https://youtu.be/NHc6OMSu0K4?si=SI_K4goOPEgwo6h2



104ನೇ ವಾರ್ಷಿಕ ಮಹಾಸಭೆ: ಸತತ 49 ವರ್ಷಗಳಿಂದ ಲಾಭದಲ್ಲಿ ಬ್ಯಾಂಕ್,
ನೌಕರರಿಗೆ ವಿಮೆ ಭದ್ರತೆ: 6,000 ಶಿಕ್ಷಕರು/ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ ವಿಮೆ ಒಪ್ಪಂದ.
ಹಂಪಿ ಟೈಮ್ಸ್ ಹೊಸಪೇಟೆ:
ಅಖಂಡ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರು ಹಾಗೂ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (BDCC) 2025-26ನೇ ಹಣಕಾಸು ಸಾಲಿನಲ್ಲಿ ₹13.08 ಕೋಟಿ ನಿವ್ವಳ ಲಾಭ ಗಳಿಸುವುದರೊಂದಿಗೆ ಸತತ 49 ವರ್ಷಗಳಿಂದ ನಿರಂತರವಾಗಿ ಲಾಭದಾಯಕ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಕೆ. ತಿಪ್ಪೇಸ್ವಾಮಿ ಅವರು ತಿಳಿಸಿದರು.
ಶನಿವಾರ ನಗರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 104ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿನ ಆರ್ಥಿಕ ಪ್ರಗತಿ, ತಂತ್ರಜ್ಞಾನ ಆಧಾರಿತ ನೂತನ ಯೋಜನೆಗಳು ಹಾಗೂ ಮುಂಬರುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.


ಬ್ಯಾಂಕಿನ ಆರ್ಥಿಕ ಸಾಧನೆಗಳನ್ನು ವಿವರಿಸಿದ ಕೆ. ತಿಪ್ಪೇಸ್ವಾಮಿ ಅವರು, “1920ರಲ್ಲಿ ಸ್ಥಾಪಿತಗೊಂಡು 106ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಬ್ಯಾಂಕ್ ಪ್ರಸ್ತುತ ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳ 11 ತಾಲೂಕುಗಳಲ್ಲಿ 33 ಶಾಖೆಗಳನ್ನು ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ₹1873.03 ಕೋಟಿ ಠೇವಣಿ ಸಂಗ್ರಹಿಸಿದೆ. ಬ್ಯಾಂಕಿನ ದುಡಿಯುವ ಬಂಡವಾಳ ₹3011.81 ಕೋಟಿಗೆ ಏರಿಕೆಯಾಗಿದ್ದು, ಕೃಷಿ ಮತ್ತು ಕೃಷಿಯೇತರ ರಂಗದಲ್ಲಿ ₹1781.76 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟು ಸಾಲ ವಸೂಲಾತಿಯಲ್ಲಿ ಶೇಕಡಾ 95.14 ರಷ್ಟು ಪ್ರಗತಿ ಸಾಧಿಸಲಾಗಿದ್ದು, ಲೆಕ್ಕಪರಿಶೋಧನೆಯಲ್ಲಿ ಬ್ಯಾಂಕ್ ‘ಎ’ ಶ್ರೇಣಿ ಕಾಯ್ದುಕೊಂಡಿದೆ,” ಎಂದರು.
ಡಿಜಿಟಲ್ ಬ್ಯಾಂಕಿಂಗ್ ಸೇವೆಯಲ್ಲಿ ಬಿಡಿಸಿಸಿ ಬ್ಯಾಂಕ್ ಮೈಲಿಗಲ್ಲು ಸ್ಥಾಪಿಸಿದ್ದು, ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ಯುಪಿಐ (UPI) ಸೇವೆ ಪ್ರಾರಂಭಿಸಿದ ಮೊದಲ ಬ್ಯಾಂಕ್ ಎಂಬ ಹಿರಿಮೆಗೆ ಪಾತ್ರವಾಗಿದೆ. ರೈತರಿಗೆ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸುಲಭವಾಗಿ ಕೆ.ಸಿ.ಸಿ. ಬೆಳೆ ಸಾಲ ಮಂಜೂರು ಮಾಡಲು ‘e-KCC ಆನ್‌ಲೈನ್ ಪೋರ್ಟಲ್’ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ, ಅವಳಿ ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳ ಮೂಲಕ ವೇತನ ಪಡೆಯುತ್ತಿರುವ ಸುಮಾರು 6,000 ಶಾಲಾ ಶಿಕ್ಷಕರು ಮತ್ತು ಅರೆ ಸರ್ಕಾರಿ ನೌಕರರಿಗೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಮೂಲಕ ₹1.00 ಕೋಟಿಯವರೆಗಿನ ಅಪಘಾತ/ಮರಣ ವಿಮಾ ಭದ್ರತೆ ಒದಗಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಬ್ಯಾಂಕಿನ ಮುಂಬರುವ ಯೋಜನೆಗಳ ಕುರಿತು ಮಾಹಿತಿ ನೀಡಿದ ಅಧ್ಯಕ್ಷರು, “ವ್ಯವಹಾರ ವಿಸ್ತರಣೆಗಾಗಿ 14 ಹೊಸ ಶಾಖೆಗಳನ್ನು ತೆರೆಯಲು ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ 9 ಶಾಖೆಗಳಿಗೆ ಅನುಮತಿ ಸಿಕ್ಕಿದೆ. ಇದರಲ್ಲಿ ಉಪ್ಲಂಗಿ ಮತ್ತು ಗುಡೆಕೋಟೆ ಶಾಖೆಗಳು ಎಟಿಎಂ ಸೌಲಭ್ಯದೊಂದಿಗೆ ಉದ್ಘಾಟನೆಗೊಂಡಿವೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಉಳಿತಾಯದ ಅಭ್ಯಾಸ ಬೆಳೆಸಲು ‘ಟ್ಯಾಬ್ ಅಕೌಂಟ್’ (Student A/c) ಯೋಜನೆ ಹಾಗೂ ಬ್ಯಾಂಕ್ ಶಾಖೆಗಳಿಲ್ಲದ ಪ್ರದೇಶಗಳಲ್ಲಿ ‘ಆಫ್‌ಸೈಟ್ ಎಟಿಎಂ’ ಸೌಲಭ್ಯ ಕಲ್ಪಿಸಲಾಗುವುದು,” ಎಂದು ಪ್ರಕಟಿಸಿದರು.


More Stories
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಭಾಷಣ
ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್ಗಾರ್ ಮೇಳ’ ಯಶಸ್ವಿ ಆಯೋಜನೆ
ಅಹವಾಲುಗಳಿಗೆ 15 ದಿನದೊಳಗೆ ಪರಿಹಾರ: ಸಚಿವ ಕೆ.ಎಸ್.ಬಸವಂತಪ್ಪ