https://youtu.be/NHc6OMSu0K4?si=SI_K4goOPEgwo6h2

ಆ ದಿನ ಬೆಳಗಿನ ಜಾವವೇ ಆಕೆಯ ತಂದೆ ತಾಯಿಗಳು ಪರಸ್ಪರ ವಾದ ಮಾಡುತ್ತಿದ್ದರು. ಆಗ ಅವರ ಮಗಳು ಸೋನಿಯಾ ಒಂದು ನಿರ್ಧಾರವನ್ನು ಕೈಗೊಂಡಳು. ಅಂದು ಆಕೆ ಕೈಗೊಂಡ ನಿರ್ಧಾರವೇ ಇಂದಿಗೂ ಆಕೆಯನ್ನು ಬದುಕಿನಲ್ಲಿ ಮುಂದೆ ಸಾಗುವಂತೆ ಮಾಡಿದ್ದು ಪ್ರಪಂಚದ ಅತ್ಯಂತ ಬಲಿಷ್ಠ ದೇಶ ಎಂದೇ ಕರೆದುಕೊಳ್ಳುವ ಅಮೆರಿಕಾ ದೇಶದ ಸುಪ್ರೀಂಕೋರ್ಟ್ ನ ಜಡ್ಜ್ ಆಗಿ ನೇಮಕಗೊಳ್ಳುವಂತೆ ಮಾಡಿದ್ದು ಎಂದರೆ ಆಕೆಯ ಸಂಕಲ್ಪ ಶಕ್ತಿ ಅದ್ಭುತ.
ಅದು 1962ರ ಸಮಯ. ಏಳು ವರ್ಷ ವಯಸ್ಸಿನ ಸೋನಿಯಾ ತನ್ನ ಪಾಲಕರೊಂದಿಗೆ ದ ಬ್ರಾಂಕ್ಸ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದಳು. ಕೇವಲ ಮೂರು ವಾರಗಳ ಹಿಂದೆ ಆಕೆಗೆ ಟೈಪ್ ಒನ್ ಡಯಾಬಿಟಿಸ್ ಇರುವುದು ಪತ್ತೆಯಾಗಿತ್ತು. ವೈದ್ಯರು ಪ್ರತ್ಯೇಕವಾಗಿ ಅವರ ಮಗಳ ಆಯಸ್ಸಿನ ಅವಧಿ ಅತ್ಯಂತ ಕಡಿಮೆಯದಾಗಿದೆ ಎಂದು ಪಾಲಕರನ್ನು ಕರೆದು ಹೇಳಿದ್ದರು.
ಪ್ರತಿದಿನ ಆಕೆ ಕಡ್ಡಾಯವಾಗಿ ಇನ್ಸುಲಿನ್ ಇಂಜೆಕ್ಷನ್ ಪಡೆಯಲೇಬೇಕಾಗಿತ್ತು. ಆಲ್ಕೋಹಾಲ್ ಸೇವನೆಯ ಕಾರಣದಿಂದ ತನ್ನ ದೇಹದ ಮೇಲಿನ ಸ್ಥಿರತೆಯನ್ನು ಕಳೆದುಕೊಂಡಿದ್ದ ಆಕೆಯ ತಂದೆಯ ಕೈಗಳು ಇಂಜೆಕ್ಷನ್ ನ ಸಿರಿಂಜ್ ಹಿಡಿಯಲು ಸಾಧ್ಯವಾಗದಷ್ಟು ನಡುಗುತ್ತಿದ್ದವು. ಆಕೆಯ ತಾಯಿ ಎರಡೆರಡು ಶಿಫ್ಟ್ ಗಳಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು.
