April 19, 2026

Hampi times

Kannada News Portal from Vijayanagara

ಎಲ್ಲರ, ಎಲ್ಲ ಕಾಲದ ಬೇಂದ್ರೆ :130ನೇ ಜನ್ಮದಿನ

https://youtu.be/NHc6OMSu0K4?si=SI_K4goOPEgwo6h2

ಬೇಂದ್ರೆಯವರು ಬರೆದದ್ದು ಒಟ್ಟು ೧೪೨೭ ಕವಿತೆಗಳು. ‘ನೂರಾರು’ ವರ್ಷಗಳಾದರೂ ಇದುಬರೀ ಬೆಳಗಲ್ಲವೆನಿಸುವ ‘ಬೆಳಗು,’ ಶತಮಾನದ ಕವಿತೆಯಾದ ‘ಜೋಗಿ’, ನಮ್ಮನ್ನಷ್ಟೇ ಮರೆತ ‘ಯುಗಾದಿ’, ಕುಣಿಯುತ್ತಲೇ ಇರುವ ‘ಕುರುಡು ಕಾಂಚಾಣ’, ‘ಗಂಡುಸಾದರೆ ನಿನ್ನ ಬಲಿಕೊಡುವೆಯೆನ್,’-ಎಂಬ ‘ಕನಸಿನೊಳಗೊಂದು ಕಣಸು’, ‘ಮೂವತ್ತು ಮೂರು ಕೋಟಿ ಮಕ್ಕಳಿವರೇನಮ್ಮ..’ ‘ಹೊಟ್ಟೆಯು ಹತ್ತಿದೆ ಬೆನ್ನಿನ ಬೆನ್ನು’, ‘ಒಲವೇ ನಮ್ಮ ಬದುಕೆ’ನ್ನುವ, ‘ಕುಣಿಯೋಣು ಬಾ,’-ಎಂದು ಕರೆವ, ‘ಆಡದಿರು ಮನದನ್ನೆ ಎನಗೆ ಇದಿರಾಡದಿರು ಮಾಡದಿರು ಬಾಳನ್ನು ಬೇಳೆಯಂತೆ ಕೂಡಿರಲಿ ಬಾಳು ಇಡಿಗಾಳಿನಂತೆ.’-ಎಂದು ಸಂಸಾರ ಸಾಮರಸ್ಯವನ್ನು ಸಾರುವ, ‘ನಾಕುತಂತಿಯ’ ಮಿಡಿದ, ‘ಭೃಂಗದಾ ಬೆನ್ನೇರಿ ಬಂತು ಕಲ್ಪನಾ ವಿಲಾಸ…’ ಎಂದು ಕಾವ್ಯಹುಟ್ಟಿನ ಬೆರಗು ಮೂಡಿಸಿದ, ಅವರ ಅಸಂಖ್ಯ ಕವಿತೆಗಳಲ್ಲಿ ನಿಸರ್ಗ ವರ್ಣನೆಯಿದೆ, ಒಲವಿನ ಚಿತ್ರವಿದೆ, ವಿರಹದ ತಾಪವಿದೆ, ಆನುಭಾವಿಕ ಧ್ಯಾನವಿದೆ. ಸ್ವಾನುಭವ, ಲೋಕಾನುಭವಗಳ ವ್ಯಾಪಾರಗಳನ್ನು, ಸಮಾಜದ ಎಲ್ಲ ಮಗ್ಗುಲುಗಳನ್ನು ಕವಿತೆಗಳ ಮೂಲಕವೇ ಕಟ್ಟಿದ ಅನುಪಮ ಪ್ರತಿಭೆಯ ಮೇರುಕವಿ ಬೇಂದ್ರೆಯವರು. ಐದೆಯರ ಮಗನಾಗಿ ಕನ್ನಡದ ಮೂಲಕವೇ ವಿಶ್ವವನ್ನು ಕಂಡು, ಕಾಣಿಸಿದ ಕವಿತೆಗಳು ಜಾನಪದ ಶೈಲಿಯವೆನಿಸಿದರೂ ಜಾನಪದ ಗೀತೆಗಳಲ್ಲ. ಧಾರವಾಡದ ಆಡುಮಾತಿನ ಸೊಗಡಿನಿಂದಾಗಿ ಕೇಳಿದವರನ್ನೊಮ್ಮೆಲೇ ಸೆಳೆವ ಕಾಂತಗುಣವುಳ್ಳವು.

