February 27, 2026

Hampi times

Kannada News Portal from Vijayanagara

ಜನನ, ಮರಣ ನೋಂದಣಿ ವಿಳಂಬ ಸಲ್ಲದು, ಅಧಿಕಾರಿಗಳಿಗೆ ಡಿಸಿ ಕವಿತಾ ಎಸ್‌ ಮನ್ನಿಕೇರಿ ಸೂಚನೆ

https://youtu.be/NHc6OMSu0K4?si=SI_K4goOPEgwo6h2

 

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನನ ನೋಂದಣಿ ವಿಳಂಬ | ಜಿಲ್ಲಾಧಿಕಾರಿ ಖಡಕ್‌ ಸೂಚನೆ

ಹಂಪಿ ಟೈಮ್ಸ್‌ ಹೊಸಪೇಟೆ

ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳು ಮತ್ತು ಜನನ, ಮರಣಗಳ ನೋಂದಣಿಯಲ್ಲಿ ವಿಳಂಬವಾಗದಂತೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಜನನ-ಮರಣ ನೋಂದಣಿ :

ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 11,523 (ಜನನ-7,870, ಮರಣ-3,653) ನೋಂದಣಿಗಳಾಗಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬವಾಗದಂತೆ ನಿಗದಿತ ಸಮಯದಲ್ಲಿ ನೋಂದಾಯಿಸಲು ಎಲ್ಲಾ ನೋಂದಣಾಧಿಕಾರಿ ಮತ್ತು ಉಪ-ನೋಂದಣಾಧಿಕಾರಿಗಳಿಗೆ ಕ್ರಮ ವಹಿಸಲು ಸೂಚಿಸಲಾಯಿತು. ವಿಶೇಷವಾಗಿ ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನನ ನೋಂದಣಿ ವಿಳಂಬವಾಗುತ್ತಿರುವುದು ತಿಳಿದು ಬಂದಿದ್ದು, ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ನಿಗದಿತ ಸಮಯದಲ್ಲಿ ನೋಂದಣಿ ಮಾಡಲು ಸೂಚನೆ ನೀಡಿದರು. ಸರ್ಕಾರದ ಮಾರ್ಗಸೂಚಿಯಂತೆ 21 ದಿನಗಳ ಬದಲಿಗೆ 21 ಗಂಟೆಗಳಲ್ಲಿ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ವಿತರಿಸುವಲ್ಲಿ ಯಶಸ್ವಿಯಾಗಲು ಒತ್ತು ನೀಡಿದರು.

ಬೆಳೆ ಕಟಾವು ಪ್ರಯೋಗ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹಂಚಿಕೆ ಮಾಡಲಾದ 3,446 ಬೆಳೆ ಕಟಾವು ಪ್ರಯೋಗಗಳಲ್ಲಿ ಈಗಾಗಲೇ ಶೇ. 86ರಷ್ಟು ನಮೂನೆ-2 ಗಳನ್ನು ಸಲ್ಲಿಸಲಾಗಿದೆ. ಬಾಕಿ ಉಳಿದ ನಮೂನೆಗಳನ್ನು ತಕ್ಷಣ ನೋಂದಾಯಿಸಲು ಸೂಚಿಸಲಾಯಿತು. ಹಿಂಗಾರು ಹಂಗಾಮಿನ 906 ಬೆಳೆ ಕಟಾವು ಪ್ರಯೋಗಗಳಿಗಾಗಿ ನಮೂನೆ-1 ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಬೆಳೆ ಕಟಾವು ಪ್ರಯೋಗಗಳ ವ್ಯಪಘಾತವಾಗದಂತೆ ಜಾಗೃತ ವಹಿಸಲು ತಿಳಿಸಿದರು.


ಕೃಷಿ ವಿಮೆ (ಫಸಲ್ ಬಿಮಾ)

2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಲ್ಲಿ ಮುಂಗಾರು ಸಾಲಿನಲ್ಲಿ 1,03,495 ರೈತರು ನೋಂದಾಯಿಸಿದ್ದು, 89,561.9 ಹೆಕ್ಟೇರ್ ಪ್ರದೇಶಕ್ಕೆ ವಿಮಾ ನೋಂದಾಯಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಅಧಿಕಾರಿಗಳು ಆಸಕ್ತಿಯಿಂದ ವೃತ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ನೀಡಲಾಗುವುದು. ಪಿಡಿಒಗಳು ವಿಳಂಬ ಮಾಡದಂತೆ ವಿತರಣೆ ಮೇಲೆ ನಿಗಾ ವಹಿಸಬೇಕು. ಬೆಳೆ ವಿಮೆ ಸ್ಥಳೀಯವಾಗಿ ನಡೆಸಿದ ಬೆಳೆ ಕಟಾವು ಪ್ರಯೋಗ ವರದಿ ಮಾಡುವಾಗ ಅಧಿಕಾರಿಗಳು ಸಮಯಕ್ಕೆ ಪ್ರಯೋಗ ನಡೆಸಿ, ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಭರ್ತಿ ಮಾಡಬೇಕು. ಫಸಲ್ ಬಿಮಾ ಯೋಜನೆ ನೋಂದಣಿ ಶೇ. 51 ರಷ್ಟು ಮಾತ್ರ ಆಗಿರುವುದರಿಂದ, ಲೀಡ್ ಬ್ಯಾಂಕ್‌ಗಳ ಮ್ಯಾನೇಜರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೇ. 100 ರಷ್ಟು ನೋಂದಣಿ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ. ಪತ್ರಿಬಸಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಟಿ. ಮಂಜುನಾಥ, ಉಪನಿರ್ದೇಶಕ ನಯೀಮ್ ಪಾಷಾ, ತೋಟಗಾರಿಕಾ ಉಪನಿರ್ದೇಶಕ ಪ್ರಭುರಾಜ್, ರೇಷ್ಮೇ ಉಪನಿರ್ದೇಶಕ ಶ್ರೀ ಹರ್ಷ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ. ಹರಿಪ್ರಸಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

 

 

 

 

 

 

Translate »
[t4b-ticker]
error: Content is protected !!