https://youtu.be/NHc6OMSu0K4?si=SI_K4goOPEgwo6h2

ಇದು ನಮಗೇಕೋ ಕೃತಿ ಲೋಕಾರ್ಪಣೆ | ನಿಷ್ಠಿ ರುದ್ರಪ್ಪ ಅವರಿಂದ ಕೃತಿ ಬಿಡುಗಡೆ
ಕಲಾವಿದರ ಗುರುತಿಸುವಿಕೆಗೆ ಸಂಘಗಳ ಒತ್ತು | 60ಕ್ಕೂ ಹೆಚ್ಚು ಸಾಧಕರಿಗೆ ಪುರಸ್ಕಾರ
ಹಂಪಿ ಟೈಮ್ಸ್ ಹೊಸಪೇಟೆ
ನೈಜ ಕಲಾ ಪ್ರತಿಭಾವಂತರಿಗೆ ಪ್ರಶಸ್ತಿ ಪುರಸ್ಕಾರಗಳು ದೊರೆತಾಗ ಮಾತ್ರ ಕಲೆ ಬೆಳಗಲು ಸಾಧ್ಯ. ಪ್ರಭಾವ ಬಳಸಿ ಪ್ರಶಸ್ತಿ ಪಡೆಯುವ ಇಂದಿನ ದಿನಗಳಲ್ಲಿ ನೈಜ ಪ್ರತಿಭೆಗಳು ನಾಡಿನ ಪುರಸ್ಕಾರದಿಂದ ವಂಚಿತರಾಗಿ ಸೊರಗಬಾರದು ಎಂದು ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಜೆ.ಪಿ. ಭವನದಲ್ಲಿ ತೂಲಹಳ್ಳಿ ಸಪ್ತಸ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಆಯೋಜಿಸಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಹೊಸಪೇಟೆ ಕವಿ ಸೋ.ದಾ. ವಿರೂಪಾಕ್ಷಗೌಡರ “ಇದು ನಮಗೇಕೋ..” ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ನೈಜ ಕಲಾವಿದರು ಪ್ರಶಸ್ತಿಗಳಿಂದ ದೂರ ಉಳಿಯುತ್ತಿದ್ದು, ಶಿಫಾರಸು ಪತ್ರ ತಂದು ಪ್ರಶಸ್ತಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಅರ್ಹ ಕಲಾವಿದರನ್ನು ಹುಡುಕಿ ಗೌರವಿಸಬೇಕು ಎಂದು ಕರೆ ನೀಡಿದರು.
ಲೋಕಾರ್ಪಣೆಗೊಂಡ ಕೃತಿಯು ಸಾಮಾಜಿಕ ಪಾರಂಪರೆಯ ವಸ್ತುಚಿತ್ರಣವನ್ನು ಬಿಂಬಿಸುವ ವಿಚಾರಶೀಲ ಕವನಗಳನ್ನು ಹೊಂದಿದೆ ಎಂದು ಅವರು ಪ್ರಶಂಸಿಸಿದರು. ಇದೇ ವೇಳೆ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಕೆ. ಎಮ್. ಬಸವರಾಜ ಮಾತನಾಡಿ, ಕವನಗಳು ನಾಡಿನ ಆಗುಹೋಗುಗಳನ್ನು ಪ್ರತಿಬಿಂಬಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಕಲಾವಿದರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸ್ಥಳೀಯ ರಂಗ ಕಲಾವಿದ ಮುದೇನೂರು ಉಮಾಮಹೇಶ್ವರ ಸ್ವಾಗತಿಸಿದರೆ, ಸಪ್ತಸ್ವರ ಸಾಂಸ್ಕೃತಿಕ ಕಲಾ ಟ್ರಸ್ಟಿನ ಅಧ್ಯಕ್ಷೆ ಬಿ.ಸುವರ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಟಿ. ಯಮನಪ್ಪ, ಪ್ರಾಂಶುಪಾಲ ಪ್ರೋ ಯು. ರಾಘವೇಂದ್ರರಾವ್, ಕೃಷಿ ಸಮಾಜದ ಬಸವರಾಜ ಕಕ್ಕುಪ್ಪಿ ಹಾಗೂ ಜಾನಪದ ಗಾಯಕ ಜಿ.ಚಿನ್ನಪ್ಪ ಉಪಸ್ಥಿತರಿದ್ದು ಮಾತನಾಡಿದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಅಸಮಾನತೆ ಸುಟ್ಟು ಸಮಾನತೆ ಬೆಳಗಿ : ಸಂವಿಧಾನ ಸಂರಕ್ಷಣಾ ಸಮಿತಿ
ಸೈಬರ್ ಅಪರಾಧಗಳ ಬಗ್ಗೆ ಇರಲಿ ಎಚ್ಚರ