ಪಂಪನಿಂದ ಇಂದುವರೆಗೆ ಕನ್ನಡದ ಕವಿಗಳನೇಕರು ಕನ್ನಡದ ಬಾಗಿಲಿಗೆ ಲೆಕ್ಕವಿರದಷ್ಟು ಚಂದಚಂದದ ತೋರಣಗಳನ್ನು ಕಟ್ಟುತ್ತಲೇ ಬಂದಿದ್ದಾರೆ. ಪಂಪ-ರನ್ನ, ಹರಿಹರ-ಕವಿಕುಮಾರವ್ಯಾಸ, ಬಸವಾದಿ ಪ್ರಮಥರದು ನುಡಿದು ನಡೆದ ತೋರಣ. ನಮ್ಮನುಡಿ, ನೆರೆನುಡಿ, ಹೊರನುಡಿಗಳೊಂದಿಗೆ ಸಾಧಿಸಿದ ಸಾಮರಸ್ಯ, ಕಟ್ಟಿದ ತೋರಣಗಳು ಇಂದಿಗೂ ಅಚ್ಚಹಸಿರಾಗಿರುವ ಎಂದಿಗೂ ಬಾಡದ ತೋರಣಗಳಿವು. ಅವುಗಳನ್ನು ನೋಡಿ ಸಂಭ್ರಮಿಸುವ, ಆಸ್ವಾದಿಸಿ ಆನಂದಿಸುವ ಭಾಗ್ಯ ಕನ್ನಡಿಗರದು. ಈ ತೋರಣಗಳು ಹೊರನುಡಿಗೂ ದಾಟಿದಲ್ಲಿ ಲೋಕ ಮೆಚ್ಚುವ ಕಾಲ ದೂರವಿಲ್ಲ. ಈ ದಿಸೆಯಲ್ಲಿ ಕೆಲಸಗಳು ನಡೆಯುತ್ತಿವೆ. ಜಗದ ಜಗಲಿಯಲಿ ಕನ್ನಡ ವಿರಾಜಿಸುವಂತಾಗಬೇಕೆಂಬುದೇ ಕನ್ನಡಿಗರ ಆಶಯ.

ಹಬ್ಬ-ಹರಿದಿನ, ಹಬ್ಬ-ಹುಣ್ಣಿಮೆಯೆಂಬ ರೂಢಿನುಡಿಯೊಂದಿದೆ. ಇಂದು ಹರಿದಿನವಲ್ಲ ‘ಬೇಂದ್ರೆದಿನ.’ ಹುಣ್ಣಿಮೆಯಲ್ಲ ‘ಬೇಂದ್ರೆಹುಣ್ಣಿಮೆ.’ ಮನೆಬಾಗಿಲಿಗೆ ಕಟ್ಟಲು ತಂದ ಮಾವಿನೆಲೆಯ ಗೊಂಚಲಲ್ಲಿ ತುಂಬಾ ಚೆಂದದ ಎಲೆಗಳನ್ನು ಆರಿಸಿ ತೋರಣ ಕಟ್ಟುವಂತೆ ಈ ಲೇಖನವೂ ಬೇಂದ್ರೆಯವರ ಕುರಿತ ‘ತೋರಣ ನಾಂದಿ’ಯೇ. ಕನ್ನಡದ ಮನೆ-ಮನದ ಬಾಗಿಲಿಗೆ ‘ಬೇಂದ್ರೆ ಕಾವ್ಯತೋರಣ’ವನ್ನು ಕಟ್ಟಬೇಕಾಗಿದೆ. ಬರೆದಷ್ಟೂ ಮುಗಿಯದ, ಓದಿದಷ್ಟೂ ಮತ್ತೆ ಮತ್ತೆ ಓದಬೇಕೆನಿಸುವ ನಾದಾರ್ಥ ಪರಂಪರೆಯ ತೊರೆಯಲ್ಲಿ ನಿರಂತರವಾಗಿ ಮೊರೆಯುವ, ಭೋರ್ಗರೆಯುವ ಸಮೃದ್ಧಕಾವ್ಯ ಬೇಂದ್ರೆಯವರದು. ನಾಡಿಗೆ ಮತ್ತೆ ಮತ್ತೆ ಶ್ರಾವಣ ಬರುವಂತೆ ಬೇಂದ್ರೆ ನಮ್ಮ ಮನೋನಾಡಿಗೆ ಬರುತ್ತಲೇ ಇರುತ್ತಾರೆ. ಕವಿಬೇಂದ್ರೆಯವರನ್ನರಿಯಲು ಅವರೇ ಹೇಳುವಂತೆ “ನಾದಬೇಕು ನಾದಬೇಕು, ನಾದನಾ ನಾದಬೇಕು; ನಾದ ನಾನಾದ ಮ್ಯಾಲೆ ಬೇರೆ ವಾದ ಯಾಕ ಬೇಕು” ಎಂಬಂತೆ ನಾವು ಅವರ ಕಾವ್ಯದ ಆಳಕ್ಕಿಳಿದು ಅಧ್ಯಯನ ಮಾಡಬೇಕಾಗಿದೆ.

