September 21, 2026

Hampi times

Kannada News Portal from Vijayanagara

ಅಭಿಯಂತರ ಕ್ಷೇತ್ರದ ಮಾಣಿಕ್ಯ ಸರ್ ಎಂವಿ

https://youtu.be/NHc6OMSu0K4?si=SI_K4goOPEgwo6h2

ಆಧುನಿಕ ಭಾರತದ ಪಿತಾಮಹ ಸರ್ ಎಂ ವಿ
ಬಡತನ ಎನ್ನುವುದು ಒಬ್ಬ ಮನುಜನಿಗೆ ಎಷ್ಟೊಂದು ಪಾಠ ಕಲಿಸುತ್ತದೆಯೆಂದರೆ ಪದಗಳಲ್ಲಿ ವರ್ಣಿಸಲು ಅಸದಳ.ಪ್ರತಿ ಹಂತದಲ್ಲಿಯೂ ಸವಾಲುಗಳನ್ನು ಎದುರಿಸುತ್ತ ಮನೆಯಲ್ಲಿ ಲೈಟ್ ಇಲ್ಲದಿದ್ದಕ್ಕೆ ಕೈ ಕಟ್ಟಿ ಸುಮ್ಮನೆ ಕುಳಿತುಕೊಳ್ಳದೆ ತಂದೆ ತಾಯಿಯು ಪಡುತ್ತಿರುವ ಕಷ್ಟ ಕಂಡು ಬೀದಿ ದೀಪದ ಬೆಳಕಿನಲ್ಲಿ ಹಗಲಿರುಳು ಎನ್ನದೆ ಓದುತ್ತ ತನ್ನೊಡಲಲ್ಲಿ ಅದೆಷ್ಟೋ ದುಃಖವನ್ನು ಸಹಿಸುತ್ತ ಸಾಧಿಸಲೇ ಬೇಕೆಂಬ ಹಠ ತೊಟ್ಟು ಸತತ ನಿರಂತರವಾದ ಪರಿಶ್ರಮದಿಂದ ಛಲದಿಂದ ಓದಿಗೆ ಬಹಳಷ್ಟು ಸಮಯ ಮೀಸಲಿಡುತ ಹೆತ್ತವರ ನೋವನು ಕಣ್ಣಾರೆ ಕಾಣುತ್ತ ದೇಶದ ಬಗ್ಗೆ ಕನಸು ಕಾಣುತ್ತ ಮೊಗದಲ್ಲಿ ಅಗಮ್ಯ ಉತ್ಸಾಹ ಹೊತ್ತು ಸತತವಾದ ಅಧ್ಯಯನದಿಂದ ಇಡೀ ಜಗತ್ತು ಊಹಿಸಲಾರದಷ್ಟು ಸಾಧನೆ ಮಾಡಿದ ಆಧುನಿಕ ಮೈಸೂರಿನ ನಿರ್ಮಾಪಕ.ಸಾಧನೆಯ ಸಾರಥಿ,ಅಭಿಯಂತರರ ಕ್ಷೇತ್ರದ ಮಾಣಿಕ್ಯ ಅನುಪಮ ಅಪರೂಪ ಗುಣಗಳುಳ್ಳ ಗುಣವಂತ ಸಮಾಜದ ಹಿತ ಚಿಂತಕ ಸರಳತೆಯ ಸಾಕಾರಮೂರ್ತಿ ಬಡವರ ಪಾಲಿನ ಕರುಣಾಕರ,ಅಭಿನವ ಭಗೀರಥ,ರೈತರ ಪಾಲಿನ ದೇವರು,ಮಂಡ್ಯ ಜಿಲ್ಲೆಯ ಜನರ ಮನದಲಿ ಸದಾ ನೆಲೆಸಿರುವ ಅಪ್ರತಿಮ ವ್ಯಕ್ತಿತ್ವದ ದೊರೆ ,ಕೈಗಾರಿಕೆ ಕ್ಷೇತ್ರಕ್ಕೆ ಜೀವವಿತ್ತ ಜನ್ಮದಾತ,ಮೈಸೂರಿನ ಗರಿಮೆ ದೇಶದ ಉದ್ದಗಲ್ಲಕ್ಕೂ ಪಸರಿಸಿದ ಕನ್ನಡ ನಾಡಿನ ಕುಡಿ,ಭಾರತ ಮಾತೆಯ ಹೆಮ್ಮೆಯ ಪುತ್ರ,ಸಕಲ ಕ್ಷೇತ್ರಗಳ ಅಭಿವೃದ್ಧಿಯ ಮುಕುಟಮಣಿ ನಿಷ್ಠೆ ಪ್ರಾಮಾಣಿಕತೆ ಕಾರ್ಯತತ್ಪರತೆಗೆ ಬೇರು.ದೇಶ ಎಂದಿಗೂ ಮರೆಯದ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ನಮ್ಮ ನಿಮ್ಮೆಲ್ಲರ ಆದರ್ಶ ವ್ಯಕ್ತಿ, ಶಿಕ್ಷಣ ಶಿಲ್ಪಿ,ಆರ್ಥಿಕ ತಜ್ಞ,ಅಣೆಕಟ್ಟು ನಿರ್ಮಾಣದ ಶ್ರೇಷ್ಠ ವಿನ್ಯಾಸಕಾರ,ಆಧುನಿಕ ಭಾರತ ನಿರ್ಮಾತೃ,
ದೇಶ ಕಂಡ ಅದ್ಭುತ ಇಂಜನಿಯರ್ ಸರ್ ಎಂ ವಿಶ್ವೇಶ್ವರಯ್ಯ.
