https://youtu.be/NHc6OMSu0K4?si=SI_K4goOPEgwo6h2

ಹರಪನಹಳ್ಳಿ: ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9ರಂದು ನಡೆಯುವ ವಾಲ್ಮೀಕಿ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಾಗದೆ, ಸಮುದಾಯದ ಜನರಲ್ಲಿ ವೈಚಾರಿಕತೆ, ರಾಜಕೀಯ ಮತ್ತು ಶೈಕ್ಷಣಿಕ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಗೌರವಾಧ್ಯಕ್ಷ ಹೆಚ್.ಕೆ. ಹಾಲೇಶ್ ಹೇಳಿದರು.
ಹರಪನಹಳ್ಳಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ 8ನೇ ವರ್ಷದ ಶ್ರೀಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಾಂಪ್ರದಾಯಿಕ ಜಾತ್ರೆಗಳು ಧಾರ್ಮಿಕತೆಗೆ ಸೀಮಿತವಾಗಿರುತ್ತವೆ. ಆದರೆ ವಾಲ್ಮೀಕಿ ಜಾತ್ರೆಯು ಸಮುದಾಯದ ಸರ್ವತೋಮುಖ ಅಭಿವೃದ್ಧಿ ಮತ್ತು ಸಾಂವಿಧಾನಿಕ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಸಮುದಾಯ ಜಾಗೃತವಾದಾಗ ಮಾತ್ರ ನಮ್ಮ ಹೋರಾಟಗಳು ಯಶಸ್ವಿಯಾಗುತ್ತವೆ” ಎಂದರು.
ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, “ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು ಸಮುದಾಯದ ಹಕ್ಕುಗಳಿಗಾಗಿ ನಡೆಸಿದ ಪಾದಯಾತ್ರೆ ಜನರಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದೆ. ಫೆಬ್ರವರಿ 8ರಂದು ಬೃಹತ್ ಮೆರವಣಿಗೆ, ಧ್ವಜಾರೋಹಣ, ಸಾಮೂಹಿಕ ವಿವಾಹ, ಬುಡಕಟ್ಟು ವಸ್ತುಪ್ರದರ್ಶನ ಹಾಗೂ ಕೃಷಿ ಮೇಳಗಳು ಜರುಗಲಿವೆ” ಎಂದು ಮಾಹಿತಿ ನೀಡಿದರು.

ಜಾತ್ರಾ ಸಮಿತಿಯ ಅಧ್ಯಕ್ಷ ಆರ್. ಲೋಕೇಶ್ ಮಾತನಾಡಿ, “ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿರುವ ನಮ್ಮ ಬೇಡ ವಾಲ್ಮೀಕಿ ನಾಯಕ ಸಮಾಜವನ್ನು ಸಂಘಟಿಸಲು ಈ ಜಾತ್ರೆ ಸಹಕಾರಿ. ತಾಲೂಕಿನ 150 ಹಳ್ಳಿಗಳಲ್ಲಿ ಸಂಚರಿಸಿ ಜನರನ್ನು ಆಹ್ವಾನಿಸಲಾಗುತ್ತಿದೆ. ಇದೇ ವೇಳೆ ಶ್ರೀಮಠದ 28ನೇ ವಾರ್ಷಿಕೋತ್ಸವ ಹಾಗೂ ಪ್ರಸನ್ನಾನಂದ ಪುರಿ ಶ್ರೀಗಳ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ” ಎಂದರು.
ವಾಲ್ಮೀಕಿ ಸಮಾಜದ ಮಹಿಳಾ ಅಧ್ಯಕ್ಷೆ ಹೆಚ್.ಟಿ. ವನಜಾಕ್ಷಮ್ಮ ಮಾತನಾಡಿ, “ಈ ಜಾತ್ರೆಯು ನಮ್ಮ ಸಮುದಾಯದ ಅಸ್ಮಿತೆಯಾಗಿದೆ. ವೈಚಾರಿಕ ಹಿನ್ನೆಲೆಯಲ್ಲಿ ನಡೆಯುವ ಈ ಉತ್ಸವದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮುದಾಯದ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಸಮಾಜದ ಕಾರ್ಯದರ್ಶಿ ಹೆಚ್.ಕೆ. ಮಂಜುನಾಥ, ಮುಖಂಡರಾದ ತೆಲಿಗಿ ಅಂಜಿನಪ್ಪ, ಶಿವಪ್ಪ, ತಳವಾರ ಅಂಜಿನಪ್ಪ, ಮಹಿಳಾ ಕಾರ್ಯದರ್ಶಿ ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್
ಗುರುಗಳ ಕೈತುತ್ತು ಸವಿದು ಧನ್ಯತೆ ಮೆರೆದ ಶಿಷ್ಯವೃಂದ., ಗುರುವಂದನೆ,ಸ್ನೇಹಸಮ್ಮಿಲನ