ಬೇಂದ್ರೆ ಗೀಳು ಹತ್ತಿಸಿದ ಇಂಗ್ಲಿಷ್ ಮೇಷ್ಟುç: ಎಂಬತ್ತರ ದಶಕದಲ್ಲಿ ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಾನು ಬಿ.ಎ. ಓದುತ್ತಿದ್ದ ದಿನಗಳು. ಇಂಗ್ಲಿಷ್ ಮೇಷ್ಟಾçಗಿ ಪ್ರಖ್ಯಾತ ಕವಿ-ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಹಾಗೂ ಟಿ.ಎಸ್.ಲೋಹಿತಾಶ್ವ, ಮೊದಲಾದವರಿದ್ದರು. ಶಿವಪ್ರಕಾಶರು ತಮ್ಮ ‘ಮಿಲರೇಪ,’ ‘ಮಳೆಬಿದ್ದ ನೆಲದಲ್ಲಿ’ ಸಂಕಲನಗಳಿAದ ಸಾಹಿತ್ಯಲೋಕದಲ್ಲಾಗಲೇ ಪರಿಚಿತರಾಗಿದ್ದರು. ೧೯೮೧ರ ಅಕ್ಟೋಬರ್, ೨೬ರಂದು ಬೇಂದ್ರೆಯವರು ವಿಧಿವಶರಾದ ಮರುದಿನ ಶಿವಪ್ರಕಾಶರು ಕ್ಲಾಸಿಗೆ ಬಂದವರೇ ‘ನಾನಿಂದು ಪಾಠದ ಬದಲು ಬೇಂದ್ರೆಯವರ ಬಗ್ಗೆ ಒಂದಿಷ್ಟು ಮಾತನಾಡುತ್ತೇನೆಂದು’ ಒಂದು ಗಂಟೆಗೂ ಮಿಗಿಲು ಬೇಂದ್ರೆಯವರ ಕಾವ್ಯದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಬೇಂದ್ರೆಯವರ ‘ಜೋಗಿ’ ಕವಿತೆಯನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಾಚಿಸಿ, ವಿಶ್ಲೇಷಿಸುತ್ತಾ ‘ನನಗಿನ್ನೂ ಈ ಕವಿತೆ ಸಂಪೂರ್ಣವಾಗಿ ದಕ್ಕಿಲ್ಲ. ನಿಮಗೇನಾದರೂ ಅರ್ಥವಾದರೆ ವಿಚಾರ ಮಾಡಿ’! ಎಂದರು. ಅವರ ಓತಪ್ರೋತ ಮಾತುಗಳನ್ನು ಕೇಳಿದ ನನಗೆ ‘ಇವರು ಕನ್ನಡದ ಮೇಷ್ಟ್ರಾಗಿದ್ದರೆ ಚೆನ್ನಾಗಿತ್ತು ಎನಿಸಿತು. ಬೇಂದ್ರೆಯವರನ್ನು ಮೈದುಂಬಿ, ಅಷ್ಟೇ ಆಪ್ತವಾಗಿ ಮಾತನಾಡುತ್ತಿದ್ದವರೆಂದರೆ ಕಾವ್ಯಗಾರುಡಿಗರೆಂದೇ ಹೆಸರಾದ ಕಿ.ರಂ. ನಾಗರಾಜ್, ಕಂಬಾರ, ಸುಮತೀಂದ್ರ ನಾಡಿಗ, ಡಾ.ಜಿ.ಕೃಷ್ಣಪ್ಪ ಮೊದಲಾದವರು.

