https://youtu.be/NHc6OMSu0K4?si=SI_K4goOPEgwo6h2
ಇತ್ತೀಚಿಗೆ ಮುಖ ಪುಸ್ತಕದಲ್ಲಿ ಒಂದು ಜಾಹೀರಾತು ನೋಡಿದೆ. ಪುಟ್ಟ ವಯಸ್ಸಿನ ಇಬ್ಬರು ಮಕ್ಕಳು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಅಮ್ಮನ ಮಾರ್ಗದರ್ಶನದಲ್ಲಿ ಅಡುಗೆ ತಯಾರಿಸುತ್ತಿದ್ದರು. ಇದನ್ನು ನೋಡಿದ ಅಜ್ಜಿ “ಅರೆ ಮಕ್ಕಳು ಅಮ್ಮನಿಗೆ ಸಹಾಯ ಮಾಡುವಷ್ಟು ದೊಡ್ಡವರಾದರೆ!” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಕೂಡಲೇ ಬಾಯಿಯ ಮೇಲೆ ಬೆರಳಿಟ್ಟ ಮಗಳು “ಅಮ್ಮ.. ಪ್ಲೀಸ್ ಹಾಗೆಲ್ಲ ಹೇಳಬೇಡ, ಮಕ್ಕಳು ಮನೆಯ ಕೆಲಸದಲ್ಲಿ ಪಾಲ್ಗೊಳ್ಳುವುದು ಅವರು ನಮಗೆ ಮಾಡುವ ಸಹಾಯವಲ್ಲ, ಬದಲಾಗಿ ಅದು ಅವರ ಜೀವನದಲ್ಲಿ ಅತ್ಯವಶ್ಯಕವಾಗಿ ಕಲಿಯಲೇಬೇಕಾದ ಒಂದು ಕೌಶಲ. ಸಹಾಯ ಮಾಡುವ ಮೂಲಕ ತಾವು ಮತ್ತೊಬ್ಬರಿಗೆ ಮಹದುಪಕಾರ ಮಾಡುತ್ತಿದ್ದೇವೆ ಎಂಬ ಭಾವ ಮಕ್ಕಳಲ್ಲಿ ಮೂಡುವುದು ಬೇಡ” ಎಂದು ತಾಯಿಗೆ ಹೇಳಿದಾಗ ಆಕೆಯ ತಾಯಿ ಹೌದು ಎಂಬಂತೆ ತಲೆಯಾಡಿಸಿದರು.
ಕಲಿತ ಹೆಣ್ಣು ಮಗಳೊಬ್ಬಳು ಮನೆಯವರ ಸ್ನೇಹಿತರ ಅದೆಷ್ಟೇ ಒತ್ತಾಯದ ನಡುವೆಯೂ ಕೂಡ ಒಂದೇ ಒಂದು ಅಡುಗೆಯನ್ನು ಕಲಿಯಲಿಲ್ಲ. ಅಡುಗೆ ಮಾಡುವುದನ್ನು ಹೆಣ್ಣು ಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು ಎಂಬ ಸಾಮಾಜಿಕ ಗ್ರಹಿಕೆಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಆಕೆ ಹಾಗೆ ವರ್ತಿಸುತ್ತಿದ್ದಳು. ಅದೊಂದು ದಿನ ಆಕೆಯ ಪುಟ್ಟ ಸಹೋದರಿ ಅಕ್ಕನಿಗೆ “ಅಕ್ಕ ನಿನಗೂ ಹಸಿವಾಗುತ್ತದಲ್ಲವೇ? ಆದ್ದರಿಂದ ನೀನು ಅಡುಗೆ ಮಾಡುವುದನ್ನು ಕಲಿತುಕೋ” ಎಂದು ಹೇಳಿದಾಗ, ಅದನ್ನು ಮೂಲಭೂತ ಅವಶ್ಯಕತೆ ಎಂದು ಸಹಜವಾಗಿ ಸ್ವೀಕರಿಸಿದ ಆ ಹೆಣ್ಣು ಮಗಳು ಅಡುಗೆ ಮಾಡುವುದನ್ನು ಕಲಿತಳು.