ನಸುಕಿನ ಜಾವದಲ್ಲಿಯೇ ಮನೆಯನ್ನು ಬಿಡುತ್ತಿದ್ದ ಆಕೆ ಕತ್ತಲು ಕಂತಿದ ಮೇಲೆ ಮನೆಗೆ ಮರಳುತ್ತಿದ್ದಳು. ಮಗಳ ಆರೋಗ್ಯವನ್ನು ಕಾಯುವ ನಿಟ್ಟಿನಲ್ಲಿ, ಆಕೆಯ ಸಾವನ್ನು ಮುಂದೂಡುವ ಸಲುವಾಗಿ ಪ್ರತಿದಿನ ಮಗಳಿಗೆ ಇಂಜೆಕ್ಷನ್ ಯಾರು ಕೊಡಬೇಕು ಎಂಬ ವಿಷಯಕ್ಕೆ ಆ ದಿನ ಮುಂಜಾನೆಯೇ ದಂಪತಿಗಳಿಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು. ತಂದೆ ತಾಯಿಯ ವಾಗ್ವಾದಕ್ಕೆ ಎಚ್ಚರವಾದ ಸೋನಿಯಾ ಅಡುಗೆ ಮನೆಯ ಕಟ್ಟೆಯ ಮೇಲೇರಿ ನಿಂತು ನೀವಿಬ್ಬರೂ ಚಿಂತಿಸಬೇಡಿ ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ನಾನೇ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಲೇ ನೀರು ತುಂಬಿದ ಪಾತ್ರೆಯನ್ನು ಸ್ಟೌ ನ ಮೇಲೆ ಇಟ್ಟು
ಬರ್ನರ್ ಗೆ ಉರಿ ತಾಗಿಸಿ ಅದರಲ್ಲಿ ಇನ್ಸುಲಿನ್ ಇಂಜೆಕ್ಷನ್ ನ ಸ್ಟೀಲ್ ಸಿರಿಂಜನ್ನು ಹಾಕಿ ಕುದಿಯಲಿಟ್ಟಳು. ಬಳಸಿ ಬಿಸಾಡುವ ಇಂಜೆಕ್ಷನ್ ಸಿರಿಂಜುಗಳಿಲ್ಲದ, ಹಳೆಯ ಶೈಲಿಯಲ್ಲಿ ಇಂಜೆಕ್ಷನ್ ನ ಸೂಜಿಯನ್ನು ಕುದಿಸಿ ಮತ್ತೆ ಮರುಬಳಕೆ ಮಾಡುವ ಪದ್ಧತಿ ಚಾಲ್ತಿಯಲ್ಲಿದ್ದ ಕಾಲ ಅದಾಗಿತ್ತು. ಆ ದಿನದಿಂದ ಮತ್ತೆ ಮುಂದೆ ಆಕೆ ಪ್ರತಿದಿನ ತನ್ನ ಇಂಜೆಕ್ಷನ್ನನ್ನು ತಾನೇ ಮಾಡಿಕೊಳ್ಳುವುದನ್ನು ಕಲಿತಳಷ್ಟೇ ಅಲ್ಲ ಬದುಕಿದ್ದಕ್ಕೂ ಇಂದಿಗೂ ಅದನ್ನು ಪಾಲಿಸುತ್ತಿದ್ದಾಳೆ.
ಇಂದಿನ ಗುಣಮಟ್ಟಕ್ಕೆ ಹೋಲಿಸಿದರೆ ಅಂದಿನ ಸೂಜಿಗಳು ಅಷ್ಟೇನು ಅಭಿವೃದ್ಧಿಯನ್ನು ಹೊಂದಿರಲಿಲ್ಲ. ಅದಲ್ಲದೆ ದೇಹದ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಪತ್ತೆ ಮಾಡಲು ಬೆರಳಿನ ತುದಿಯಲ್ಲಿ ರೇಜರ್ ಬ್ಲೇಡನ್ನು ಬಳಸಬೇಕಿತ್ತು.
