https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂರನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಭಾನುವಾರ ಹಂಪಿ ವಿಜಯವಿಠಲ ದೇವಸ್ಥಾನ ಸೇರಿದಂತೆ ರಾಜ್ಯದ ಅನೇಕ ಐತಿಹಾಸಿಕ ಸ್ಥಳಗಳಿಗೆ ಪಿಂಕ್ ಲೈಟ್ (ಗುಲಾಬಿ ಬಣ್ಣದ ಬೆಳಕು) ಅಳವಡಿಸಲಾಗಿದೆ. ಆದರೆ, ಹಂಪಿಯಲ್ಲಿ ಪಿಂಕ್ ಲೈಟ್ ಮೂಲಕ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಬಂದ ಪ್ರವಾಸಿಗರಿಗೆ ಮತ್ತು ಸ್ಮಾರಕ ಪ್ರಿಯರಿಗೆ ಕತ್ತಲು ಹಾಗೂ ನಿಷೇಧದ ಬಿಸಿ ತಟ್ಟಿದ್ದು, ಸರ್ಕಾರದ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂರನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಹಂಪಿಯ ಐತಿಹಾಸಿಕ ವಿಜಯವಿಠಲ ದೇವಸ್ಥಾನಕ್ಕೆ ಪಿಂಕ್ ಲೈಟ್ ಅಳವಡಿಸಿ ಅದ್ಧೂರಿಯಾಗಿ ಪ್ರಚಾರ ನೀಡಲಾಗಿತ್ತು. ಇದನ್ನು ನಂಬಿ ಸಂಜೆ ವೇಳೆ ಸ್ಮಾರಕ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರಿಗೆ ಕೇವಲ ನಿರಾಸೆ ಮಾತ್ರವಲ್ಲದೆ ಕತ್ತಲು ಎದುರಾಗಿದೆ. ಸಂಜೆ ನಂತರ ಈ ಭಾಗದ ರಸ್ತೆಗಳಲ್ಲಿ ಯಾವುದೇ ಬೀದಿ ದೀಪಗಳ ವ್ಯವಸ್ಥೆಯಿಲ್ಲದಿರುವುದು ಪ್ರವಾಸಿಗರಿಗೆ ಸಂಕಷ್ಟ ತಂದೊಡ್ಡಿದೆ. ಕನಿಷ್ಠ ಸ್ಮಾರಕದ ಸುತ್ತಲೂ ವಿದ್ಯುತ್ ಅಥವಾ ಸೋಲಾರ್ ದೀಪಗಳ ಬೆಳಕಿಲ್ಲದೆ ಜನರು ಪರದಾಡುವಂತಾಗಿದೆ.

ಮಾದ್ಯಮಗಳಲ್ಲಿ ಬರುವ ಪ್ರಚಾರವನ್ನು ನೋಡಿ ಹಂಪಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಬಂದ ಜನರು, ಕತ್ತಲಲ್ಲೇ ಬಂದು ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಾರಕ ವೀಕ್ಷಣೆಗೆ ಹೆಜ್ಜೆ ಹೆಜ್ಜೆಗೂ ಪ್ರವೇಶ ಶುಲ್ಕ ಪಡೆಯುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI), ಮತ್ತು ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳು ಪ್ರವಾಸಿಗರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
ರಾಜಕಾರಣಿಗಳು ಮತ್ತು ಕೇಂದ್ರ ಸಚಿವರು ಭೇಟಿ ನೀಡಿದಾಗ ಮಾತ್ರ ಹಬ್ಬದ ವಾತಾವರಣ ಸೃಷ್ಟಿಸಿ, ವರ್ಷದುದ್ದಕ್ಕೂ ಹಂಪಿ ಹೀಗೆಯೇ ಇರುತ್ತದೆ ಎಂದು ಬಿಂಬಿಸುವ ಅಧಿಕಾರಿಗಳ ಧೋರಣೆಗೆ ಪ್ರವಾಸಿಗರು ಕಿಡಿಕಾರಿದ್ದಾರೆ. ಜಗತ್ಪ್ರಸಿದ್ಧ ಹಂಪಿ ವೀಕ್ಷಣೆಗೆಂದು ದೂರದೂರುಗಳಿಂದ ಬಂದ ಜನರು, ಒಳಗಡೆ ಬಿಡದ ಕಾರಣ ನಿರಾಸೆಯಿಂದ ಹಿಂದಿರುಗಬೇಕಾಯಿತು. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಂಪರ್ಕಿಸಿದರೆ ಒಳಗೆ ಬಿಡುತ್ತಾರೆ ಎಂದು ಸಬೂಬು ಹೇಳುತ್ತಾರೆ, ಆದರೆ ಸ್ಥಳದಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಮಾತ್ರ ಮೇಲಧಿಕಾರಿಗಳ ಆದೇಶವಿಲ್ಲವೆಂದು ಯಾರನ್ನೂ ಒಳಗೆ ಬಿಡದೆ ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಪ್ರವಾಸಿಗರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರ್ಕಾರದ ಈ ರೀತಿಯ ವಿರೋಧಾಭಾಸದ ಕ್ರಮ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರವಾಸಿ ಕ್ಷೇತ್ರವಾಗಿರುವ ಹಂಪಿಯ ಕೀರ್ತಿಗೆ ಧಕ್ಕೆ ಬರುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರವಾಸಿಗರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಕುರಿತು ಹಂಪಿ ಟೈಮ್ಸ್ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ, ಪ್ರವಾಸಿಗರನ್ನು ಬಿಡಲು ಸೂಚಿಸಿದ್ದೇವೆ, ಬ್ಯಾಟರಿ ವಾಹನಗಳ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.











More Stories
ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ: ಸಿಎಂ ಡಿ.ಕೆ.ಶಿವಕುಮಾರ್
ಕೂಡ್ಲಿಗಿಯಲ್ಲಿ ಖುದ್ದು ಅಹವಾಲು ಸ್ವೀಕರಿಸಿದ ಸಿಎಂ ಡಿ ಕೆ ಶಿವಕುಮಾರ್
ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲು ಶಾಸಕ ಎನ್.ಟಿ.ಶ್ರೀನಿವಾಸ್ ಆಗ್ರಹ