ಮೇಲಿನ ಎರಡು ಜಾಹೀರಾತುಗಳು ನಿಜವಾಗಿಯೂ ಅಡುಗೆ ಎಂಬ ಕಲೆ ಕೇವಲ ಹೆಣ್ಣು ಮಕ್ಕಳು ಕಲಿಯಲೇಬೇಕಾದ ಕೌಶಲವಲ್ಲ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ತಮ್ಮ ಬದುಕನ್ನು ನಿರ್ವಹಿಸಲು ಹೊಂದಿರಲೇಬೇಕಾದ ಅಗತ್ಯ ಮೂಲಭೂತ ಕೌಶಲಗಳಲ್ಲಿ ಒಂದು ಎಂಬುದನ್ನು ನಮಗೆ ತೋರಿಸಿಕೊಡುತ್ತವೆ.
ಮತ್ತೊಂದು ಕಡೆ ಇನ್ನೇನು ಕೆಲವೇ ದಿನಗಳಲ್ಲಿ ತನ್ನದೇ ವೃತ್ತಿಯಲ್ಲಿ ಇರುವ ಹೆಣ್ಣು ಮಗಳನ್ನು ವಿವಾಹವಾಗುತ್ತಿರುವ ಮಗನಿಗೆ ಅಡುಗೆ ಕೆಲಸಗಳನ್ನು ಕಲಿಸಿದ ತಾಯಿ, ಇಬ್ಬರು ಒಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ ಎಂದ ಮೇಲೆ ಮನೆಯ ಕೆಲಸಗಳನ್ನು ಕೂಡ ಒಟ್ಟಾಗಿ ನಿರ್ವಹಿಸಬೇಕು ಎಂದು ಹೇಳುವುದು ಹಾಗೂ ಅದಕ್ಕೆ ಮಗ ಅತ್ಯಂತ ಪ್ರೀತಿಯಿಂದ ಸಮ್ಮತಿಸಿ ಕಲಿಯಲು ಉತ್ಸಾಹ ತೋರುವುದು ಸ್ವಾಗತಾರ್ಹ ಬೆಳವಣಿಗೆ. ಮುಂದಿನ ದಿನಮಾನಗಳಲ್ಲಿ ಈ ಮಾದರಿಯನ್ನು ನಾವು ಇನ್ನೂ ಹೆಚ್ಚು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಖಂಡಿತವಾಗಿಯೂ ಇದೆ.
ನಿಜ ಅಲ್ಲವೇ ಸ್ನೇಹಿತರೆ?… ಗೃಹ ಕೃತ್ಯಗಳು ಯಾರು ಯಾರಿಗೂ ಮಾಡಬಹುದಾದ ಉಪಕಾರವಲ್ಲ, ಬದಲಾಗಿ ಅವು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕಾದ ಜೀವನ ಕೌಶಲ್ಯಗಳು. ಅಡುಗೆ ಮಾಡುವುದು ಕೇವಲ ಹೆಣ್ಣು ಮಕ್ಕಳ ಕೆಲಸವಲ್ಲ. ಅಂತೆಯೇ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಎಲ್ಲಾ ಕೆಲಸಗಳು ಕೇವಲ ಮಹಿಳೆಯರವಲ್ಲ. ಅಡುಗೆ ಮಾಡುವ ಮೂಲಕ ಗಂಡಸು ಹೆಣ್ಣಾಗುವುದಿಲ್ಲ ಅಥವಾ ಅಡುಗೆ ಮಾಡುವ ಮನೆ ಕೆಲಸಗಳನ್ನು ನಿರ್ವಹಿಸುವುದು ಲಿಂಗ ಆಧಾರದ ಕೆಲಸ ಕಾರ್ಯಗಳಲ್ಲ.