ಬೇಂದ್ರೆ ಕೃಷ್ಣಪ್ಪ: ವೃತ್ತಿಯಲ್ಲಿ ಆರ್.ಟಿ.ಓ. ಅಧಿಕಾರಿಯಾಗಿದ್ದರೂ ಬೇಂದ್ರೆಯವರ ದೊಡ್ಡ ಅಭಿಮಾನಿ. ಬೇಂದ್ರೆಯವರ ಕುರಿತು ತಲಸ್ಪರ್ಶಿ ಅಧ್ಯಯನ ಮಾಡಿದ್ದ, ಬೇಂದ್ರೆ ಸಾಹಿತ್ಯ ಪರಿಚಾರಕರಾಗಿ ಕೆಲಸ ಮಾಡಿದ, ‘ಬೇಂದ್ರೆ ಕೃಷ್ಣಪ್ಪ’ ಎಂದೇ ಪ್ರಸಿದ್ಧರಾಗಿದ್ದ ಅವರೊಂದು ಸೋಜಿಗ! ಮೈಸೂರಿನಲ್ಲಿ ಡಿ.ಎಲ್./ಎಲ್.ಎಲ್.ಆರ್. ಮಾಡಿಸಲು ಆರ್.ಟಿ.ಓ. ಕಚೇರಿಗೆ ಹೋದವರನ್ನು ‘ಬೇಂದ್ರೆ ಓದಿದ್ದೀರಾ?’ ಎಂದು ವಿಚಾರಿಸಿ, ಓದದಿದ್ದರೆ ‘ಈ ಪುಸ್ತಕವನ್ನು ಓದಿ’ ಎಂದು ತಮ್ಮಲ್ಲಿನ ಬೇಂದ್ರೆಯವರ ಪುಸ್ತಕಗಳನ್ನು ನೀಡುತ್ತಿದ್ದರು. ಆ ಪುಸ್ತಕ ಪಡೆದವರಿಗೆ ಡಿ.ಎಲ್. ಪರವಾನಗಿ ಗ್ಯಾರಂಟಿ!!

