September 21, 2026

Hampi times

Kannada News Portal from Vijayanagara

ಕರ್ನಾಟಕದ ರೇಷ್ಮೆಗೆ ನಂ.1 ಸ್ಥಾನ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಬೆಂಗಳೂರು
ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರಿನ ಯುಎಎಸ್-ಜಿಕೆವಿಕೆ ಸಭಾಂಗಣದಲ್ಲಿ ಕೇಂದ್ರ ರೇಷ್ಮೆ ಮಂಡಳಿ (ಸಿಎಸ್‌ಬಿ) ವತಿಯಿಂದ ಆಯೋಜಿಸಲಾಗಿದ್ದ 77ನೇ ಸಂಸ್ಥಾಪನಾ ದಿನಾಚರಣೆ ಹಾಗೂ ರೇಷ್ಮೆ ಉತ್ಪನ್ನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕಾ ಪ್ರಗತಿಗೆ ಸರ್ಕಾರ ವಿಶೇಷ ಗಮನ ನೀಡುತ್ತಿದೆ. ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಸಾಂದ್ರ ಉತ್ಪಾದನಾ ವಿಧಾನಗಳ ಮೂಲಕ ಜಾಗತಿಕ ರಫ್ತು ಗುಣಮಟ್ಟದ ರೇಷ್ಮೆ ತಯಾರಿಕೆಗೆ ಮಹತ್ವ ನೀಡಲಾಗುತ್ತಿದ್ದು, ಇದು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ ಆಮದು ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ಎಂ.ಎಸ್.ಎಂ.ಇ ಕೈಗಾರಿಕಾ ಚೌಕಟ್ಟಿನಡಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ನೋಂದಾಯಿಸಿಕೊಳ್ಳುತ್ತಿದ್ದು, ಅವರ ಉತ್ತೇಜನಕ್ಕಾಗಿ ಸರ್ಕಾರ ಸಬ್ಸಿಡಿ ಹಾಗೂ ಗುಣಮಟ್ಟ ಸುಧಾರಣಾ ಯೋಜನೆಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿದೆ. ಸ್ಥಳೀಯ ಉತ್ಪಾದಕರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ, ರೇಷ್ಮೆ ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

 

ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಮಾತನಾಡಿ, ದೇಶದ ರೇಷ್ಮೆ ಕೃಷಿ ಕ್ಷೇತ್ರದ ಸಮಗ್ರ ವಿಸ್ತರಣೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಬೆಳೆಗಾರರ ವಾರ್ಷಿಕ ಆದಾಯವನ್ನು 10 ರೂ.ಲಕ್ಷದಿಂದ 12 ಲಕ್ಷ ರೂ.ಗೆ ಏರಿಸುವ ಮೂಲಕ 2028-29ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

2014ರಲ್ಲಿ 26,000 ಮೆಟ್ರಿಕ್ ಟನ್ ಇದ್ದ ದೇಶದ ರೇಷ್ಮೆ ಉತ್ಪಾದನೆಯು ಪ್ರಸ್ತುತ 42,000 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. 2030-31ರ ವೇಳೆಗೆ ಇದನ್ನು 60,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಇದೆ. ರೇಷ್ಮೆ ಕೃಷಿಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಲು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ‘ಅತ್ಯುತ್ತಮ ರೇಷ್ಮೆ ಕೃಷಿಕ’ ಪ್ರಶಸ್ತಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ವಿಜ್ಞಾನಿಗಳ ಹೊಸ ಆವಿಷ್ಕಾರಗಳು, ಸುಧಾರಿತ ಹೈಬ್ರಿಡ್ ತಳಿಗಳು ರೈತರ ಕೈಸೇರಬೇಕು.

ಜವಳಿ ಮಾರುಕಟ್ಟೆಯನ್ನು 300 ಶತಕೋಟಿ ಡಾಲರ್‌ಗೆ ಕೊಂಡೊಯ್ದು, ನೇಕಾರರು ಮತ್ತು ಶ್ರಮಿಕರಿಗೆ ಸೂಕ್ತ ಆರ್ಥಿಕ ಭದ್ರತೆ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು. ಜವಳಿ ಸಚಿವಾಲಯದ ಜಂಟಿ ಕಾರ್ಯದರ್ಶಿ (ರೇಷ್ಮೆ) ಹಾಗೂ ಸಿಎಸ್‌ಬಿ ಉಪಾಧ್ಯಕ್ಷೆ ಪದ್ಮಿನಿ ಸಿಂಗ್ಲಾ ಮಾತನಾಡಿ, 2030-31ರ ವೇಳೆಗೆ 60,000 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದಿಸುವ ಗುರಿ ತಲುಪಲು ಎಐ, ಜಿಐಎಸ್ ಹಾಗೂ ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಗುಣಮಟ್ಟ ಪರಿಶೀಲನೆಯಲ್ಲಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಂಸದರು ಹಾಗೂ ಸಿಎಸ್‌ಬಿ ಸದಸ್ಯ ಜಿ. ಲಕ್ಷ್ಮೀನಾರಾಯಣ, ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ, ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಗಿರೀಶ ಆರ್. ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ರೇಷ್ಮೆ ಬೆಳೆಗಾರರು, ನೇಕಾರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 28 ವಿಜ್ಞಾನಿಗಳಿಗೆ ನೇಮಕಾತಿ ಪತ್ರ, ಶ್ರೇಷ್ಠ ಸಿಬ್ಬಂದಿಗಳಿಗೆ ಪ್ರಶಸ್ತಿ ಹಾಗೂ ವಿವಿಧ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಯಿತು.

Please follow and like us:

 

 

Translate »