ಮಾತೆತ್ತಿದರೆ ಭೀಮಸೇನ, ನಳ ಮಹಾರಾಜರು ಅತ್ಯಂತ ಪಾಕ ಪ್ರವೀಣರು ಎಂದು ಬೊಬ್ಬೆ ಹೊಡೆಯುವ ಗಂಡಸರು ತಮ್ಮ ತಮ್ಮ ಮನೆಗಳಲ್ಲಿ ಒಂದು ಕಪ್ ಚಹಾ ಮಾಡಿಕೊಳ್ಳಲು ಕೂಡ ಪರದಾಡುವುದನ್ನು ನಾವು ನೋಡುತ್ತೇವೆ. ಅದು ಹೋಗಲಿ ಕುಟುಂಬದ ಇತರ ಮಹಿಳಾ ಸದಸ್ಯರೇ ಅವರಿಗೆ ಅವರು ಕುಳಿತಲ್ಲಿಯೇ ನೀರು, ಚಹಾ, ತಿಂಡಿ, ಊಟಗಳನ್ನು ಕಾಲಕಾಲಕ್ಕೆ ಒದಗಿಸಬೇಕು. ಒಗೆದು ಇಸ್ತ್ರಿ ಮಾಡಿದ ಬಟ್ಟೆಗಳನ್ನು ಪೂರೈಸಬೇಕು, ಓರಣವಾಗಿ ಮನೆಯನ್ನು ಇಟ್ಟುಕೊಳ್ಳಬೇಕು. ಹಬ್ಬ ಹುಣ್ಣಿಮೆಗಳಲ್ಲಿ ಮನೆ ದೇವರ ಪೂಜೆಯಿಂದ ಹಿಡಿದು ಹಬ್ಬದ ಅಡುಗೆಯನ್ನು ಕೂಡ ಹೆಣ್ಣು ಮಕ್ಕಳೇ ಮಾಡ್ತಾ ಬಂದಿದ್ದು, ಅದೊಂದು ರೀತಿಯಲ್ಲಿ ಗಂಡು ಮಕ್ಕಳ ಪಾತ್ರ ಕೇವಲ ತಂದು ಹಾಕುವುದು ಎಂಬಂತಹ ಪರಿಸ್ಥಿತಿ ಅವರದ್ದಾಗಿದೆ.
ನಮ್ಮ ಮನೆಯ ಗಂಡು ಮಕ್ಕಳನ್ನು ನಾವು ‘ರಾಜಾ ಬೇಟಾ’ ಎಂಬಂತೆ ಬೆಳೆಸುತ್ತಿದ್ದು, ದೈನಂದಿನ ಎಲ್ಲ ಜವಾಬ್ದಾರಿಗಳಿಂದ ದೂರವಿರಿಸುತ್ತೇವೆ. ಆದರೆ ಹೀಗೆ ಗಂಡು ಮಕ್ಕಳನ್ನು ಬೆಳೆಸುವ ಮೂಲಕ ನಾವು ಅವರನ್ನು ಇತರರ ಮೇಲೆ ಅವಲಂಬನೆ ಹೊಂದಿರುವಂತೆ ಮಾಡುತ್ತೇವೆ. ತಮ್ಮೆಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುವ ಓರ್ವ ಸಮರ್ಥ ವ್ಯಕ್ತಿಯನ್ನಾಗಿಸದೆ ಪರಾವಲಂಬಿ ಆಗಿಸುತ್ತೇವೆ.
ಗೃಹ ಕೃತ್ಯಗಳನ್ನು ತಮ್ಮ ಮಕ್ಕಳ ನಡುವೆ ಹಂಚಿ ಕೊಟ್ಟು ಕೆಲಸ ಮಾಡಿಸುವ ಮೂಲಕ ಪಾಲಕರು ಕೌಟುಂಬಿಕ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸಬೇಕು. ಇದು ಅವರನ್ನು ಆತ್ಮನಿರ್ಭರ, ಕಾಳಜಿಪರ ಹಾಗೂ ಆತ್ಮವಿಶ್ವಾಸವುಳ್ಳ ನಾಗರಿಕರನ್ನಾಗಿಸುತ್ತದೆ. ಮಗು ಗಂಡಿರಲಿ ಹೆಣ್ಣಿರಲಿ “ಇದು ನನ್ನ ಕೆಲಸ, ನಾನು ಇದನ್ನು ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ” ಎಂದು ಹೇಳಿದಾಗ ಅದು ಸಂಪೂರ್ಣ ಆತ್ಮನಿರ್ಭರತೆಯ ಸ್ವತಂತ್ರ ವ್ಯಕ್ತಿತ್ವವನ್ನು ಸೂಚಿಸುತ್ತದೆ… ಅದು ನಿಜವಾದ ಸಬಲೀಕರಣ.