ಮೊದಲ ಬಾರಿ ಆಸ್ಪತ್ರೆಯ ಪ್ರಯೋಗಾಲಯದ ತಂತ್ರಜ್ಞರು ಆಕೆಯ ಕೈಯ ಬೆರಳಿನಲ್ಲಿ ಸೂಜಿಯನ್ನು ಚುಚ್ಚಿ ರಕ್ತದ ಮಾದರಿಯನ್ನು ಸಂಗ್ರಹಿಸಲು ಹೋದಾಗ ಆಕೆ ಭಯಪಟ್ಟು ಆಸ್ಪತ್ರೆಯಿಂದಲೇ ಓಡಿ ಹೊರಗೆ ಹೊರಟು ಹೋಗಿ ಕಾರೊಂದರ ಅಡಿಯಲ್ಲಿ ಬಚ್ಚಿಟ್ಟುಕೊಂಡಿದ್ದಳು. ಆಕೆಯ ಪಾದವನ್ನು ಹಿಡಿದು ಆಕೆಯನ್ನು ಹೊರಗೆ ಎಳೆಯುವ ಸಾಹಸವನ್ನು ಮಾಡಿದ್ದರು.
ಆದರೆ ಇದೀಗ ಪ್ರತಿದಿನ ಮುಂಜಾನೆ ಆಕೆ ಕುದಿಯುತ್ತಿರುವ ನೀರಿನಿಂದ ಸಿರಿಂಜ್ ಅನ್ನು ತೆಗೆದು ಅದರಲ್ಲಿ ನಿಗದಿತ ಪ್ರಮಾಣದ ಇನ್ಸುಲಿನ್ ಅನ್ನು ತುಂಬಿಸಿ ನನ್ನ ತೊಡೆಯ ಭಾಗದಲ್ಲಿ ಇಂಜೆಕ್ಷನ್ ಚುಚ್ಚಿ ಕೊಳ್ಳುತ್ತಿದ್ದಳು.ನಂತರ ತನ್ನ ಪುಸ್ತಕಗಳನ್ನು ಜೋಡಿಸಿಕೊಂಡು ಬಸ್ ಹಿಡಿಯಲು ಓಡುತ್ತಿದ್ದಳು. ಇದು ಅತ್ಯಂತ ಸೂಕ್ಷ್ಮತೆಯನ್ನು ಸಾರುವ ಅಥವಾ ಸ್ಪೂರ್ತಿಯನ್ನು ನೀಡುವ ಕಥೆಯಲ್ಲ ಆಕೆಯ ಬದುಕಿನ ದಿನನಿತ್ಯದ ಕ್ರಿಯೆಗಳಲ್ಲಿ ಒಂದಾಗಿತ್ತು.
ತನ್ನ 9ನೇ ವಯಸ್ಸಿನಲ್ಲಿ ವಿಪರೀತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಯನ್ನು ಆಕೆ ಕಳೆದುಕೊಂಡಳು. ಆಕೆಯ ತಾಯಿ ಸೆಲಿನ ತನ್ನ ಇಬ್ಬರು ಮಕ್ಕಳನ್ನು ಅತ್ಯಂತ ಕಡಿಮೆ ಅನುಕೂಲಗಳನ್ನು ಹೊಂದಿರುವ ಸಾರ್ವಜನಿಕರಿಗೆ ಸರ್ಕಾರ ಇಲ್ಲವೇ ಸ್ಥಳೀಯ ಸಂಸ್ಥೆಗಳು ನೀಡುವ ಸಾರ್ವಜನಿಕ ವಸತಿಯಲ್ಲಿ ವಾಸಿಸುತ್ತ ಒತ್ತಡದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬದುಕನ್ನು ಸಾಗಿಸಿದಳು. ಅವರು ವಾಸಿಸುತ್ತಿದ್ದ ವಸತಿ ಸಮುಚ್ಚಯವು ಚಳಿಗಾಲದಲ್ಲಿ ವಿಪರೀತ ಚಳಿ ಹಾಗೂ ಬೇಸಿಗೆಯಲ್ಲಿ ವಿಪರೀತ ಬಿಸಿಲಿನಿಂದ ಕೂಡಿರುತ್ತಿತ್ತು.