ಅತ್ಯಂತ ಕಡು ಬಡತನದಲ್ಲಿ ಜನಿಸಿದ ಸರ್ ಅವರು ಸೆಪ್ಟೆಂಬರ್ 15 ರಂದು 1860 ರಲ್ಲಿ ಕನ್ನಡ ನಾಡಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಳ್ಳಿಯಲ್ಲಿ ತಂದೆ ಶ್ರೀನಿವಾಸ ಶಾಸ್ತ್ರಿ ತಾಯಿ ವೆಂಕಟಲಕ್ಷ್ಮ ಮ ಅವರ ಮಗನಾಗಿ ಜನಿಸಿದರು.ಇವರ ಹೆಸರಿನ ಜೊತೆ ಮೋಕ್ಷಗುಂಡಂ ಸೇರಲು ಕಾರಣ ಇವರ ಪೂರ್ವಜರು ಆಂಧ್ರಪ್ರದೇಶದ ಮೋಕ್ಷಗುಂಡಂ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೆನಹಳ್ಳಿಯಲ್ಲಿ ನೆಲೆಸಿದ್ದಕ್ಕಾಗಿ.ಈ ಹೆಸರು ಸೇರಿದೆ.
ಪ್ರತಿಯೊಂದು ಕೆಲಸವನ್ನು ಶ್ರದ್ಧೆ,ನಿಷ್ಠೆಯಿಂದ ಮಾಡು ಅದುವೇ ಕಾಯಕದ ಧ್ಯೇಯ ಎನ್ನುವರು.ಈ ಜಗತ್ತಿನಲ್ಲಿ ಯಾವುದು ಕೆಲಸವೂ ಮೇಲು ಕೀಳು  ಎಂಬುವುದಿಲ್ಲ ಎನ್ನುತ್ತಾ ಈ ರಸ್ತೆಯ ಕಸಗುಡಿಸುವುದಾದರೆ ಜಗತ್ತಿನ ಅತ್ಯಂತ ಸ್ವಚ್ಛ ರಸ್ತೆಯಾಗುವಂತೆ ಗೂಡಿಸು,ಅದೃಷ್ಟ ಎನ್ನುವುದು ದೇವರು ನಿರ್ಧರಿಸುವುದಿಲ್ಲ ನಮ್ಮ ವಿಧಿಯದು ನಮ್ಮ ಕಾರ್ಯ ಸಾಧನವನ್ನು ಅವಲಂಬಿಸುವುದು.ಇದುವೇ ನಮ್ಮ ಕೈಯಲ್ಲಿರುವ ಸಾಧನ ಎನ್ನುತ್ತಾ ಕಾರ್ಯವೇ ಸಕಲ ನಿರ್ಧಾರಕ ಎಂಬುದು ಸರ್ ಅವರ ಮಾತುಗಳನು ಗಮನಿಸಿದಾಗ ತಿಳಿಯುತ್ತದೆ.ಕೆಲಸ ಕೆಲಸ ಎನ್ನುತ್ತ ಹಗಲಿರುಳು ಎನ್ನದೆ ಕಾರ್ಯದಲ್ಲೇ ಮಗ್ನರಾಗುತ ಕರ್ಮಯೋಗಿಯಾಗಿ ಕರ್ಮಭೂಮಿಯ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟ ದಿಟ್ಟತನದ ರೂವಾರಿಯಿವರು.ಯಾವುದೇ ಕ್ಷೇತ್ರದಲ್ಲೂ ತಮ್ಮ ಹೆಸರನ್ನು ಅಚ್ಚಳಿಯದೆ ಮೂಡಿಸಿ ಪ್ರತಿ ಕ್ಷೇತ್ರದ ಕಣ್ಣಾಗಿ ಅವಿರತ ಶ್ರಮಿಸಿದರು.
