September 5, 2026

Hampi times

Kannada News Portal from Vijayanagara

ಹಂಪಿಯಲ್ಲಿ ಅನಧಿಕೃತ ಹೋಂಸ್ಟೇಗಳ ವಿರುದ್ಧ ದಾಳಿ, ವಿದ್ಯುತ್‌ ಸಂಪರ್ಕ ಕಡಿತ, ಅಧಿಕಾರಿಗಳಿಂದ ಖಡಕ್‌ ಸೂಚನೆ

https://youtu.be/NHc6OMSu0K4?si=SI_K4goOPEgwo6h2

 

ನಿಯಮಬಾಹಿರ ಹೋಂಸ್ಟೇಗಳಿಗೆ ಬಿಸಿ | ಅನುಮತಿ ಪಡೆಯಲು ಆಯುಕ್ತರ ಎಚ್ಚರಿಕೆ

ಹಂಪಿಯಲ್ಲಿ ಜಂಟಿ ಪರಿಶೀಲನಾ ಕಾರ್ಯಾಚರಣೆ | ಅಕ್ರಮ ವಾಣಿಜ್ಯ ಚಟುವಟಿಕೆಗೆ ಬ್ರೇಕ್

ಹಂಪಿ ಟೈಮ್ಸ್ ಹೊಸಪೇಟೆ:‌

ವಿಶ್ವ ಪಾರಂಪರಿಕ ತಾಣವಾದ ಹಂಪಿ ಪರಿಸರದ ಸುವ್ಯವಸ್ಥೆ ಹಾಗೂ ಪ್ರವಾಸಿಗರ ಹಿತರಕ್ಷಣೆಗಾಗಿ ಪ್ರತಿಯೊಬ್ಬರೂ ಸರ್ಕಾರದ ನಿಯಮಾವಳಿಗಳ ಅನ್ವಯ ಸೂಕ್ತ ಪರವಾನಗಿ ಪಡೆದೇ ಹೋಂಸ್ಟೇಗಳನ್ನು ನಡೆಸಬೇಕು; ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯಾಚರಿಸಿದರೆ ಅಂತಹ ಘಟಕಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಇ. ಬಾಲಕೃಷ್ಣಪ್ಪ ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

 

ಜಿಲ್ಲೆಯ ಹಂಪಿ, ಹೊಸಹಂಪಿ, ಜನತಾ ಬಜಾರ್, ಕಡ್ಡಿರಾಂಪುರ ಹಾಗೂ ಕಮಲಾಪುರ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಇಂದು ಬೆಳಿಗ್ಗೆ ಆಯೋಜಿಸಿದ್ದ ಅನಧಿಕೃತ ಹೋಂಸ್ಟೇಗಳ ದಿಢೀರ್ ಪರಿಶೀಲನಾ ಕಾರ್ಯಾಚರಣೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸೂಕ್ತ ಪರವಾನಗಿ ಇಲ್ಲದೆ ನಡೆಯುತ್ತಿರುವ ಎಲ್ಲಾ ಹೋಂಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳನ್ನು ತಕ್ಷಣವೇ ಬಂದ್ ಮಾಡಬೇಕು. ಅವುಗಳ ನೇರ ಹಾಗೂ ಆನ್‌ಲೈನ್ ಬುಕಿಂಗ್‌ಗಳನ್ನು ಇಂದಿನಿಂದಲೇ ಸ್ಥಗಿತಗೊಳಿಸಬೇಕು. ವಸತಿ ಅಥವಾ ಕೃಷಿ ಉದ್ದೇಶಕ್ಕೆ ಅನುಮತಿ ಪಡೆದು, ವಾಣಿಜ್ಯ ರೂಪದಲ್ಲಿ ಹೋಂಸ್ಟೇ ನಡೆಸುವುದು ಕಾನೂನುಬಾಹಿರ. ಕಡ್ಡಾಯವಾಗಿ ನಿಯಮ ಪಾಲಿಸದಿದ್ದರೆ ವಿದ್ಯುತ್ ಮತ್ತು ನೀರು ಸಂಪರ್ಕ ಕಡಿತಗೊಳಿಸುವುದರ ಜೊತೆಗೆ ಘಟಕಗಳನ್ನು ಸಂಪೂರ್ಣವಾಗಿ ಸೀಜ್ ಮಾಡಲಾಗುವುದು ಎಂದರು.

ಕಾರ್ಯಾಚರಣೆ ವೇಳೆ ಕಡ್ಡಿರಾಂಪುರ ಬಳಿಯ ಜಮೀನೊಂದರಲ್ಲಿ ಕೃಷಿ ಬಳಕೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಹೋಂಸ್ಟೇಗೆ ಬಳಸಿಕೊಂಡಿರುವುದು ಪತ್ತೆಯಾಗಿದ್ದು, ಸ್ಥಳದಲ್ಲೇ ಜೆಸ್ಕಾಂ ಸಿಬ್ಬಂದಿ ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನೋಟಿಸ್ ಜಾರಿ ಮಾಡಲಾಯಿತು.

ಅಧಿಕೃತ ಅನುಮತಿ ಸಿಗುವವರೆಗೆ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುವುದಿಲ್ಲವೆಂದು ಮಾಲೀಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾಧಿಕಾರದ ಆಯುಕ್ತರಿಗೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು. ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆದ ನಂತರವೇ ಉದ್ಯಮವನ್ನು ಪುನರಾರಂಭಿಸಬೇಕು ಎಂದು ಅಧಿಕಾರಿಗಳು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಆಲಂ ಪಾಷಾ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Please follow and like us:

 

 

 

 

 

 

 

 

 

 

 

 

Translate »
[t4b-ticker]
error: Content is protected !!