October 14, 2026

Hampi times

Kannada News Portal from Vijayanagara

ಮಹಿಳೆಯರೇ ಭಾರತವನ್ನು ನಿರ್ಮಿಸುವವರು

ಹೊಸಪೇಟೆ): ಮಹಿಳೆಯರನ್ನು ಕೇವಲ ಅಬಲೆಯರೆಂದು ಪರಿಗಣಿಸುತ್ತಿದ್ದ ಸಾಂಪ್ರದಾಯಿಕ ಸಮಾಜದ ನಡುವೆ, ಅವರೇ ನವ ಭಾರತವನ್ನು ನಿರ್ಮಿಸುವ ಅಪ್ರತಿಮ ಶಕ್ತಿಗಳು ಎಂದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೈ. ಯರ್ರಿಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ‘ಗಾಂಧಿ ಮತ್ತು ಮಹಿಳೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಹಿಂಸೆ ಎಂಬುದು ನಮ್ಮ ಅಸ್ತಿತ್ವದ ಮೂಲ ನಿಯಮವಾಗಬೇಕಾದರೆ ದೇಶದ ಭವಿಷ್ಯ ಮಹಿಳೆಯರ ಕೈಯಲ್ಲಿದೆ. ಏಕೆಂದರೆ ಅಹಿಂಸೆಯು ಮಹಿಳೆಯರ ರಕ್ತಗತವಾದ ಸಹಜ ಗುಣಗಳಲ್ಲಿ ಒಂದಾಗಿದೆ ಎಂದು ಗಾಂಧೀಜಿ ದೃಢವಾಗಿ ನಂಬಿದ್ದರು. ಭಾರತೀಯ ಸಮಾಜದಲ್ಲಿ ಶಿಕ್ಷಣ ಹಾಗೂ ವಿವಾಹ ವ್ಯವಸ್ಥೆಗಳ ನಡುವಿನ ಸಂಘರ್ಷವು ಮಹಿಳೆಯರ ಬೌದ್ಧಿಕ ಮತ್ತು ಶೈಕ್ಷಣಿಕ ಪ್ರಗತಿಗೆ ದೊಡ್ಡ ತೊಡಕಾಗಿತ್ತು. ಬಾಲ್ಯವಿವಾಹ ಸಮಾಜಕ್ಕೆ ಮಾರಕ ಎಂಬುದನ್ನು ಗಾಂಧೀಜಿ ತಮ್ಮ ಸ್ವಂತ ಅನುಭವದ ಮೂಲಕ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟರು ಎಂದರು.

ಸ್ತ್ರೀ ಎಂದರೆ ಕೇವಲ ದುರ್ಬಲಳಲ್ಲ; ತ್ಯಾಗ, ಅಹಿಂಸೆ, ಪ್ರೀತಿ, ಕರುಣೆ, ನೈತಿಕತೆ, ಆತ್ಮಬಲ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿ ಅವರಲ್ಲಿದೆ. ಶಕ್ತಿ ಎಂದರೆ ಕೇವಲ ಬಾಹ್ಯ ದೈಹಿಕ ಸಾಮರ್ಥ್ಯವಲ್ಲ, ಬದಲಿಗೆ ಅಂತರಂಗದ ಆತ್ಮಬಲವೇ ನಿಜವಾದ ಶಕ್ತಿ ಎಂದು ಗಾಂಧೀಜಿ ಸಾರಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಪಾಲ್ಗೊಳ್ಳುವಿಕೆ ನೀಡುವ ಮೂಲಕ ಅವರ ಹಕ್ಕುಗಳಿಗೆ ಬಲ ತುಂಬಿದರು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಗಾಂಧೀಜಿಯವರ ಸತ್ಯ, ಅಹಿಂಸೆ, ಗ್ರಾಮ ಸ್ವರಾಜ್ಯ ಹಾಗೂ ಗೃಹ ಕೈಗಾರಿಕೆಯಂತಹ ಶ್ರೇಷ್ಠ ಪರಿಕಲ್ಪನೆಗಳು ಇಂದಿಗೂ ಸಮಾಜದಲ್ಲಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ನಗರೀಕರಣದ ತೀವ್ರತೆಯಿಂದಾಗಿ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಸ್ವಂತ ನೆಲದಲ್ಲೇ ಅಸಹಾಯಕರಾಗಿ ಬದುಕುವ ದುಸ್ಥಿತಿ ಎದುರಾಗಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಗಾಂಧೀಜಿಯವರ ಸ್ವಾವಲಂಬನೆ ಹಾಗೂ ಗ್ರಾಮ ಸ್ವರಾಜ್ಯದ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ ಎಂದರು.

ಗಾಂಧೀಜಿಯವರ ಮೌಲ್ಯಗಳನ್ನು ಆಳವಾಗಿ ಅಧ್ಯಯನ ಮಾಡಿ, ಆ ಮಾನವೀಯ ಗುಣಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಗಾಂಧಿ ತತ್ವಗಳು ಬದುಕಿನಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಉಪಸ್ಥಿತರಿದ್ದರು. ಆಡಳಿತ ವಿಭಾಗದ ಪ್ರಭಾರ ಉಪಕುಲಸಚಿವರಾದ ಶ್ರೀಮತಿ ಡಿ. ಪ್ರಭಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ವಿಭಾಗಗಳ ಡೀನರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Please follow and like us:

 

 

Translate »
[t4b-ticker]
error: Content is protected !!