ಆದರೆ ಸೋನಿಯಾಗೆ ಅಲ್ಲಿ ಸಾಕಷ್ಟು ಪುಸ್ತಕಗಳು ದೊರೆಯುತ್ತಿದ್ದವು.. ಕೈಗೆ ಸಿಗುತ್ತಿದ್ದ ಎಲ್ಲ ಪುಸ್ತಕಗಳನ್ನು ಓದುತ್ತಿದ್ದ ಆಕೆ ಪುಸ್ತಕಗಳ ಲೋಕದಲ್ಲಿ ಕಳೆದು ಹೋಗುತ್ತಿದ್ದಳು. ನ್ಯಾನ್ಸಿ ಡ್ರಿವ್ ಎಂಬ ಡಿಟೆಕ್ಟಿವ್ ಪಾತ್ರವನ್ನು ಅತ್ಯಂತ ಪ್ರೀತಿಯಿಂದ ಆರಾಧಿಸುತ್ತಿದ್ದಳು.
ನ್ಯಾನ್ಸಿ ಡ್ರಿವ್ ಓರ್ವ ಪುಟ್ಟ ಯುವತಿಯಾಗಿದ್ದು ಹಿರಿಯರಿಗಿಂತ ವಿಭಿನ್ನವಾಗಿ ಯೋಚಿಸುತ್ತಿದ್ದ ಆಕೆ ಓರ್ವ ಡಿಟೆಕ್ಟಿವ್ ಆಗಿದ್ದು ತನ್ನ ಮುಂದೆ ಬರುವ ಯಾವುದೇ ತೊಂದರೆಗಳನ್ನು ಬೇಧಿಸಲು ಇತರರ ಅನುಮತಿಗಾಗಿ ಕಾಯದ ದಿಟ್ಟ ಹೆಣ್ಣು ಮಗಳಾಗಿದ್ದಳು.
ಪುಟ್ಟ ಸೋನಿಯಾ ಕೂಡ ಡಿಟೆಕ್ಟಿವ್ ಆಗಬಯಸಿದಳು. ಆಕೆ ಭೇಟಿಯಾದ ವೈದ್ಯರೊಬ್ಬರು ಡಿಟೆಕ್ಟಿವ್ ಕಾರ್ಯ ತುಂಬಾ ದೈಹಿಕ ಶ್ರಮವನ್ನುಬೇಡುವಂತಹದ್ದಾಗಿದ್ದು ಪ್ರಸ್ತುತ ಆಕೆ ಇರುವ ಆರೋಗ್ಯ ಸ್ಥಿತಿಗೆ ಅದು ಅಷ್ಟೇನೂ ಒಗ್ಗುವುದಿಲ್ಲ ಎಂದು ಸಲಹೆ ನೀಡಿದರು. ಇದು ಆಕೆಯಲ್ಲಿ ತುಸು ಬೇಸರವನ್ನು ಉಂಟುಮಾಡಿತು.
ಅದೊಂದು ದಿನ ಆಕೆ ದೂರದರ್ಶನದಲ್ಲಿ ಪೆರ್ರಿ ಮೇಸನ್ ಎಂಬ ವಕೀಲರ ವಾದ ವಿವಾದ ಕೋರ್ಟ್ ರೂಮ್ ಸನ್ನಿವೇಶಗಳು, ಅತ್ಯಂತ ತಾಳ್ಮೆ ಹಾಗೂ ಅಧಿಕಾರಯುತ ಸ್ವರದಲ್ಲಿ ಎಲ್ಲಾ ವಾದ ವಿವಾದಗಳನ್ನು ಆಲಿಸುತ್ತಿದ್ದ ನ್ಯಾಯಾಧೀಶರ ವರ್ತನೆಗಳನ್ನು ನೋಡಿ ಪ್ರಭಾವಿತಗೊಂಡಳು . ಡಯಾಬಿಟೀಸಿನಿಂದ ಬಳಲುತ್ತಿರುವವರು ಜಡ್ಜ್ ಆಗಬಾರದು ಎಂದು ಯಾರೂ ಆಕೆಗೆ ಹೇಳಿರಲಿಲ್ಲ ಅಲ್ಲವೇ!.
