September 5, 2026

Hampi times

Kannada News Portal from Vijayanagara

ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ವೇತನ 36 ಸಾವಿರ ರೂಪಾಯಿಗೆ ಹೆಚ್ಚಿಸಲು ಒತ್ತಾಯ.

https://youtu.be/NHc6OMSu0K4?si=SI_K4goOPEgwo6h2

 

ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ | ಸೇವೆ ಕಾಯಂಗೊಳಿಸಲು ಕಾರ್ಯಕರ್ತೆಯರ ಆಗ್ರಹ

ಹಂಪಿ ಟೈಮ್ಸ್‌ ಹಗರಿಬೊಮ್ಮನಹಳ್ಳಿ:

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರ ಸತತವಾಗಿ ಕರ್ತವ್ಯ ನಿರ್ವಹಿಸಿಕೊಳ್ಳುತ್ತಿದ್ದರೂ, ಅವರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.

 

ಪಟ್ಟಣದ ಹಗರಿ ಆಂಜನೇಯ ದೇಗುಲದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಜೂನಿಯರ್ ಕಾಲೇಜು ರಸ್ತೆಯ ಗಂಗಾಮತ ಸಮಾಜದ ಸಮುದಾಯ ಭವನವನ್ನು ತಲುಪಿತು. ಬಳಿಕ ಅಲ್ಲಿ  ನಡೆದ ತಾಲೂಕು ಮಟ್ಟದ ೬ನೇ ಸಮ್ಮೇಳನದಲ್ಲಿ  ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ನಾಗರತ್ನ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ವೇತನವಾಗಿ ₹36,000 ನೀಡಬೇಕು ಹಾಗೂ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಮುಂದುವರಿಸಬೇಕು” ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ನಿವೃತ್ತಿ ಹೊಂದಿದವರಿಗೆ ಹಿಡಿಗಂಟು ನೀಡಬೇಕು. ಅಲ್ಲದೆ ಅರ್ಹತೆಯ ಆಧಾರದ ಮೇಲೆ ಅವರಿಗೆ ಇಲಾಖೆಯಲ್ಲೇ ಬಡ್ತಿ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.

ಸಮ್ಮೇಳನದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ, ತಾಲೂಕು ಅಧ್ಯಕ್ಷೆ ಜ್ಯೋತಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಸರ್ದಾರ ಹುಲಿಗೆಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮಾರೆಮ್ಮ, ಮುಖಂಡರಾದ ಡಿ. ಭಾಗ್ಯಮ್ಮ, ರೇಣುಕಾ, ಗೀತಮ್ಮ, ಮಾಲಿನೀ, ಮಾಬುನ್ನಿ, ಕಸ್ತೂರಿ, ಸುಜಾತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Please follow and like us:

 

 

 

 

 

 

 

 

 

 

 

 

Translate »
[t4b-ticker]
error: Content is protected !!