‘ಶಬ್ದಗಾರುಡಿಗ’ ಬೇಂದ್ರೆಯವರ ಕಾವ್ಯವಾಚನ ಶೈಲಿ ಕೇಳುಗರನ್ನು, ಸಭಿಕರನ್ನು ಮಂತ್ರಮುಗ್ಧಗೊಳಿಸು ವಂಥದ್ದೆAಬುದಕ್ಕೆ ಹಲವು ಪ್ರಸಂಗಗಳಿವೆ. ದೆಹಲಿಯ ಆಕಾಶವಾಣಿಯಲ್ಲಿ ‘ಸರ್ವಭಾಷಾ ಕವಿಗೋಷ್ಠಿ’ಯಲ್ಲಿ ಭಾರತೀಯ ಭಾಷೆಗಳ ಎಲ್ಲಾ ಪ್ರಮುಖ ಕವಿಗಳು ಪಾಲ್ಗೊಂಡು ತಂತಮ್ಮ ಕವಿತೆಗಳನ್ನು ವಾಚಿಸುತ್ತಿದ್ದರು. ವಾಚನಕ್ಕೂ ಮುನ್ನ ಕವಿತೆಗಳ ಸಂಕ್ಷಿಪ್ತ ವಿವರಣೆ ಕೊಡುತ್ತಿದ್ದರು. ಆದರೆ, ಬೇಂದ್ರೆಯವರು ತಮ್ಮ ವಾಚನ ಸರದಿ ಬಂದಾಗ ಕವಿತೆಯ ಹೆಸರನ್ನಷ್ಟೇ ಹೇಳಿ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ‘ಬೆಳಗು’ ಕವಿತೆಯನ್ನು ವಾಚಿಸಿ ಕುಳಿತರು. ಕವಿಗೋಷ್ಠಿಯ ಅಧ್ಯಕ್ಷರಾಗಿದ್ದ ಇಂಗ್ಲಿಷ್‌ನ ಪ್ರಸಿದ್ಧ ಹಿರಿಯ ಕವಿ ಬೇಂದ್ರೆಯವರ ವಾಚನ ಮುಗಿಯುತ್ತಿದ್ದಂತೆಯೇ ಎದ್ದುನಿಂತು“I think, it’s the description of dawn?” ಇದು ಬೆಳಗಿನ ವರ್ಣನೆಯಿರಬೇಕಲ್ಲವೇ? ಎಂದರಂತೆ. ಅದಕ್ಕೆ ಬೇಂದ್ರೆಯವರು ‘Exactly’ ಎಂದರಂತೆ. ಇದು ಬೇಂದ್ರೆಯವರ ಕಾವ್ಯವನ್ನು ಪ್ರಸ್ತುತಪಡಿಸುವಿಕೆಯ ವಿಶಿಷ್ಟ ಶೈಲಿ. ಭಾವದ ಮೂಲಕ ಭಾಷಾತೀತವಾಗಿ ಸಹೃದಯನನ್ನು ತಲುಪುವಂತೆ ಪರಿಣಾಮಕಾರಿಯಾಗಿ ತಲುಪಿಸಬಲ್ಲವರು ಕನ್ನಡದಲ್ಲಿ ಅತಿವಿರಳರು. ಅಂಥವರಲ್ಲಿ ಬೇಂದ್ರೆಯವರು ಪ್ರಮುಖರಾಗಿದ್ದರು. ೧೯೨೯ರಲ್ಲಿ ಬೆಳಗಾವಿಯ ಕವಿಗೋಷ್ಠಿಯಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆಯನ್ನು ವಾಚಿಸಿದಾಗ ನೆರೆದಿದ್ದ ಸಭಿಕರೆಲ್ಲರೂ ಆಕಾಶದತ್ತ ದಿಟ್ಟಿನೆಟ್ಟು ಹಕ್ಕಿಯನ್ನು ಹುಡುಕಾಡಿದರಂತೆ. ಇದು ಬೇಂದ್ರೆಯವರ ಕಾವ್ಯವಾಚನದ ಮೋಡಿ.

ಬೇಂದ್ರೆಯವರು ‘ಅಂಬಿಕಾತನಯದತ್ತ’, ‘ಬೆನ್‌ರಾಮ್‌ಸನ್’ ಎಂಬ ಕಾವ್ಯನಾಮಗಳಲ್ಲೂ ಬರೆಯುತ್ತಿದ್ದರು. ‘ಬೆನ್’ =ಬೇಂದ್ರೆ, ‘ರಾಮ್’=ರಾಮಚಂದ್ರ, ‘ಸನ್’=ಮಗ=‘ಬೆನ್‌ರಾಮ್‌ಸನ್’. “ಕವಿಯ ಬ್ಯಾಸರಾ ಹರಿಸಾಕ ಇನ್ನೇನು ಬೇಕ? ಹೂತ ಹುಣಸೀ ಮರ ಸಾಕಾ” ಇದು ಬೇಂದ್ರೆಯವರ ಕಾವ್ಯವಸ್ತುವಿನ ಕುರಿತ ವ್ಯಾಖ್ಯಾನ. ದಟ್ಟವಾದ ಜೀವನಾನುಭವ, ಜೀವನಪ್ರೀತಿ ಯಿಲ್ಲದೆ ಶ್ರೇಷ್ಠವಾದುದು ಹುಟ್ಟದು. “ಹುತ್ತಗಟ್ಟದೆ ಚಿತ್ತ ಕೆತ್ತೀತೆ ಆ ಅಂಥ ಪುರುಷೋತ್ತಮನ”-ಎಂಬ ಅಡಿಗರ ಕವಿತೆಯ ಸಾಲುಗಳು ನೆನಪಾಗುತ್ತವೆ. ಸೃಜನಶೀಲ ಕ್ರಿಯೆಗೆ ಪ್ರಕೃತಿಯ ಸಣ್ಣವಸ್ತುವೂ ಸಾಕು. ಅದರಲ್ಲಿ ವಿನೂತನತೆಯನ್ನು ಕಾಣುವ ಬೆರಗುಗಣ್ಣಿನ ಮಗುತನದ ಮುಗ್ಧತೆಯಿದ್ದಲ್ಲಿ ಕವಿಯ ಅನನ್ಯ ಪ್ರತಿಭೆಯಿಂದ ಕಾವ್ಯತ್ವಕ್ಕೆ ಹೊಳಪು ಪ್ರಾಪ್ತವಾಗುತ್ತದೆ. ಉದಾಹರಣೆಗೆ ಬೇಂದ್ರೆಯವರ ‘ಬೆಳಗು’, ‘ಹೂತದಾ ಹುಣಸೀ;’ ಕುವೆಂಪು ಅವರ ‘ಗೊಬ್ಬರ’ ಮೊದಲಾದ ಕವಿತೆಗಳೇ ಸಾಕ್ಷಿ. ತನ್ನೊಳಗುದಿಸಿದ ಭಾವಕ್ಕೆ ಭಾಷೆಯ ರೂಪು ಕೊಡುವವರೆಗೆ ಕವಿಯನುಭವಿಸುವ ತಳಮಳ-ಯಾತನೆ; ಉತ್ತಮವಾಗಿ ಮೂಡಿದಾಗ ಆಗುವ ಆನಂದ-ಸAಭ್ರಮ ವರ್ಣಿಸಲಸದಳವಾದುದು. ಪು.ತಿ.ನ.ರವರ “ಬಳ್ಳಿಯೊಡಲ ಕುಸುಮದಂತೆ ಹುದುಗಿದೆನ್ನ ಗೀತವು; ಮೆಲ್ಲನೊಡೆದು ಬರುವುದೆಂತು ಎಂದು ನಲಿವೆ ಬೆದರುವೆ…”ಎಂಬ ಸಾಲುಗಳಲ್ಲಿ ಪ್ರತಿಮಿತವಾಗಿವೆ. ಬೇಂದ್ರೆಯವರು ಹೇಳುವಂತೆ “ಭೃಂಗದಾ ಬೆನ್ನೇರಿ ಬಂತು ಕಲ್ಪನಾ ವಿಲಾಸದಂತೆ…” ಅವರ್ಣನೀಯ; “ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ.”

 

ಕನ್ನಡದ ನವೋದಯದ ಶ್ರೇಷ್ಠಕವಿಗಳಲ್ಲಿ ಬೇಂದ್ರೆಯವರು ಪ್ರಮುಖರು. ಕುವೆಂಪು, ಬೇಂದ್ರೆ, ಪುತಿನ-ಇವರನ್ನು ‘ಆಧುನಿಕ ಕನ್ನಡದ ರತ್ನತ್ರಯರು’ ಎಂದಿದ್ದಾರೆ. ಯುಗಪ್ರವರ್ತಕ ಕವಿಗಳಾದ ಕುವೆಂಪು ಮತ್ತು ಬೇಂದ್ರೆ ಇಬ್ಬರ ಭಾಷಾಬಳಕೆ, ಶೈಲಿ ಎಲ್ಲದರಲ್ಲೂ ಸಾದೃಶ್ಯ-ವೈದೃಶ್ಯಗಳನ್ನು ಗುರುತಿಸಲಾಗಿದೆ. ಜನ್ಮತಃ ಶೂದ್ರರಾದ ಕುವೆಂಪು ಸಂಸ್ಕೃತ ಮತ್ತು ಇಂಗ್ಲಿಷ್‌ಗಳನ್ನು ಕರಗತಮಾಡಿಕೊಂಡು ಸಾಹಿತ್ಯ ರಚನೆ ಮಾಡಿ ವಿಶ್ವಮಾನ್ಯರಾದರೆ, ವೈದಿಕ ಮನೆತನದ ಬೇಂದ್ರೆಯವರು ಧಾರವಾಡದ ಆಡುಮಾತು, ಜನಪದ ಧಾಟಿಯನ್ನು ಮೈಗೂಡಿಸಿಕೊಂಡು ಕಾವ್ಯ ರಚಿಸಿ ‘ಕವಿವರ’ರೆನಿಸಿದರು.