ತನ್ನ ಹತ್ತನೇ ವಯಸ್ಸಿನಲ್ಲಿ ಆಕೆ ಕೌಟುಂಬಿಕ ಹಾಗೂ ಆರ್ಥಿಕ ಒತ್ತಡಗಳಿಂದ ದಣಿಯುತ್ತಿದ್ದ ತನ್ನ ತಾಯಿಗೆ ನಾನು ಮುಂದೆ ಕಾನೂನು ವಿದ್ಯಾಭ್ಯಾಸವನ್ನು ಮಾಡಿ ಲಾಯರ್ ಆಗುವೆ ನಂತರ ನ್ಯಾಯಾಧೀಶರಾಗಲು ಇರುವ ಅರ್ಹತಾಪರೀಕ್ಷೆಯನ್ನು ಬರೆದು ನ್ಯಾಯಾಧೀಶಳಾಗುವೆ ಎಂದು ನಿರ್ಧಾರಯುತ ಸ್ವರದಿಂದ ಹೇಳಿದಳು.
ಅದು ಸಾಧ್ಯವಿಲ್ಲ ಎಂದು ಹೇಳಲು ಆಕೆಯ ತಾಯಿ ಸೆಲಿನಾಗೆ ಮಾತುಗಳೇ ಹೊರಬರಲಿಲ್ಲ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ ಆಕೆ ನಂತರ ಕಾರ್ಡಿನಲ್ ಸ್ಪೆಲ ಮನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದಳು. ಹೈಸ್ಕೂಲಿನಲ್ಲಿ ಆಕೆ ಶಾಲೆಯ ಚರ್ಚೆಯ ಗುಂಪನ್ನು ಸೇರಿಕೊಂಡು ಅತ್ಯುತ್ತಮ ಚರ್ಚಾಪಟುವಾಗಿ ರೂಪುಗೊಂಡಳು. ಅಲ್ಲಿ ಆಕೆ ಮಂಡಿಸುತ್ತಿದ್ದ ವಾದಗಳನ್ನು ತೆಗೆದು ಹಾಕಲು ಯಾರೊಬ್ಬರಿಗೂ ಸಾಧ್ಯವಾಗುತ್ತಿರಲಿಲ್ಲ.
ಆಗ ಆಕೆ ಓದುತ್ತಿದ್ದ ಹೈಸ್ಕೂಲಿನ ಶಾಲೆಯ ಕೌನ್ಸಿಲರ್ ಒಬ್ಬರು ಆಕೆಗೆ ಐವಿ ಲೀಗ್ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಲು ಸಲಹೆ ನೀಡಿದರು. ಪ್ರಿನ್ಸ್ ಟನ್ ಎಂಬ ಹೆಸರನ್ನೇ ಕೇಳದ ಸೋನಿಯಾ ಹಾಗೆಂದರೇನು ಎಂದು ಕೇಳಿದ್ದಳಾದರೂ ಅವರ ಸಲಹೆಗೆ ಒಪ್ಪಿ ಅರ್ಜಿ ಗುಜರಾಯಿಸಿದ್ದಳು. ಅಲ್ಲಿ ಆಕೆಯ ಪ್ರವೇಶಕ್ಕೆ ಅನುಮತಿ ದೊರೆಯಿತು.
1972 ರ ಸೆಪ್ಟಂಬರ್ ತಿಂಗಳಿನಲ್ಲಿ ಕೇವಲ ಒಂದು ಸೂಟ್ ಕೇಸ್ ಹಾಗೂ ಇನ್ಸುಲಿನ್ ಕಿಟ್ ನೊಂದಿಗೆ ಆಕೆ ಅಲ್ಲಿಗೆ ಬಂದಿಳಿದಳು. ತಮ್ಮ ಬೇಸಿಗೆಯ ರಜೆಗಳನ್ನು ಯುರೋಪ್ ಮತ್ತಿತರ ಭಾಗಗಳ ಪ್ರವಾಸದಲ್ಲಿ ಕಳೆದ, ಅತ್ಯಾಧುನಿಕ ಪ್ರೈವೇಟ್ ಶಾಲೆಗಳಲ್ಲಿ ಓದುತ್ತಿದ್ದ ಆಕೆಯ ಸಹಪಾಠಿಗಳು, ಆಕೆ ಗಿಂತ ಎಲ್ಲಾ ರೀತಿಯಲ್ಲಿ ಹೆಚ್ಚಿನ ಸವಲತ್ತುಗಳನ್ನು ಹೊಂದಿದವರ ಮಧ್ಯದಲ್ಲಿ ಆಕೆ ಓದಬೇಕಾಗಿತ್ತು. ಮೊದಲ ಸೆಮಿಸ್ಟರ್ ನಲ್ಲಿ ಆಕೆಗೆ ಅತ್ಯಂತ ಕಡಿಮೆ ಅಂಕಗಳು ಬಂದವು. ಬಹಳಷ್ಟು ವಿದ್ಯಾರ್ಥಿಗಳು ತೀವ್ರ ಆರೋಗ್ಯದ ತೊಂದರೆ ಇರುವoತಹ ವ್ಯಕ್ತಿಗೆ ವಿಶ್ವವಿದ್ಯಾಲಯದಲ್ಲಿ ಜಾಗ ನೀಡುವ, ಶಿಕ್ಷಣ ಪಡೆಯುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿ ಪತ್ರವನ್ನು ಕೂಡ ಬರೆದರು.