ಅಣೆಕಟ್ಟುಗಳ ವಿನ್ಯಾಸದ ಜನಕ
ಸರ್ ಅವರು ಆಣೆಕಟ್ಟುಗಳ ವಿನ್ಯಾಸವನ್ನು ರೂಪಿಸುವ ರೀತಿ ಅವರ ಚಾಣಕ್ಯತೆಗೆ ಪ್ರತಿಭೆಗೆ ಹಿಡಿದ ಕೈಗನ್ನಡಿ ಹಲವಾರು ನದಿಗಳು ಉಕ್ಕಿ ಹರಿದು ಪ್ರವಾಹ ಸ್ಥಿತಿ ಉದ್ಭವಿಸುತ್ತಿತ್ತು.ಇದಕ್ಕೆ ಒಂದು ಉದಾಹರಣೆ ಎಂದರೆ ಹೈದರಾಬಾದಿನ ಮುಸಿ ನದಿಯ ಸಮಸ್ಯೆಗೆ ಪರಿಹಾರ ಒದಗಿಸಿದರು.ಅಲ್ಲದೆ ಬ್ರಿಟಿಷರ ಕಾಲದಲ್ಲಿ ಹಲವಾರು ಬಗೆಯ ಜಲ ಸಮಸ್ಯೆಗಳನು ಪರಿಹರಿಸಿ ಬ್ರಿಟಿಷ ಸರ್ಕಾರದ ಗೌರವಕ್ಕೆ ಪಾತ್ರರಾದರು. ಯಾವುದೇ ಅಣೆಕಟ್ಟು ವಿನ್ಯಾಸ ರೂಪಿಸಲು ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಅದ್ಯಯನ ಮಾಡಿ ಆಗು ಹೋಗುಗಳನ್ನು ಅರಿತು ಅನುಕೂಲಕರ ರೀತಿಯಲ್ಲಿ ರೈತರ ಹಿತವನ್ನು ದೃಷ್ಟಿಕೋಣದಲ್ಲಿಟ್ಟುಕೊಂಡು ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿ ರೈತರ ಏಳಿಗೆಗೆ ಟೊಂಕ ಕಟ್ಟಿ ನಿಂತ ಅನ್ನದಾತನ ಪಾಲಿನ ದೇವರಾದರು.ಕನ್ನಂಬಾಡಿ ಅಣೆಕಟ್ಟಿನ ಮುಖ್ಯ ರೂವಾರಿ ಕೂಡ ವಿಶ್ವೇಶ್ವರಯ್ಯನವರೇ ಮೈಸೂರು ಭಾಗದ ಜನರ ಮನಸ್ಸಿನಲ್ಲಿ ಸರ್ ಅವರ ಹೆಸರು ಚಿರಂತನವಾಗಿ ನೆಲೆಸಿದೆ.ಹೀಗೆ ಅಣೆಕಟ್ಟುಗಳನು ವಿನ್ಯಾಸಿಸಿ ಜಗತ್ತಿನ ಇಂಜನಿಯರ್ ಗಳಿಗೆ ಮಾದರಿಯಾಗಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ  ಅವರ ದೂರದೃಷ್ಟಿ ಆಲೋಚನೆ ಮತ್ತು ಇವರ ಸಾಧನೆಗೆ ಪ್ರೇರಕ ಸೂತ್ರಗಳು
1.ಸಮಯಪ್ರಜ್ಞೆ
2.ಕಾರ್ಯಗಳನ್ನು ಸಮಚಿತ್ತದಿಂದ ನೋಡುವ ಮನೋಭಾವ
3.ನಾಡಿನ ಅಭಿವೃದ್ಧಿಯ ತುಡಿತ
4.ಹಿಡಿದ ಕಾರ್ಯ ಪೂರ್ಣಗೊಳಿಸಬೇಕೆಂಬ ಕಟ್ಟು ನಿಟ್ಟಿನ ನಿರ್ಧಾರ