“ಒಲವೆ ನಮ್ಮ ಬದುಕು,” “ರಸವೆ ಜನನ, ವಿರಸ ಮರಣ, ಸಮರಸವೇ ಜೀವನ” ಎಂದು ಜೀವನದರ್ಶನವನ್ನು ಎತ್ತಿಹಿಡಿದಿದ್ದಾರೆ. ಮಗಳು ಲಲಿತೆ ತೀರಿಕೊಂಡಾಗ ಬರೆದ ಕವಿತೆ “ನೀ ಹೀಂಗ ನೋಡಬ್ಯಾಡ ನನ್ನ…” ಕನ್ನಡದಲ್ಲಿ ಅತ್ಯಂತ ಪ್ರಸಿದ್ಧ ಕವಿತೆಯಾಗಿದೆ. ಬೇಂದ್ರೆಯವರ ದೇಶಪ್ರೇಮದ ಅಭಿವ್ಯಕ್ತಿಯ ಕಾರಣ ತಾವೇ ಬರೆದ ‘ನರಬಲಿ’(೧೯೩೨) ಕವಿತೆಯಿಂದಾಗಿ ಸೆರೆಮನೆವಾಸ ಅನುಭವಿಸಬೇಕಾಯ್ತಲ್ಲದೆ, ಕವಿತೆ ಭಾರತೀಯರನ್ನು ಸ್ವಾತಂತ್ರö್ಯ ಹೋರಾಟಕ್ಕಾಗಿ ಬಡಿದೆಬ್ಬಿಸಿತು.

ಬೇಂದ್ರೆಯವರು ಮೂವತ್ತಮೂರು ಕವನ ಸಂಗ್ರಹಗಳು, ಒಂದು ಸಣ್ಣಕಥಾ ಸಂಕಲನ, ಏಳು ವಿಚಾರ-ವಿಮರ್ಶೆ, ಐದು ಸಂಪಾದನೆಗಳು, ಏಳು ಅನುವಾದಗಳು, ಒಂದು ನಾಟಕ, ಇಂಗ್ಲಿಷ್‌ನಲ್ಲಿ-ಒAದು, ಮರಾಠಿಯಲ್ಲಿ-ಹೀಗೆ ಅರವತ್ತೆöÊದು ಕೃತಿಗಳನ್ನು ರಚಿಸಿದ್ದಾರೆ. ಬೇಂದ್ರೆಯವರನ್ನು ಕುರಿತು ನೂರಾರು ಲೇಖನ, ವಿಮರ್ಶೆ, ಅಭಿನಂದನ ಗ್ರಂಥಗಳು, ಸಂಸ್ಮರಣ ಸಂಪುಟಗಳು ಪ್ರಕಟವಾಗಿವೆ.

ಬೇಂದ್ರೆಯವರ ಕಾವ್ಯ ಮತ್ತು ಬದುಕು ಬೇರೆ ಬೇರೆಯಲ್ಲ, ಅಭಿನ್ನ. ತಮ್ಮ ಪಾಡನ್ನೇ ಹಾಡಾಗಿಸಿದ ಅಪರೂಪದ ಕವಿ ಬೇಂದ್ರೆಯವರು. ‘ಅರಳುಮರಳು’ ಕವನ ಸಂಕಲನದ ನಂತರ ೧೯೬೪ರಲ್ಲಿ ಪ್ರಕಟವಾದ ನಲವತ್ತನಾಲ್ಕು ಕವನಗಳ ಸಂಕಲನ. ನಾಕುತಂತಿ“ಮೂಲಭೂತವಾಗಿ ನಾನು, ನೀನು, ಆನು, ತಾನು ಎಂಬ ಸಂಬಂಧಗಳ ನಾಲ್ಕು ಸಂಖ್ಯೆಗಳಿಗೆ ಸಂಬಂಧಿಸಿದ್ದಾಗಿದ್ದು, ‘ನು’ ಎಂಬುದು ‘ನಾ’ ‘ನೀ’ ‘ಆ’ ‘ತಾ’ ಎಂಬುವುಗಳನ್ನು ಮಂತ್ರರೂಪದಲ್ಲಿ ಇಡಿಯಾಗಿ ಸಮರಸಗೊಳಿಸುವ ಸೃಜನಾತ್ಮಕ ಪ್ರೇಮದ ಸಾಂಕೇತಿಕ ಬೀಜಾಕ್ಷರವಾಗಿದೆ. ಶ್ರಾವಣವೆಂದರೆ ಹಾಗೂ ಬೇಂದ್ರೆ ಎರಡಕ್ಕೂ ಅವಿನಾಭಾವ ಸಂಬAಧ. ಬೇಂದ್ರೆಯವರ ಅತ್ಯಂತ ಪ್ರಸಿದ್ಧ ಕವಿತೆ ‘ಬೆಳಗು’. ಕನ್ನಡದ ಶ್ರೇಷ್ಠ ಕವಿತೆಗಳಲ್ಲೊಂದು. ೧೯೧೯ರಲ್ಲಿ ಬರೆದ ಈ ಕವಿತೆಗೆ ‘ನೂರಾರು’ ವರ್ಷ ತುಂಬಿದ್ದರೂ ತನ್ನಕಾಂತಿಯನ್ನು ಕಳೆದುಕೊಂಡಿಲ್ಲ!! ಗಿಡಗಂಟೆಗಳಿಗೂ ಕೊರಳಿದೆಯೆಂದು ತೋರಿಸಿದ ಅದ್ವಿತೀಯ ಕವಿ ಬೇಂದ್ರೆಯವರು.

