
ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ದಾನಿಗಳ ಸಹಕಾರ ಅತ್ಯಗತ್ಯ: ಉದ್ಯಮಿ ಕೆ.ರವಿಶಂಕರ್
ಹಂಪಿ ಟೈಮ್ಸ್ ವರದಿಗೆ ಸ್ಪಂದಿಸಿದ ದಾನಿಗಳು | ಎಂಬಿಬಿಎಸ್ ವಿದ್ಯಾರ್ಥಿನಿಗೆ ದೊರೆತ ಮೊದಲ ಆರ್ಥಿಕ ನೆರವು
ಹೊಸಪೇಟೆ: ಬಡತನ ಹಾಗೂ ಆರ್ಥಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಸತತ ಪರಿಶ್ರಮದಿಂದ ವೈದ್ಯಕೀಯ ಸೀಟು ಪಡೆದಿರುವ ಹೂವಿನ ಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದ ಕೂಲಿ ಕಾರ್ಮಿಕನ ಪುತ್ರಿ ದಿವ್ಯಾ ಚವ್ಹಾಣ್ ಅವರ ವಿದ್ಯಾಭ್ಯಾಸಕ್ಕೆ ಉದ್ಯಮಿ ಹಾಗೂ ಸಮಾಜ ಸೇವಕ ಕೆ. ರವಿಶಂಕರ್ ಅವರು ಭಾನುವಾರ 25 ಸಾವಿರ ರೂ.ಗಳ ನಗದು ಆರ್ಥಿಕ ನೆರವು ನೀಡುವ ಮೂಲಕ ನೆರವಾಗಿದ್ದಾರೆ.
ಹೂವಿನಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿ ತಾಂಡಾದ ಕೂಲಿ ಕಾರ್ಮಿಕ ಷಣ್ಮುಖಪ್ಪ ಚವ್ಹಾಣ್ ವರ ಪುತ್ರಿ ದಿವ್ಯಾ ಚವ್ಹಾಣ್, ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ವಿವಿಧ ವಸತಿ ಶಾಲೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ, ಪ್ರಸ್ತುತ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದ್ದಾರೆ. ಆದರೆ, ಕೇವಲ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿರುವ ಕುಟುಂಬಕ್ಕೆ ವೈದ್ಯಕೀಯ ಶಿಕ್ಷಣದ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ಕುರಿತು ‘ಹಂಪಿ ಟೈಮ್ಸ್’ ದಿನಪತ್ರಿಕೆಯಲ್ಲಿ ಸೆಪ್ಟೆಂಬರ್ 18 ರಂದು ʻವೈದ್ಯಕೀಯ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ- ಕೂಲಿ ಕಾರ್ಮಿಕನ ಪುತ್ರಿ ವಿದ್ಯಾಭ್ಯಾಸಕ್ಕೆ ನೆರವಿನ ನಿರೀಕ್ಷೆʼ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಓದಿ ಸ್ಪಂದಿಸಿದ ಓದುಗರು ಹಾಗೂ ಸಮಾಜ ಸೇವಕರು, ದಾನಿಗಳಾದ ಹೊಸಪೇಟೆಯ ಕೆ. ರವಿಶಂಕರ್ ಅವರು ಪತ್ರಿಕೆ ಸಂಪಾದಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣ ಅಡ್ಮಿಷನ್ ಆದ ನಂತರವೂ ಅಧಿಕ ಖರ್ಚುಗಳಿರುತ್ತದೆ. ಆದರೂ ತಮ್ಮಿಂದ ಪ್ರೋತ್ಸಾಹದ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದರು. ಅದರಂತೆ, ವಿದ್ಯಾರ್ಥಿನಿ ದಿವ್ಯಾ ಚವ್ಹಾಣ್ ಹಾಗೂ ಅವರ ತಂದೆ ಷಣ್ಮುಖಪ್ಪ ಅವರು ಹೊಸಪೇಟೆಗೆ ಆಗಮಿಸಿದ್ದರು. ಕೆ. ರವಿಶಂಕರ್ ಅವರು ಅವರ ಕಚೇರಿಯಲ್ಲಿ 25,000 ರೂ. ನಗದು ಹಣವನ್ನು ವಿದ್ಯಾರ್ಥಿನಿಯ ಕೈಗೆ ನೀಡಿ ಧೈರ್ಯ ತುಂಬಿ ಆಶೀರ್ವದಿಸಿ, ಭವಿಷ್ಯದಲ್ಲಿ ಬದುಕು ರೂಪಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಿದರು.