5.ಅಧ್ಯಯನ ಮಾಡಿ ಯೋಜನೆಗಳ ರೂಪಿಸುವ ಚಾಣಕ್ಯತೆ
6.ನೈಪುಣ್ಯತೆ,ನಾವೀನ್ಯತೆ,ಹೊಸತನದ ಬಗ್ಗೆ ಆಸಕ್ತಿ
7.ಕಾರ್ಯವು ಇನ್ನೊಬ್ಬರಿಗೆ ಪ್ರೇರಣೆಯಾಗಬೇಕೆಂಬ ಇಚ್ಛೆ
8.ನಮ್ಮ ಸ್ಥಿತಿಯು ಮುಖ್ಯವಲ್ಲ ಸಾಧಿಸುವ ಮನಸ್ಥಿತಿ ಮುಖ್ಯ ಎಂಬ ಕ್ರಿಯಾಶೀಲತೆ ಪರಿಭಾವ
9. ಬುದ್ಧಿಶಕ್ತಿಯ ಪ್ರಯೋಗಿಸುವ ಪ್ರಾವೀಣ್ಯತೆ
ಹೀಗೆ ಹೇಳುತ್ತಾ ಹೋದಂತೆ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಬೆಳೆಯುತ್ತ ಹೋಗುತ್ತದೆ.ಇಂತಹ ಮಹಾತ್ಮರು, ಸಾಧಕರು ಜನಿಸಿದ ಈ ಭವ್ಯ ಭೂಮಿಯಲ್ಲಿ ಜನಿಸಿದ ನಾವೇ ಧನ್ಯ ಇವರೇ ನಮಗೆಲ್ಲ ಗುರುವಿನಂತೆ ದಾರಿದೀಪವಾಗಿದ್ದಾರೆ.
ಮೈಸೂರಿನ ದಿವಾನರಾಗಿ ವಿವಿಧ ರಾಜ್ಯಗಳಲ್ಲಿ ಇಂಜನಿಯರ್ ರಾಗಿ ಅಗಣಿತ ಯೋಜನೆಗಳನ್ನು ನಿರ್ಮಿಸಿ ಆ ರಾಜ್ಯಗಳ ಪಾಲಿನ ಆಪ್ತಬಂಧುವಾಗಿ ಅಜರಾಮರರಾಗಿದ್ದಾರೆ.ಇವರ ಸಾಧನೆ ಬೆನ್ನತ್ತಿ ಹಲವಾರು ಪ್ರಶಸ್ತಿಗಳು ಮುಡಿಗೇರಿದವು.1883 ಜೇಮ್ಸ್ ಬರ್ಕಲೆ ಪ್ರಶಸ್ತಿ,ಲಂಡನ್  ಸಿವಿಲ್ ಇಂಜನೀಯರಿಂಗ್ ಸಂಸ್ಥೆಯ ಗೌರವ ಸದಸ್ಯತ್ವ.ಎಡನ್ ಜನರಿಗೆ ಕುಡಿಯುವ ನೀರು ಯೋಜನೆ ರೂಪಿಸಿದ್ದಕ್ಕಾಗಿ ಕೈಸರ್ ಎ ಹಿಂದ್ ಪ್ರಶಸ್ತಿ,ಎಂಪೈರ್ ಪ್ರಶಸ್ತಿ,ಕಲ್ಕತ್ತಾ ವಿಶ್ವವಿದ್ಯಾಲಯದ ಡಾಕ್ಟರ್ ಆಪ್ ಸೈನ್ಸ ಪ್ರಶಸ್ತಿ,ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಾಕ್ಟರ್ ಆಪ್ ಲಿಟರೇಚರ್ ಗೌರವ,1955 ರಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಭಾರತ ರತ್ನ ಪ್ರಶಸ್ಟ್ರಿ ಹೀಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದವು.