ಬೇಂದ್ರೆಯವರಿಗೆ ಮುಂಬೈ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ(೧೯೩೫), ಶಿವಮೊಗ್ಗದ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ(೧೯೪೩), ‘ಅರಳು ಮರಳು’ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೫೯), ಪದ್ಮಶ್ರೀ ಪ್ರಶಸ್ತಿ(೧೯೬೮), ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ(೧೯೬೯), ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯ(೧೯೬೮), ಕಾಶಿವಿದ್ಯಾಪೀಠ(೧೯೭೬)ಗಳ ಗೌರವ ಡಾಕ್ಟರೇಟ್‌ಗಳು, ಇವೆಲ್ಲಕ್ಕಿಂತ ಮಕುಟಪ್ರಾಯವಾಗಿ ‘ನಾಕುತಂತಿ’ ಕವನ ಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ(೧೯೭೪)ಲಭಿಸಿದೆ.

‘ಕನ್ನಡದ ಠಾಗೋರ್’ ಎನಿಸಿದ ಬೇಂದ್ರೆಯವರು ೨೬,ಅಕ್ಟೋಬರ್ ೧೯೮೧ರಂದು ಮುಂಬಯಿಯಲ್ಲಿ ನಿಧನರಾದರು. ಕಿ.ರಂ. ನಾಗರಾಜ್‌ರವರ ಪ್ರಕಾರ “ಒಮ್ಮೊಮ್ಮೆ ಓದಿದಾಗಲೂ ಅದದೇ ಭಾವಗಳು ಹೊಸದಾಗಿ ಮೈಪಡೆಯುವ ಅಚ್ಚರಿ ಬೇಂದ್ರೆಯವರ ಸಮರ್ಥ ಕವನಗಳಲ್ಲಿದೆ.” ಎಂಬ ಮಾತುಗಳು ಬೇಂದ್ರೆಯವರ ಕಾವ್ಯಾಧ್ಯಯನಕ್ಕೆ ಬೆಳಕಿಂಡಿಯಂತಿವೆ. ಒಂದರ್ಥದಲ್ಲಿ ಬೇಂದ್ರೆಯವರ ಕಾವ್ಯ ‘ಅನಂತಮುಖದ ಕಾವ್ಯ.’ ಬನ್ನಂಜೆಯವರ ಮಾತಿನಲ್ಲಿ “ಬೇಂದ್ರೆಯವರ ಮುಖದಿಂದ ಅಂಬಿಕಾತನಯದತ್ತರಂಥ ಅಪೂರ್ವಕವಿ ಕನ್ನಡಕ್ಕೆ ದೊರೆತದ್ದು ಈನೆಲದ ಪುಣ್ಯ.”

ಲೇಖಕರ: ಡಾ.ಬಿ.ಜಿ.ಕನಕೇಶಮೂರ್ತಿ,  ವಿಶ್ರಾಂತ ಪ್ರಾಧ್ಯಾಪಕರು

Please follow and like us:

 

 

 

 

 

Translate »
[t4b-ticker]
error: Content is protected !!