ಸೋನಿಯಾ ಆ ವರ್ಷದ ಬೇಸಿಗೆಯ ರಜೆಯಲ್ಲಿ ತನಗೆ ತಾನೇ ಶಿಕ್ಷಕಿಯಾಗಿದ್ದುಕೊಂಡು ಇತರರಿಗೆ ಈಗಾಗಲೇ ರೂಢಿಯಾಗಿದ್ದ ಎಲೈಟ್ ವಿದ್ಯಾರ್ಥಿಗಳು ಎಂದು ಅಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ತಮ್ಮನ್ನು ತಾವು ಕರೆದುಕೊಳ್ಳಲು ಅತ್ಯವಶ್ಯಕವಾಗಿದ್ದ ವ್ಯಾಕರಣ, ಭಾಷೆಯ ಮೇಲಿನ ಹಿಡಿತ ಹಾಗೂ ಮಾತಿನ ಶೈಲಿ ಗಳನ್ನು ಕಲಿತಳು. ಅಂತಿಮವಾಗಿ ಅತ್ಯುನ್ನತ ಗೌರವದ ಅಂಕಗಳನ್ನು ಪಡೆದು ತರಗತಿಗೆ ಮೊದಲಿಗಳಾಗಿ ಆಕೆ ತನ್ನ ಪದವಿಯನ್ನು ಪೂರೈಸಿದಳು.
ನಂತರ ಬಂದದ್ದು ಯೇಲ್ ನ ಕಾನೂನು ವಿದ್ಯಾಲಯ…. ಅಲ್ಲಿಂದ ಆಕೆಯ ಪಯಣ ಮ್ಯಾನ್ ಹ್ಯಾಟನ ನ ಡಿಸ್ಟ್ರಿಕ್ಟ್ ಕಛೇರಿಗೆ ಸಾಗಿತು. ಅಲ್ಲಿ ಆಕೆ ಕೊಲೆ ಮತ್ತು ಮಾದಕ ವಸ್ತು ಕಳ್ಳ ಸಾಗಾಣಿಕೆಯ ಕೇಸ್ ಗಳನ್ನು ನಿರ್ವಹಿಸಿದರು.ತಾನು ಬೆಳೆದು ಬಂದ ಪರಿಸರದ ಸುತ್ತಲಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ, ಅಪರಾಧಗಳ ಕುರಿತು ಆಕೆಗೆ ಈಗಾಗಲೇ ಇದ್ದ ಅರಿವಿಗೆ ಕಾನೂನಿನ ಚಿಕಿತ್ಸಕ ಬುದ್ಧಿಯು ಸೇರಿತ್ತು.
