https://youtu.be/NHc6OMSu0K4?si=SI_K4goOPEgwo6h2
ವಿಜಯನಗರ ಜಿಲ್ಲೆಯ ಹ.ಬೊ.ಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಸರ್ಕಾರಿ ಪ್ರೌಢಶಾಲೆ
10ನೇ ತರಗತಿ ವಿದ್ಯಾರ್ಥಿ ರಜನೀಶ್ ಎನ್.ಎಂ ಅವರ ಸಂಶೋಧನಾ ಸಾಧನೆ
ಹಾನಿಕಾರಕ ರಾಸಾಯನಿಕ ರಹಿತ ಜೈವಿಕ ಪ್ಲಾಸ್ಟಿಕ್ (ಬಯೋ ಪ್ಲಾಸ್ಟಿಕ್) ಆವಿಷ್ಕಾರ
ಬಸಾಪುರ ಬಸವರಾಜ
ಹಂಪಿ ಟೈಮ್ಸ್ ಹೊಸಪೇಟೆ
ಪ್ಲಾಸ್ಟಿಕ್ ಮಾಲಿನ್ಯ ಇಡೀ ಜಗತ್ತನ್ನೇ ಕಾಡುತ್ತಿರುವ ಈ ಸಂದರ್ಭದಲ್ಲಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಪರಿಸರಸ್ನೇಹಿ ಜೈವಿಕ ಪ್ಲಾಸ್ಟಿಕ್ ಸಂಶೋಧಿಸುವ ಮೂಲಕ ಇಡೀ ಸಮಾಜಕ್ಕೆ ಭರವಸೆಯ ಬೆಳಕಾಗಿದ್ದಾನೆ. “ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ” ಎಂಬ ನುಡಿಯನ್ನು ಅಕ್ಷರಶಃ ಸಾಬೀತುಪಡಿಸಿರುವ ಈ ಸಾಧನೆ ಇಂದಿನ ಯುವಪೀಳಿಗೆಗೆ ದೊಡ್ಡ ಪ್ರೇರಣೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಬ್ಯಾಸಿಗಿದೇರಿ ಸರ್ಕಾರಿ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ರಜನೀಶ್ ಎನ್.ಎಂ. ಈ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಾದ ಪ್ರಯೋಗ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಅನ್ವೇಷಣ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದನು.
ದೇಶದಾದ್ಯಂತ ಕಠಿಣ ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳ ಮೂಲಕ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಾತ್ರ ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ರಜಾವಧಿಯಲ್ಲಿ ವಿದ್ಯಾರ್ಥಿಗಳಿಗೆ ನುರಿತ ವಿಜ್ಞಾನಿಗಳಿಂದ ವಿಶೇಷ ತರಬೇತಿ ನೀಡಿ, ಹೊಸ ಆವಿಷ್ಕಾರಗಳಿಗೆ ವೇದಿಕೆ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮದ ‘ಗ್ರೀನ್ ಕೆಮಿಸ್ಟ್ರಿ ಆಂಡ್ ಟೆಕ್ನಾಲಜೀಸ್’ ವಿಭಾಗದಲ್ಲಿ ರಜನೀಶ್, ಲಕ್ನೋದ ಪ್ರಖರ್ ಹಾಗೂ ಒಡಿಶಾದ ಶ್ರೀಲಕ್ಷ್ಮಿ ಅವರನ್ನೊಳಗೊಂಡ ಮೂವರ ಬಾಲವಿಜ್ಞಾನಿಗಳ ತಂಡವು ಸುಮಾರು ಮೂರು ತಿಂಗಳ ಕಾಲ ಸತತ ಸಂಶೋಧನೆ ನಡೆಸಿ, ಯಾವುದೇ ಹಾನಿಕಾರಕ ರಾಸಾಯನಿಕಗಳಿಲ್ಲದ ನೈಸರ್ಗಿಕ ಜೈವಿಕ ಪ್ಲಾಸ್ಟಿಕ್ (ಃio-Pಟಚಿsಣiಛಿ) ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.

