https://youtu.be/NHc6OMSu0K4?si=SI_K4goOPEgwo6h2



ದೇವಕುಲಸಂಕೇತಗಳಾಗರದ ಹೊರಗು;
ಕಟ್ಟಿಕೊಂಡೇ ಇರುವ ಕಾರ್ಕೋಟಕದೊಳಗು.
ಪಟ್ಟೆ ಮುದ್ರೆಯ ನೊಸಲಬಿಸಿಲು;
ಕೊತ್ತಿನಡಿಗೆಯ ಗತ್ತು, ವ್ಯಾಘ್ರವರ್ಣ;
ಕಣ್ಣಕೊನೆಹನಿ ಬಿತ್ತು ನಕ್ರಾಕ್ಷಿಪಾತ;
ಪಾದಧೂಳಿಯ ಕೈಗೆ ದೀಕ್ಷಾದಂಡ ಶೋಭಿತ;
ಬಾಯಲ್ಲಿ ಜಿಟಿಪಿಟಿ ದೇವಜಪತಪ;
ಶಹಬಾಸ್ ಗುರುವೇ, ನಮೋ ನಮೋ ಎನುವೆ
ಕಾಯಕವೀರನ ಕಂಡಿಹಿರೇನು?
ತಪ್ಪದು ಜಪತಪ ತ್ರಿಕಾಲದಲ್ಲಿ;
ಮನವೇ ನಿಲ್ಲದು ಕಾಯಕದಲ್ಲಿ;
ಗುರಿ ಜಾರದ ಗುಂಜಾರವ ಜಾಗರ;
ಕಂಡವರಿಗೆ, ಉಂಡವರಿಗೆ ಸೋದರ!
ಬೆರಗೋ ಬೆರಗದು!
ಸಂಬಳ ಬರುವುದು ತಪ್ಪದೆ ತಿಂಗಳ ಕೊನೆಗೆ!
ಶಹಬಾಸ್ ಗುರುವೇ, ನಮೋ ನಮೋ ಎನುವೆ
ಯಾರು ತೀರಿದರೂ ಊರುಕೇರಿಯಲಿ;
ಮುಂದೆ ನಿಲ್ಲುವನು ಪಿಂಡಪಾರAಗತ;
ತಾವೇ ಕೊಡ, ಬೇರಾರಿಗೂ ಇವ;
ಮನವೇ ನಿಲ್ಲದು ಕಾಯಕದಲ್ಲಿ
ಬೆರಗೋ ಬೆರಗದು!
ಸಂಬಳ ಬರುವುದು ತಪ್ಪದೆ ತಿಂಗಳ ಕೊನೆಗೆ!
ಶಹಬಾಸ್ ಗುರುವೇ, ನಮೋ ನಮೋ ಎನುವೆ
ಥೇಟು ದೇವನಪರಾವತಾರ;
ಸೂಜಿಮೊನೆ ಸಿಕ್ಕರೂ ಬಿಡದೆ ನೆಕ್ಕುವನೀತ;
ಲಂಚ ಮುಟ್ಟುವುದಿಲ್ಲ; ಮಂಚ ಏರುವುದಿಲ್ಲ,
ಸಂಚಿನಲಿ ಬಲು ನಿಪುಣ, ಸುಳ್ಳಾಗ್ರೇಸರ;
ಕಣ್ಣು ಮಿಟುಕಿ, ಮಾತು ಕುಟುಕಿ
ಒಡೆದ ಮನೆಯ ಕಿಟಕಿ;

ಬೆರಗೋ ಬೆರಗದು!
ಸಂಬಳ ಬರುವುದು ತಪ್ಪದೆ ತಿಂಗಳ ಕೊನೆಗೆ!
ಶಹಬಾಸ್ ಗುರುವೇ, ನಮೋ ನಮೋ ಎನುವೆ
ಹೆಗಲ ಜೋಳಿಗೆ ತುಂಬ ದಾನದಕ್ಷಿಣೆ ತುಂಬಿ-
ತುಳುಕುವುದು ಭಾರ, ನಗೆಮೊಗದ ವೀರ;
ಮುಂಚೆನುವರೆಲ್ಲರನು ಹಿಂದಿಕ್ಕಿ ಹೊಸಕಿ;
ಕಾಲಕಸಗೊಳಿಸಿ ನಡೆವ ಭೂಪ;
ಅಹಹಾ ವೀರ, ಇವನೆ ಧೀರ;
ಎಲ್ಲ ಮನೆ ನಾಯಿಯೂ ಬೊಗಳುವುದು ತನ್ನ ಬೌಂಡರಿಯಲ್ಲಿ
ಬಾಲ ನಿಗುರಿ, ಮೇಲೆ ಎಗರಿ, ತೋರಿ ವೀರ ಪೌರುಷ;
ದಾಟಿದರೆ ಎಲ್ಲೆ, ಅದರಾಚೆ ಠುಸ್!
ಬುದ್ಧಿ ಬರುವುದೇ ಇವಗೆ? ಜನ್ಮಜಾತದ ದೋಷ;
ಬುದ್ಧ ಬೆಳಕನು ಹೊತ್ತು ಸುತ್ತುವಾತ;
ಹೋದಲ್ಲಿ, ಬಂದಲ್ಲಿ, ಒಂದೇ ಮಂತ;್ರ
ಎಲ್ಲವನು ಮುಗಿಸಿ ಸಿಕ್ಕಷ್ಟು ಮುಕ್ಕಿ;
ನುಂಗಿನೊಣೆಯುವ ತಂತ್ರ ಕುಲಿಶಕುಶಲಿ;
ಕೋತಿ ಕಜ್ಜಾಯ ನ್ಯಾಯ;
ಮಾತೋ, ಹಂಸಕ್ಷೀರನ್ಯಾಯ;
ಉಂಡಮನೆ ಜಂತಿ ಎಣಿಸುವ ಸಂತ;
ಕುಟ್ಟೆಹುಳು ಕಾಯಕದಿ ಸತತ ನಿರತ.
ಜಠರಾಗ್ನಿ ಜ್ವಾಲೆಯಲಿ ನೊಂದು ಬೆಂದವನಲ್ಲ;
ಕರುಣೆ, ಕಕ್ಕುಲಾತಿಗಳು ಗೊತ್ತೇ ಇಲ್ಲ;
ಈ ಈತ ಸ್ವಘೋಷಿತ ಸಂತ;
ರಾಮನವತಾರ ಮೋರೆ; ಒಳಗೆ ಕೃಷ್ಣನ ತೊರೆ;
ಆದರೂ ಕರೆವರೆಲ್ಲರು ಇವನ
ಮನೆಮನೆಯ ಭಿನ್ನಕ್ಕೆ, ಉಳಿದ ಮೃಷ್ಟಾನ್ನಕ್ಕೆ;
ಬಾಗುವರಿವಗೆ ಭಾಳ ಮಂದಿ;
ಶಹಬಾಸ್ ಗುರುವೇ, ನಮೋ ನಮೋ ಎನುವೆ.
– ಡಾ. ಬಿ.ಜಿ. ಕನಕೇಶಮೂರ್ತಿ, ವಿಶ್ರಾಂತ ಪ್ರಾಧ್ಯಾಪಕ



More Stories
ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರು
ವಿಜಯನಗರ ಪ್ರಗತಿಗೆ ಸರ್ಕಾರದ ಸಂಕಲ್ಪ
ಬಾನಂಗಳದಲ್ಲಿ ಸೂರ್ಯನ ಪ್ರಭಾವಲಯ, ಮಳೆಯ ಮುನ್ಸೂಚನೆಯ ಸಂಕೇತ