
ರೈತ ಅನ್ನ ನೀಡಿ ಜನರ ಪ್ರಾಣ ಉಳಿಸಿದರೆ, ನೇಕಾರ ಬಟ್ಟೆ ನೇಯ್ದು ಸಮಾಜದ ಮಾನ ಕಾಪಾಡುತ್ತಾನೆ. ಪವಿತ್ರವಾದ ನೇಯ್ಗೆಯ ಕಾಯಕದಿಂದ ಮಾನವನ್ನು ಉಳಿಸುವ ಉದಾತ್ತ ಮನೋಧರ್ಮ ನೇಕಾರರದ್ದು ಎಂದು ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಗೌರೀಶ ಉದ್ನೂರ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಪಾಕ್ಷಿಕ ಮಾತು-೧೬’ ಕಾರ್ಯಕ್ರಮದಲ್ಲಿ ‘ನೇಕಾರ ಸಮಾಜ ಮತ್ತು ಸಂಸ್ಕೃತಿ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ರೈತ ಮತ್ತು ನೇಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತ ಬೆಳೆದ ಹತ್ತಿಯಿಂದ ನೇಕಾರ ಬಟ್ಟೆ ತಯಾರಿಸುತ್ತಾನೆ. ಕಾಯಕದ ಮೇಲೆ ಅಪಾರ ನಂಬಿಕೆ, ಶ್ರದ್ಧೆ ಹಾಗೂ ನಿಷ್ಠೆ ಹೊಂದಿರುವ ನೇಕಾರರು ಶ್ರಮಜೀವಿಗಳು ಮತ್ತು ಶಾಂತಿಪ್ರಿಯರು. ನೇಕಾರ ಸಮಾಜವೆಂದರೆ ಅದು ಕೇವಲ ಒಂದು ವೃತ್ತಿಯಲ್ಲ, ಅದೊಂದು ಜೀವಂತ ಸಂಸ್ಕೃತಿ ಎಂದರು.

ಪುರಾತನ ಪರಂಪರೆ ಹೊಂದಿರುವ ನೇಕಾರರು ಪ್ರಸ್ತುತ ದಿನಗಳಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಸರಿಯಾದ ಯೋಜನೆ ಮತ್ತು ಸೌಲಭ್ಯಗಳು ತಲುಪುತ್ತಿಲ್ಲ. ವಿದ್ಯುತ್ ಕಣ್ಣುಮುಚ್ಚಾಲೆ, ಮಳಿಗೆಗಳ ಕೊರತೆ, ಮಾರುಕಟ್ಟೆ ಸಮಸ್ಯೆ, ಮಧ್ಯವರ್ತಿಗಳ ಹಾವಳಿ ಹಾಗೂ ಕೂಲಿಕಾರರ ಸಮಸ್ಯೆಗಳು ಅವರನ್ನು ಕಾಡುತ್ತಿವೆ. ನಿರಂತರವಾಗಿ ಪೆಡಲ್ ತುಳಿಯುವುದರಿಂದ ನೇಕಾರರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ ಹೊಸ ಪೀಳಿಗೆಯ ನಿರಾಸಕ್ತಿ ಮತ್ತು ಬಣ್ಣ ತಯಾರಿಕೆಯಲ್ಲಿನ ಸಮಯದ ಅಭಾವ ನೇಕಾರಿಕೆಯನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೊಣಕಾಲ್ಮೂರು, ಕೊಪ್ಪಳ ಭಾಗದ ನಗರ, ಗುಳೇದಗುಡ್ಡ, ಬಾದಾಮಿ, ಕಮಟಗಿ, ಇಳಕಲ್, ರಾಯದುರ್ಗ, ಕಿನ್ನಾಳ ಮುಂತಾದ ಊರುಗಳು ನೇಯ್ಗೆಗೆ ಹೆಸರುವಾಸಿಯಾಗಿವೆ. ಈ ಭಾಗಗಳಲ್ಲಿ ತಯಾರಾಗುವ ಉಡುಪುಗಳು, ಸೀರೆಗಳು ಮತ್ತು ಖಣಗಳು ಇಂದಿಗೂ ಪ್ರಸಿದ್ಧವಾಗಿವೆ. ಆಧುನಿಕತೆಗೆ ತಕ್ಕಂತೆ ನೇಯ್ಗೆಯಲ್ಲಿ ಹೊಸ ಆವಿಷ್ಕಾರಗಳು ನಡೆಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶೇಷ ಉಪನ್ಯಾಸದ ಸಂಚಾಲಕರು ಹಾಗೂ ಪ್ರಾಧ್ಯಾಪಕರಾದ ಡಾ. ತಾರಿಹಳ್ಳಿ ಹನುಮಂತಪ್ಪ ವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ಎಲ್. ಶ್ರೀನಿವಾಸ ಹಾಗೂ ಸಹ ಸಂಚಾಲಕರಾದ ಕುಮಾರ್ ಡಿ.ಬಿ. ಉಪಸ್ಥಿತರಿದ್ದರು. ಸಂಶೋಧಕ ರಾಮಾಂಜನೇಯ ಕಾರ್ಯಕ್ರಮ ನಿರೂಪಿಸಿದರು. ಸಂಶೋಧನಾರ್ಥಿ ಲಕ್ಷ್ಮಿ ಜಿ.ಬಿ. ವಂದಿಸಿದರು. ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


More Stories
ಕೆಲಸದವಳು “ಅಮ್ಮಾ ನಾಳೆ ಬರಲ್ಲ”: ಒಂದೇ ಮಾತಿಗೆ ತಲೆಕೆಳಗಾಯ್ತು ಇಡೀ ಸಂಸಾರ! : ನಂದಿನಿ ಸನಬಾಳ
ಸಮಗ್ರ ಸಾರಿಗೆ ಪ್ರಾಧಿಕಾರ ಸ್ಥಾಪನೆ
ದೇಶದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿ: ಗಂಟೆಗಟ್ಟಲೆ ಪ್ರಯಾಣದ ಅವಧಿ ನಿಮಿಷಗಳಿಗೆ ಕಡಿತ