ಹೋಂ ಮೇಕರ್ ಎಂದರೆ ಕೇವಲ ಅದು ಮಹಿಳೆಯರು ಎಂಬಂತೆ ಅನಾದಿಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಪುಷ್ಠಿ ನೀಡಲು ಇತ್ತೀಚೆಗೆ ಕರ್ನಾಟಕದ ಉಚ್ಚ ನ್ಯಾಯಾಲಯವು ಹೋಂ ಮೇಕರ್ ಎಂಬ ಪದವನ್ನು ಗಂಡು ಮತ್ತು ಹೆಣ್ಣು ಎರಡು ಆಗಿರಬಹುದಾದ ನ್ಯೂಟ್ರಲ್ ಅಂದರೆ ತಟಸ್ಥ ಲಿಂಗ, ಅಂದರೆ ಎಲ್ಲರಿಗೂ ಅನ್ವಯಿಸಲಾಗುತ್ತದೆ. ವ್ಯಕ್ತಿ ತಮ್ಮ ಮನೆಯ ದೈನಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ದುಡಿಯುವ ಕೂಲಿಯಾಗಿದ್ದರೂ, ದೊಡ್ಡ ಆಫೀಸರ್ ಆಗಿದ್ದರೂ ಅದು ಗಂಡೇ ಇರಲಿ, ಹೆಣ್ಣೇ ಇರಲಿ ಗೃಹ ಕೃತ್ಯಗಳನ್ನು ಮಾಡಿಕೊಳ್ಳಲು ಕಲಿತಿರಬೇಕು ಹಾಗೂ ಮಾಡಲೂಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಹೇಳಿದೆ.
ಪಂಪಾಲಾಲ್ ಎಂಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ತೀವ್ರ ಗಾಯಗೊಂಡ. ನಂತರ ಪರಿಹಾರಕ್ಕೆ ಅರ್ಜಿ ಗುಜರಾಯಿಸಿದ ಸಂಬಂಧ ನಡೆದ ವಿಚಾರಣೆಯಲ್ಲಿ ಗೃಹಕೃತ್ಯದ ವಿಷಯ ಮುನ್ನೆಲೆಗೆ ಬಂದಿತ್ತು. ಅವರಿಗೆ ವಿರೋಧವಾದ ಎದುರಾಳಿಗಳ ವಾದ ಗಮನಾರ್ಹವಾಗಿತ್ತು. ಸ್ನಾತಕೋತ್ತರ ಪದವಿಯನ್ನು ಹೊಂದಿದ್ದ ಹಾಗೂ ಈ ಹಿಂದೆ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಣ್ಣು ಮಗಳನ್ನು ಗೃಹಿಣಿ ಎಂದು ಹೇಳಲು ಬರುವುದಿಲ್ಲ ಎಂಬ ಮಾತನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು ಒಪ್ಪಲಿಲ್ಲ.
ತನ್ನ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಹೆಣ್ಣುಮಗಳು ಅನಕ್ಷರಸ್ಥಳೇ ಆಗಬೇಕಾಗಿಲ್ಲ, ಆಕೆ ದಿನದ 24 ಗಂಟೆಯೂ ಮನೆಯಲ್ಲಿ ಇರುವ ಹಾಗೂ ಗೃಹ ಕೃತ್ಯಗಳನ್ನು ನಿಭಾಯಿಸುವುದನ್ನು ಗೃಹಿಣಿ ಎಂದು ಹೇಳಲಾಗುವುದಿಲ್ಲ. ಗೃಹಿಣಿಯಾಗಿರುವ ಆಕೆಗೆ 1.96 ಲಕ್ಷ ರೂ ಹಣವನ್ನು ಆರು ಶೇಕಡ ವಾರ್ಷಿಕ ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ಮಾಡಿತು. ಆದರೂ ಕೂಡ ಗೃಹ ಕೃತ್ಯಗಳು ಪ್ರಾಥಮಿಕವಾಗಿ ಕೇವಲ ಹೆಣ್ಣು ಮಕ್ಕಳದ್ದೇ ಎಂಬಂತೆ ನಾವೇಕೆ ಯೋಚಿಸುತ್ತೇವೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಹಾಗಾದರೆ ನಾವೇನು ಮಾಡಬೇಕು?