ಎಂ.ಬಿ.ಬಿ.ಎಸ್. ಶಿಕ್ಷಣಕ್ಕೆ ಸಾಕಷ್ಟು ಖರ್ಚು ತಗಲುತ್ತದೆ. ನಮ್ಮಿಂದ ಪ್ರೋತ್ಸಾಹದ ಆರ್ಥಿಕ ಸಹಾಯವಿದು. ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಪದವಿ ಪೂರೈಸಿ, ಹೆತ್ತವರಿಗೆ ಕೀರ್ತಿ ತರಬೇಕು. ಭವಿಷ್ಯದಲ್ಲಿ ವೈದ್ಯೆಯಾದ ಬಳಿಕ ಬಡವರಿಗೆ ಮತ್ತು ಅಸಹಾಯಕರಿಗೆ ನಿನ್ನಿಂದ ಸಾಧ್ಯವಾದ ನೆರವು, ಪ್ರೋತ್ಸಾಹ ನೀಡಬೇಕು ಎಂದು ವಿದ್ಯಾರ್ಥಿನಿಗೆ ಉದ್ಯಮಿ ಕೆ. ರವಿಶಂಕರ್ ಕಿವಿಮಾತು ಹೇಳಿ ಶುಭಹಾರೈಸಿದರು.
ವಿದ್ಯಾರ್ಥಿನಿಯ ತಂದೆ ಷಣ್ಮುಖಪ್ಪ ಚವ್ಹಾಣ್ ಮಾತನಾಡಿ, ನಮ್ಮ ಮಗಳಿಗೆ ಎಂ.ಬಿ.ಬಿ.ಎಸ್. ಸರ್ಕಾರಿ ಕೋಟಾದಲ್ಲಿ ಸೀಟು ಲಭಿಸಿದೆ. ಕೋರ್ಸ್ ಪೂರ್ಣಗೊಳ್ಳುವುದಕ್ಕೆ ಕನಿಷ್ಠ 15 ಲಕ್ಷಕ್ಕೂ ಅಧಿಕ ಹಣ ಬೇಕಾಗಬಹುದು. ಕಾಲೇಜು ಶುಲ್ಕಕ್ಕಿಂತ ಊಟ, ವಸತಿ ಇತರ ಖರ್ಚುಗಳು ನಮ್ಮ ಪಾಲಿಗೆ ಭಾರವಾಗಿವೆ. ದೇವರ ರೂಪದಲ್ಲಿ ದಾನಿಗಳು ನಮಗೆ ನೆರವು ನೀಡಿರುವುದು ನಮ್ಮಲ್ಲಿ ದೇವರಿದ್ದಾನೆ ಎಂಬ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಹಂಪಿ ಟೈಮ್ಸ್ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ನಂತರ ನಮಗೆ ಮೊದಲ ಸಹಾಯ ದೊರೆತಿದ್ದು ದಾನಿಗಳಾದ ಕೆ.ರವಿಶಂಕರ ಅವರಿಂದ. ದಾನಿಗಳಿಗೆ ಭಗವಂತನು ಆಯುರಾರೋಗ್ಯ ನೀಡಲಿ. ಅವರ ಮಾನವೀಯ ಸಹಾಯವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಭಾವುಕರಾಗಿ ಕೃತಜ್ಞತೆ ಅರ್ಪಿಸಿದರು.
ನೆರವು ಪಡೆದ ವಿದ್ಯಾರ್ಥಿನಿ ದಿವ್ಯಾ ಚವ್ಹಾಣ್ ಕೂಡ ತಮ್ಮ ವಿದ್ಯಾಭ್ಯಾಸಕ್ಕೆ ನೆರವಾದ ದಾನಿಗಳಿಗೆ ಹಾಗೂ ಪತ್ರಿಕಾ ಬಳಗಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಅರ್ಹ ಪ್ರತಿಭಾವಂತ ವಿದ್ಯಾರ್ಥಿನಿ ಮತ್ತು ದಾನಿಗಳ ನಡುವೆ ‘ಹಂಪಿ ಟೈಮ್ಸ್’ ದಿನಪತ್ರಿಕೆಯು ಸೇತುವೆಯಾಗಿ ಕಾರ್ಯನಿರ್ವಹಿಸಿರುವುದು ಹಂಪಿ ಟೈಮ್ಸ್ ಬಳಗಕ್ಕೆ ಹೆಮ್ಮೆಯ ಕ್ಷಣವಾಗಿತ್ತು.


More Stories
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು
ದಕ್ಷಿಣದಲ್ಲಿ ಮೂರೇ ಚಿತ್ರ: ನಾನಾ ಪಟೇಕರ್
ದೇಶದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿ: ಗಂಟೆಗಟ್ಟಲೆ ಪ್ರಯಾಣದ ಅವಧಿ ನಿಮಿಷಗಳಿಗೆ ಕಡಿತ