ಆಕೆಯ ವಾದ ವಿವಾದಗಳನ್ನು ಆಲಿಸಿದ ಆಕೆಯ ಸಹೋದ್ಯೋಗಿಯೊಬ್ಬರು ಕೋರ್ಟ್ ರೂಂನಲ್ಲಿ ತಾನು ಗಮನಿಸಿರುವ ಎದುರಿಸಲು ಅತ್ಯಂತ ಕಠಿಣವಾದ ವಕೀಲರಲ್ಲಿ ಆಕೆ ಒಬ್ಬಳು ಎಂದು ಪ್ರಶಂಸಿದ್ದರು…. ನಿಜ ಬದುಕು ಆಕೆಗೆ ಈ ಪಾಠವನ್ನು ಚಿಕ್ಕಂದಿನಲ್ಲೇ ಕಲಿಸಿದ್ದು ಇದೀಗ ಅದರ ಫಲವನ್ನು ಕಾಣಬಹುದಾಗಿತ್ತು.
ಮುಂದೆ 1992 ರಲ್ಲಿ ಅಮೆರಿಕದ ಅಧ್ಯಕ್ಷರಾದ ಜಾರ್ಜ್ ಎಚ್ ಡಬ್ಲ್ಯೂ ಬುಷ್ ಅವರು ಆಕೆಯನ್ನು ಫೆಡರಲ್ ಜಡ್ಜ್ ಎಂದು ನೇಮಕ ಮಾಡಿದರು. ಆಗ ಆಕೆಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಅಲ್ಲಿಂದ ಸರಿ ಸುಮಾರು 30 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಆಕೆಯನ್ನು ಪುಟ್ಟ ಊರಾದ ದ ಬ್ರಾಂಕ್ಸ್ ನ ಜನರು ಪ್ರೀತಿಪೂರ್ವಕವಾಗಿ ಅಭಿನಂದಿಸಿದರು.
ಹದಿನಾಲ್ಕು ವರ್ಷಗಳ ನಂತರ ಮುಂದಿನ ಅಧ್ಯಕ್ಷರಾದ ಪ್ರೆಸಿಡೆಂಟ್ ಒಬಾಮಾ ಆಕೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಸುಪ್ರೀಂಕೋರ್ಟಿಗೆ ನೇಮಕ ಮಾಡಿದರು. ಅಲ್ಲಿ ಆಕೆಗೆ 68 ಪರವಾದ ಮತಗಳು ಹಾಗೂ 31 ವಿರೋಧದ ಮತಗಳು ದೊರೆತು ಲ್ಯಾಟಿನ್ ಭಾಷೆ ಮಾತನಾಡುವ ಮೊಟ್ಟಮೊದಲ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಐತಿಹಾಸಿಕ ದಾಖಲೆಯನ್ನು ಮಾಡಿದರು. ಅಲ್ಲದೆ ಸುಪ್ರೀಂ ಕೋರ್ಟನ ನ್ಯಾಯಾಧೀಶರಾದ ಮೂರನೇ ಮಹಿಳೆ ಮತ್ತು ಟೈಪ ಒನ್ ಡಯಾಬಿಟೀಸಿನಿಂದ ಬಳಲುತ್ತಿರುವ ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶರು ಎಂದು ಗುರುತಿಸಿಕೊಂಡರು.
ಇದೀಗ 71 ರ ಹರೆಯದ ಜಸ್ಟಿಸ್ ಸೋನಿಯಾ ಪ್ರತಿದಿನ 4 ರಿಂದ 6 ಬಾರಿ ತನ್ನ ದೇಹದಲ್ಲಿ ಇನ್ಸುಲಿನ್ ಇಂಜೆಕ್ಷನ್ ಗಳನ್ನು ತಾನೇ ಮಾಡಿಕೊಳ್ಳುತ್ತಾರೆ. ಆಕೆಯು ತನ್ನ ದೇಹದ ಮೇಲೆ ಒಂದು ಇನ್ಸುಲಿನ್ ಮಾನಿಟರನ್ನ ಸದಾ ಧರಿಸಿರುತ್ತಾಳೆ. ಮೌಖಿಕವಾದ ವಾದಗಳನ್ನು ಆಲಿಸುವಾಗ ಒಂದಷ್ಟು ಗ್ಲುಕೋಸ್ ಚಾಕಲೇಟುಗಳನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ.