ಈ ಸಂಶೋಧನೆಗೆ ಖ್ಯಾತ ವಿಜ್ಞಾನಿ ಗಳಾದ ಡಾ. ಶುಭದೀಪ್ ಸೇನಾಪತಿ ಹಾಗೂ ಆದರ್ಶ ವಿ.ಎನ್. ಅವರು ನೇರ ಮಾರ್ಗದರ್ಶನ ನೀಡಿದ್ದರು. ಶಾಲಾ ಹಂತದಲ್ಲಿ ವಿದ್ಯಾರ್ಥಿಯ ವಿಜ್ಞಾನ ಆಸಕ್ತಿಯನ್ನು ಗುರುತಿಸಿ, ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹಿಸಿದ ವಿಜ್ಞಾನ ಶಿಕ್ಷಕರಾದ ರಮೇಶ್ ಅವರು ವಿದ್ಯಾರ್ಥಿಯ ಈ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ.

ಜ್ಞಾನದಾಹ ಮತ್ತು ಪ್ರಚಲಿತ ವಿದ್ಯ ಮಾನಗಳ ಅರಿವು ವಿದ್ಯಾರ್ಥಿಯನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ. ರಜನೀಶ್ ನಿರಂತರವಾಗಿ ‘ಹಂಪಿ ಟೈಮ್ಸ್’ ದಿನಪತ್ರಿಕೆಯನ್ನು ಶಾಲೆಯಲ್ಲಿ ಓದುವ ಹವ್ಯಾಸ ಹೊಂದಿದ್ದು, ಸಮಾಜ, ಪರಿಸರ ಮತ್ತು ವಿಜ್ಞಾನದ ಬಗೆಗಿನ ಒಲವನ್ನು ಹೆಚ್ಚಿಸಿಕೊಂಡಿದ್ದಾನೆ. ಪತ್ರಿಕೋದುವ ಹವ್ಯಾಸ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆ ಮತ್ತು ಸೃಜನಶೀಲತೆಯನ್ನು ಹೇಗೆ ಬೆಳೆಸಬಲ್ಲದು ಎಂಬುದಕ್ಕೆ ಈ ಬಾಲಕನೇ ಸಾಕ್ಷಿ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಪ್ರತಿಭೆಗಳಿವೆ; ಅವರಿಗೆ ಸರಿಯಾದ ಮಾರ್ಗದರ್ಶನ, ವೇದಿಕೆ ಮತ್ತು ಸಮಾಜದ ಪ್ರೋತ್ಸಾಹ ಸಿಕ್ಕರೆ ಜಾಗತಿಕ ಮಟ್ಟದಲ್ಲೂ ಮಿಂಚಬಲ್ಲರು ಎಂಬುದನ್ನು ರಜನೀಶ್ ನಿರೂಪಿಸಿದ್ದಾನೆ. ವಿದ್ಯಾರ್ಥಿಯ ಈ ಅಭೂತಪೂರ್ವ ಸಾಧನೆಗೆ ಶಾಲಾ ಮುಖ್ಯಗುರುಗಳು, ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಹಾಗೂ ಊರಿನ ನಾಗರಿಕರು ಹರ್ಷ ವ್ಯಕ್ತಪಡಿಸಿ, ಭವಿಷ್ಯದಲ್ಲಿ ಆತ ದೇಶದ ಹೆಮ್ಮೆಯ ವಿಜ್ಞಾನಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ಗೆ ಪರ್ಯಾಯ ವಾಗಿ ಜೈವಿಕ ಪ್ಲಾಸ್ಟಿಕ್ ಸಂಶೋಧಿಸಿದ್ದು ನನಗೆ ಮರೆಯಲಾಗದ ಅನುಭವ. `ಪ್ರಯೋಗ’ ಸಂಸ್ಥೆಯ ಅನ್ವೇಷಣ ತರಬೇತಿ ಹಾಗೂ ವಿಜ್ಞಾನಿಗಳಾದ ಡಾ. ಶುಭದೀಪ್ ಸೇನಾಪತಿ ಮತ್ತು ಆದರ್ಶ್ ಸರ್ ಅವರ ಪ್ರೋತ್ಸಾಹದಿಂದ ಈ ಆವಿಷ್ಕಾರ ಸಾಧ್ಯವಾಯಿತು. ನನ್ನ ಆಸಕ್ತಿಯನ್ನು ಗುರುತಿಸಿ ಹೆಜ್ಜೆ ಹೆಜ್ಜೆಗೂ ಬೆಂಬಲಿಸಿದ ನಮ್ಮ ಶಾಲೆಯ ರಮೇಶ್ ಗುರೂಜಿಯವರಿಗೆ ಸದಾ ಚಿರಋಣಿ. ಜತೆಗೆ `ಹಂಪಿ ಟೈಮ್ಸ್’ ಪತ್ರಿಕೆಯ ನಿರಂತರ ಓದು ನನ್ನಲ್ಲಿ ಹೊಸ ಆಲೋಚನೆ ಮತ್ತು ವಿಜ್ಞಾನದ ಕುತೂಹಲವನ್ನು ಹೆಚ್ಚಿಸಿತು. ಮುಂದೆಯೂ ಸಮಾಜಕ್ಕೆ ಉಪಯುಕ್ತವಾಗುವ ಸಂಶೋಧನೆಗಳನ್ನು ಮುಂದುವರಿಸುವುದೇ ನನ್ನ ಗುರಿ.
– ರಜನೀಶ್ ಎನ್.ಎಂ. 10ನೇ ತರಗತಿ, ಬಾಲವಿಜ್ಞಾನಿ

ನಮ್ಮ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಅಪಾರವಾದ ಜ್ಞಾನ ಮತ್ತು ಕಲಿಯುವ ಹಸಿವಿದೆ. ರಜನೀಶ್ ಮೊದಲಿನಿಂದಲೂ ವಿಜ್ಞಾನದ ಪ್ರಯೋಗಗಳಲ್ಲಿ ಅತೀವ ಆಸಕ್ತಿ ತೋರುತ್ತಿದ್ದ. ರಾಷ್ಟ್ರಮಟ್ಟದ ವೇದಿಕೆಯನ್ನು ಆತ ಅದ್ಭುತವಾಗಿ ಬಳಸಿಕೊಂಡು, ಪರಿಸರಸ್ನೇಹಿ ಜೈವಿಕ ಪ್ಲಾಸ್ಟಿಕ್ ಸಂಶೋಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ಸಾಧನೆ ನಮ್ಮ ಶಾಲೆಗೆ ಹಾಗೂ ಇಡೀ ನಾಡಿಗೆ ಹೆಮ್ಮೆ ತಂದಿದೆ.
– ರಮೇಶ್ ವಿಜ್ಞಾನ ಶಿಕ್ಷಕರು.



More Stories
ಹಂಪಿ ಸ್ಮಾರಕಕ್ಕೆ ಪಿಂಕ್ ಲೈಟ್ ಅಳವಡಿಕೆ: ಪ್ರವೇಶ ನಿಷೇಧ ಕತ್ತಲಲ್ಲಿ ಪರದಾಡಿ ನಿರಾಸೆಯಿಂದ ಮರಳಿದ ಪ್ರವಾಸಿಗರು!
ಹಂಪಿಯಲ್ಲಿ ಅನಧಿಕೃತ ಹೋಂಸ್ಟೇಗಳ ವಿರುದ್ಧ ದಾಳಿ, ವಿದ್ಯುತ್ ಸಂಪರ್ಕ ಕಡಿತ, ಅಧಿಕಾರಿಗಳಿಂದ ಖಡಕ್ ಸೂಚನೆ
ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ವೇತನ 36 ಸಾವಿರ ರೂಪಾಯಿಗೆ ಹೆಚ್ಚಿಸಲು ಒತ್ತಾಯ.