ಗೃಹ ಕೃತ್ಯದ ಎಲ್ಲಾ ಕೆಲಸಗಳನ್ನು ಯಾವುದೇ ಬಗೆಯ ಲಿಂಗ ಭೇದವಿಲ್ಲದೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಕಲಿಸಬೇಕು. ದೈನಂದಿನ ಬದುಕಿನಲ್ಲಿ ಕುಟುಂಬದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಅಡುಗೆ ಮಾಡುವುದನ್ನು, ಮನೆಯ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದನ್ನು ಸ್ವಲ್ಪವಾದರೂ ಕಲಿತಿರಲೇಬೇಕು… ಅದು ಅವರ ಮೂಲಭೂತ ಅವಶ್ಯಕತೆಯೂ ಹೌದು. ಕಲಿತಿರುವವರು ಬದುಕಿನ ಎಲ್ಲ ಬಗೆಯ ಪರೀಕ್ಷೆಗಳಿಗೆ ಸಿದ್ಧರಾಗಿರುತ್ತಾರೆ.
ಕಳೆದ ಒಂದೆರಡು ದಶಕಗಳಿಂದ ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿರುವ ಯುವಕ ಯುವತಿಯರು ತಮ್ಮ ದೈನಂದಿನ ಬದುಕಿಗೆ ಅತ್ಯವಶ್ಯಕವಾದ ಈ ಎಲ್ಲವನ್ನು ಕಲಿಯುತ್ತಿದ್ದಾರೆ. ಆದರೆ ಒಂದೊಮ್ಮೆ ಮದುವೆಯಾದರೆ ಕೂಡಲೇ ಇದೆಲ್ಲವನ್ನು ಹೆಣ್ಣು ಮಕ್ಕಳ ಜವಾಬ್ದಾರಿಗೆ ಒಪ್ಪಿಸಿ ಗಂಡಸರು ತಾವು ನಿಶ್ಚಿಂತರಾಗುವರು…. ಇದು ಸಲ್ಲದು.
ಗೃಹ ಕೃತ್ಯಗಳನ್ನು ಅರಿತಿರುವುದು ವೈಯಕ್ತಿಕವಾಗಿ ನಮ್ಮೆಲ್ಲ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿದಷ್ಟೇ ಒಳ್ಳೆಯದು. ಗಂಡಿರಲಿ ಹೆಣ್ಣಿರಲಿ ಸಮಯ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮಗೆ ತಾವು ಪರಾವಲಂಬಿಗಳಾಗದೆ ಇರುವ ನಿಟ್ಟಿನಲ್ಲಿ ಎಲ್ಲ ಬಗೆಯ ಗೃಹ ಕೃತ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಏನಂತೀರಾ ಸ್ನೇಹಿತರೆ?

- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

More Stories
ತ್ಯಾಗದ ಫಲವೇ ಭಾರತದ ಸ್ವಾತಂತ್ರ್ಯ…….
ಆಗಸ್ಟ್ 14ರಂದು ಹೊಸಪೇಟೆಯಲ್ಲಿ “ನಾ… ಏರಿದ ಎತ್ತರಕ್ಕೆ…!!” ಕೃತಿ ಲೋಕಾರ್ಪಣೆ
34 ವರ್ಷಗಳ ಸೇವೆ: ನಿಂಬಳಗೆರೆ ಇಂಗ್ಲಿಷ್ ಶಿಕ್ಷಕ ಎಂ.ಬಿ. ನಾಗರಾಜ್ಗೆ ಬೀಳ್ಕೊಡುಗೆ