ತನ್ನಂತೆಯೇ ತೀವ್ರವಾದ ಆರೋಗ್ಯ ಸಮಸ್ಯೆ ಹೊಂದಿರುವ ಮಕ್ಕಳಿಗಾಗಿ ಪುಸ್ತಕವನ್ನು ಬರೆದಿರುವ ಆಕೆ ಅತ್ಯಂತ ಸರಳವಾಗಿ ಹೇಳುವುದು ಇಷ್ಟೇ …. ಅನಿವಾರ್ಯವಾಗಿಯಾದರೂ ನೀವು ಬದುಕಲೇಬೇಕಾದ ಜೀವನ ಶೈಲಿಯಿದು.ಇದನ್ನು ನೀವು ಒಪ್ಪಿ ಅಪ್ಪಿಕೊಳ್ಳಲೇಬೇಕು.
ಇಂದಿಗೂ ಆಕೆ ಸುಪ್ರೀಂ ಕೋರ್ಟ್ ನಲ್ಲಿ ಕುಳಿತುಕೊಳ್ಳುತ್ತಾರೆ. ಕೇಸುಗಳ ಕುರಿತು ನಿರ್ಣಯವನ್ನು ಕೈಗೊಳ್ಳುತ್ತಾರೆ 1962 ರಲ್ಲಿ ಇನ್ನು ಕೆಲವೇ ದಿನಗಳು ಮಾತ್ರ ಬದುಕಲು ಸಾಧ್ಯ ಎಂದು ಅಂದಿನ ವೈದ್ಯಕೀಯ ವ್ಯವಸ್ಥೆಯ ಮಿತಿಗಳ ಕಾರಣ ಆಕೆಯ ಭವಿಷ್ಯವನ್ನು ನಿರ್ಧರಿಸಿದ ವೈದ್ಯರ ನಿರೀಕ್ಷೆಯನ್ನು ಮೀರಿ ಆಕೆ ಬದುಕಿದ್ದಾಳೆ…. ತನ್ನ ಸ್ವಂತ ಬಲದ ಮೇಲೆ.
ಪ್ರತಿದಿನ ಮುಂಜಾನೆ ಬೆಳಗಿನ ಬ್ರೇಕ್ ಫಾಸ್ಟ್ ಗೆ ಮುನ್ನ ಕಡ್ಡಾಯವಾಗಿ ಇನ್ಸುಲಿನ್ ಇಂಜೆಕ್ಷನ್ ಪಡೆಯಲೇಬೇಕು ಎಂಬ ವೈದ್ಯರ ಹೇಳಿಕೆಯ ಮೇರೆಗೆ ಪ್ರತಿದಿನ ಔಷಧಿಯನ್ನು ಯಾರು ಆಕೆಗೆ ಇಂಜೆಕ್ಟ್ ಮಾಡಬೇಕು ಎಂಬ ಹಿರಿಯರು ಬಗೆಹರಿಸಲಾಗದ ಹಾಗೂ ನಿರ್ಣಯಿಸಲಾಗದ ಸವಾಲೊಂದನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಮಾಧಾನದಿಂದ ಹಾಗೂ ಶಾಂತಿಯುತವಾಗಿ ಬಗೆಹರಿಸಿದ ಅಂದಿನ ಪುಟ್ಟ ಬಾಲೆ ಇಂದಿಗೂ ಕೂಡ ತನ್ನನ್ನು ತಾನೇ ಸಂಭಾಳಿಸಿಕೊಳ್ಳುತ್ತಾಳೆ….. ತನಗೆ ತಾನೇ ಕೊಟ್ಟುಕೊಂಡ ಮಾತಿಗೆ. ಆಕೆಯ ಸಂಕಲ್ಪ ಶಕ್ತಿಗೆ ನಮ್ಮ ನಮನಗಳು.

Please follow and like us:



More Stories
ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
ಪೈಲ್ವಾನರ ವಿನಯ:ಬಲಿಷ್ಠ ದೇಹಕ್ಕೆ ಸಂಸ್ಕಾರದ ಮೆರುಗು
ಸ್ವಾವಲಂಬಿ ಬದುಕು ಕಲಿಸಿದ ಅಪ್ಪ