ಇಂತ ಮಹಾಚೇತನರ ನಡೆ ನುಡಿಗಳು ನಮಗೆಲ್ಲ ಸ್ಫೂರ್ತಿಯಸೆಲೆ,ಸಾಧಿಸಲು ಪ್ರೇರಕ ಶಕ್ತಿ ಇವರು ಬದುಕಿ ಬಾಳಿದ ರೀತಿ ಸಾಧಿಸುವ ಹಠ ನಮಗೆಲ್ಲವು ಗೆಲುವಿನ ಪಾಠಗಳು ಯಶಸ್ಸಿಗೆ ಮೂಲ ಮಂತ್ರಗಳು.ಇಂಥವರ ಜನನವೇ ನಮಗೆ ಶ್ರೀರಕ್ಷೆ,ಸದಾ ಪ್ರಕೃತಿಯಂತೆ ಎಲ್ಲರೊಳು ಬೆರೆತು ದೇಶವನ್ನು ಬೆಳಗಿ ವಿನೂತನ ರೀತಿಯಲ್ಲಿ ಭಾರತವನ್ನು  ನಿರ್ಮಿಸಿದ ಆಧುನಿಕ ಭಾರತದ ಪಿತಾಮಹ ಅಭಿಯಂತರ ಕ್ಷೇತ್ರದ ರೂವಾರಿ. ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದರೂ ಮೂಲತಃ ಇಂಜನಿಯರ್ ಆಗಿದ್ದರಿಂದ ಇವರ ಜನ್ಮದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 15 ರಂದು ರಾಷ್ಟ್ರೀಯ ಇಂಜನಿಯರ್ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ.ಇಂದು ನಾವೆಲ್ಲ ವಿಶ್ವೇಶ್ವರಯ್ಯನವರು ಹಾಕಿ ಕೊಟ್ಟ ಸನ್ಮಾರ್ಗದಿ ಸಾಗೋಣ ದೇಶದ ಏಳಿಗೆಗೆ ದುಡಿಯೋಣ.
ಒಂದು ದೇಶವನ್ನು ಕಟ್ಟುವಲ್ಲಿ ಹೇಗೆ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿರುತ್ತದೆಯೋ ಹಾಗೆಯೇ ದೇಶವನ್ನು ಸಮಗ್ರವಾಗಿ ಯೋಜನೆಗಳಿಗೆ ಅನುಗುಣವಾಗಿ ಸುಭದ್ರ ರೀತಿಯಲ್ಲಿ ನಿರ್ಮಿಸುವುದು ಅಭಿಯಂತರರ ಕರ್ತವ್ಯ ಹಾಗಾಗಿ ನಾವೆಲ್ಲ  ನಮ್ಮ ಬದುಕನು ಹೇಗೆ ಇಂಜನಿಯರರು ಯೋಜನೆ ಹಾಕಿ ನಿರ್ಮಾಣ ಕಾಮಗಾರಿ ಕೈಗೊಳ್ಳುವರೊ ಹಾಗೆ ನಾವು ನಾವು ತಾಳ್ಮೆ ಸಹನೆ,ಪಾಂಡಿತ್ಯ,ಪ್ರಭುತ್ವ,ತೀಕ್ಷ್ಣತೆಯಿಂದ ಸಕಲ ಮೌಲ್ಯಗಳಿಂದ ರೂಪಿಸಿಕೊಳ್ಳಬೇಕು.ಇಂದಿನ ದಿನಮಾನದಲ್ಲಿ ಎಲ್ಲರೂ ಅವರವರು ಕಂಡಂತ ಕನಸಿನ ಮನೆಯಲ್ಲಿ ಇದ್ದಾರೆ, ಎಂದರೆ ಅದಕ್ಕೆಲ್ಲ ಕಾರಣರು ಸಿವಿಲ್ ಇಂಜನಿಯರರು ಧಣಿವರಿಯದೆ ಕಾರ್ಮಿಕರನ್ನು ಮನವೊಲಿಸುತ್ತ,ಮನೆ ಮಾಲೀಕರಿಗೆ ತಿಳಿ ಹೇಳುತ ಧೃತಿಗೆಡದೆ ಅತ್ಯಂತ ಸಹಣಾಮೂರ್ತಿಯಾಗಿ ಎಲ್ಲರೂ  ಬಯಸಿದಂತ ವಿಭಿನ್ನ ರೀತಿ ಮನೆ ನಿರ್ಮಿಸಿ ಸುಸಜ್ಜಿತವಾಗಿ ಬಾಳಲು ಬೆಳಕಾದ ಎಲ್ಲ ಇಂಜನಿಯರ್ ಗಳಿಗೆ ರಾಷ್ಟ್ರೀಯ ಇಂಜನಿಯರ್ ದಿನದ ಶುಭಾಶಯಗಳು.
ಅವಿನಾಶ ಸೆರೆಮನಿ
ಬೈಲಹೊಂಗಲ
Please follow and like us: