October 14, 2026

Hampi times

Kannada News Portal from Vijayanagara

ಏಷ್ಯನ್ ಗೇಮ್ಸ್ ಕ್ರಿಕೆಟ್: ಪಾಕಿಸ್ತಾನ ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತ

ಜಪಾನ್‌ನ ನಿಶ್ಶಿನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪುರುಷರ ಟಿ೨೦ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ೧೯ ರನ್‌ಗಳಿಂದ ಬಗ್ಗುಬಡಿದ ಭಾರತ ತಂಡ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ನಿಗದಿತ ೨೦ ಓವರ್‌‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೧೧ ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ ೨೮ ಎಸೆತಗಳಲ್ಲಿ ಬಿರುಸಿನ ೬೧ ರನ್ ಗಳಿಸಿದರೆ, ತಿಲಕ್ ವರ್ಮಾ ಅಜೇಯ ೫೧ ರನ್ (೨೨ ಎಸೆತ) ಸಿಡಿಸಿ ಅಬ್ಬರಿಸಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ೧೪ ಎಸೆತಗಳಲ್ಲಿ ಸ್ಫೋಟಕ ೨೭ ರನ್ ಚಚ್ಚುವ ಮೂಲಕ ಭಾರತದ ಮೊತ್ತ ೨೦೦ರ ಗಡಿ ದಾಟಲು ನೆರವಾದರು. ಪಾಕಿಸ್ತಾನದ ಪರ ಎಡಗೈ ಸ್ಪಿನ್ನರ್ ಅರಾಫತ್ ಮಿನ್ಹಾಸ್ ಹಾಗೂ ವೇಗದ ಬೌಲರ್ ಅಹ್ಮದ್ ದಾನಿಯಾಲ್ ತಲಾ ಎರಡು ವಿಕೆಟ್ ಕಬಳಿಸಿದರು.

ಭಾರತ ನೀಡಿದ ೨೧೨ ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೯೬ ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಪಾಕಿಸ್ತಾನದ ಪರ ಹಸನ್ ನವಾಜ್ ೯೬ ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ೧೯ ರನ್‌ಗಳ ರೋಚಕ ಗೆಲುವು ದಾಖಲಿಸಿದ ಭಾರತ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

Please follow and like us:

 

 

Translate »
[t4b-ticker]
error: Content is protected !!