆ ಪಂಚಮಸಾಲಿ ಸಮಾಜದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಸಮಾಜದ ಹಿತಾಸಕ್ತಿಗಳನ್ನು ರಕ್ಷಿಸುವುದು, ಸಮಾಜದ ಜನರನ್ನು ಸಂಘಟಿಸುವುದು ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಮಾಜದ ಸಂಘಟನೆಗೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ 2008ರಲ್ಲಿ ಹರಿಹರದಲ್ಲಿ ಸಮಾಜಕ್ಕಾಗಿ ಪ್ರತ್ಯೇಕ ಪೀಠವನ್ನು ಸ್ಥಾಪಿಸಲಾಯಿತು. ಪೀಠದ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ಸಮಾಜದ ಜನರನ್ನು ಒಗ್ಗೂಡಿಸುವ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪೀಠ, ಟ್ರಸ್ಟ್ ಹಾಗೂ ಸಂಘಗಳು ತಮ್ಮದೇ ಆದ ಉದ್ದೇಶ ಮತ್ತು ಕಾರ್ಯವ್ಯಾಪ್ತಿಯೊಂದಿಗೆ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿವೆ ಎಂದು ವಿವರಿಸಿದರು.

ಆದರೆ, ಇತ್ತೀಚಿನ ದಿನಗಳಲ್ಲಿ ಹರಿಹರ ಪೀಠದಲ್ಲಿ ನಡೆದ ಕೆಲವು ಘಟನೆಗಳು ಹಾಗೂ ಬೆಳವಣಿಗೆಗಳಿಂದ ಸಮಾಜದ ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪೀಠ, ಟ್ರಸ್ಟ್ ಹಾಗೂ ಸಂಘದ ವಿಚಾರಗಳನ್ನು ಪರಸ್ಪರ ಜೋಡಿಸಿ ಗೊಂದಲ ಸೃಷ್ಟಿಸುವ ಹಾಗೂ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಅಪಪ್ರಚಾರ ಮಾಡುವ ಪ್ರಯತ್ನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು.
ಸಂಘದ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ಸಂಘದ ಸಂವಿಧಾನ, ನಿಯಮಾವಳಿ ಹಾಗೂ ಸದಸ್ಯರ ಸಾಮಾನ್ಯ ಸಭೆಯ ಮೂಲಕವೇ ನಡೆಯಬೇಕು. ಸಂಘದ ಸದಸ್ಯರೇ ಸಂಘದ ಪ್ರಮುಖ ಶಕ್ತಿ. ಆದ್ದರಿಂದ ಹೊರಗಿನ ಅಪಪ್ರಚಾರಗಳು, ವೈಯಕ್ತಿಕ ಅಭಿಪ್ರಾಯಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೊಂದಲಕಾರಿ ಮಾಹಿತಿಗಳಿಗೆ ಸದಸ್ಯರು ಮಹತ್ವ ನೀಡಬಾರದು ಎಂದು ಮನವಿ ಮಾಡಿದರು.
ಸೆಪ್ಟೆಂಬರ್ 19ರಂದು ಹಾವೇರಿಯಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧಿಕೃತ ಮಹಾಸಭೆಯಾಗಿದ್ದು, ಸದಸ್ಯರಿಗೆ ಈಗಾಗಲೇ ತಿಳುವಳಿಕೆ ಪತ್ರ ಕಳುಹಿಸಲಾಗಿದೆ. ಸಭೆಯಲ್ಲಿ ಸಂಘದ ವಾರ್ಷಿಕ ವರದಿ, ಚಟುವಟಿಕೆಗಳು, ಆರ್ಥಿಕ ವ್ಯವಹಾರಗಳು ಹಾಗೂ ಮುಂದಿನ ಕಾರ್ಯಯೋಜನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ಸಂಘದ ಭವಿಷ್ಯದ ಬೆಳವಣಿಗೆ ಹಾಗೂ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಸದಸ್ಯರು ಈ ಮಹಾಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಭಿನ್ನಾಭಿಪ್ರಾಯಗಳಿದ್ದರೂ ಸಂವಿಧಾನಬದ್ಧವಾಗಿ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ವೈಯಕ್ತಿಕ ಪ್ರತಿಷ್ಠೆಗಿಂತ ಸಮಾಜದ ಹಿತವೇ ಮುಖ್ಯ ಎಂಬ ಮನೋಭಾವದಿಂದ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಬಿ. ನಾಗನಗೌಡ್ರು, ಜಿ.ಪಿ. ಪಾಟೀಲ್, ಹಂಗಾಮಿ ಅಧ್ಯಕ್ಷರಾದ ಶಂಕರ್ ಆರ್. ಬಿಸರಹಳ್ಳಿ, ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ವಸಂತ ಉಲ್ಲತ್ತಿ, ಯುವ ಘಟಕದ ರಾಜ್ಯಾಧ್ಯಕ್ಷ ಕಿಚಿಡಿ ಕೊಟ್ರೇಶ್ ಹಾಗೂ ಮುಖಂಡರಾದ ಸಿದ್ದೇಶ್ ಹಣೆಸಿ, ಬೊಪ್ಪಕಾನ್ ಕುಮಾರಸ್ವಾಮಿ, ಷಣ್ಮುಖಪ್ಪ, ಸಿದ್ದೇಶ್ ಬೇಗೂರು, ಶಿವಕುಮಾರ್ ಬಳೆಗಾರ, ಅಕ್ಕಿ ಶಿವಕುಮಾರ, ಶಶಿಕಲಾ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


More Stories
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ
ಹೈದರಾಬಾದ್ನಲ್ಲಿ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಕೃಷಿ ಸಮ್ಮೇಳನ ಮುಕ್ತಾಯ