September 5, 2026

Hampi times

Kannada News Portal from Vijayanagara

ತಂತ್ರಜ್ಞಾನ-ಎಐ ಎಷ್ಟೇ ಬೆಳೆದರೂ ಫೋಟೋಗ್ರಫಿ ಅನಿವಾರ್ಯ : ತೆಗ್ಗಿನ ಮಠದ ಶ್ರೀ ವರಸಧ್ಯೋಜಾತ ಸ್ವಾಮೀಜಿ

https://youtu.be/NHc6OMSu0K4?si=SI_K4goOPEgwo6h2

 

ಸೃಜನಶೀಲತೆಗೆ ತಂತ್ರಜ್ಞಾನ ಪರ್ಯಾಯವಲ್ಲ : ಹರಪನಹಳ್ಳಿಯಲ್ಲಿ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಹರಪನಹಳ್ಳಿ: ಸಮಾಜದ ಪ್ರತಿಯೊಂದು ನೆನಪು ಹಾಗೂ ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದು ಜೀವಂತವಾಗಿಡುವ ಛಾಯಾಗ್ರಾಹಕರ ಶ್ರಮ ಅತ್ಯಮೂಲ್ಯವಾದುದು ಎಂದು ತೆಗ್ಗಿನ ಮಠದ ಪೂಜ್ಯ ಶ್ರೀ ವರಸಧ್ಯೋಜಾತ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

 

ಪಟ್ಟಣದ ನಟರಾಜ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀಗಳು, “ಕ್ಷಣಗಳನ್ನು ಕೇವಲ ಸೆರೆಹಿಡಿಯುವುದಷ್ಟೇ ಅಲ್ಲದೆ ಅವುಗಳಿಗೆ ಜೀವ ತುಂಬುವ ನೈಜ ಕಲಾವಿದನೇ ಛಾಯಾಗ್ರಾಹಕ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಛಾಯಾಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಒಬ್ಬ ಪರಿಣಿತ ಛಾಯಾಗ್ರಾಹಕನ ಸೃಜನಶೀಲತೆಗೆ ಪರ್ಯಾಯವಿಲ್ಲ. ಇತಿಹಾಸವನ್ನು ಭವಿಷ್ಯದ ಪೀಳಿಗೆಗೆ ದಾಖಲಿಸಿಡುವಲ್ಲಿ ಇವರು ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಡಾ. ಹೆಚ್. ಬಿ. ಮಂಜುನಾಥ್ ಮಾತನಾಡಿ, “ಭವಿಷ್ಯದಲ್ಲಿ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಫೋಟೋಗ್ರಫಿಯೇ ಅತ್ಯಂತ ಪ್ರಾಮಾಣಿಕ ಸಾಕ್ಷಿಯಾಗುತ್ತದೆ. ಇಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಭಾರತಕ್ಕೆ ಕಾಲಿಟ್ಟಿದ್ದರೂ ಫೋಟೋಗ್ರಫಿಯ ಮಹತ್ವ ಕಡಿಮೆಯಾಗುವುದಿಲ್ಲ. ಶುಭ ಸಮಾರಂಭಗಳಲ್ಲಿ ಕುಟುಂಬದವರಿಗಿಂತ ಮುಂಚಿತವಾಗಿ ಹಾಜರಿದ್ದು ಕಾರ್ಯನಿರ್ವಹಿಸುವವರೇ ಛಾಯಾಗ್ರಾಹಕರು. 1839 ರಲ್ಲಿ ಫ್ರೆಂಚ್ ವಿಜ್ಞಾನಿಗಳಾದ ಜೋಸೆಫ್ ನಿಸೆಫೋರ್ ನೀಪ್ಸ್ ಮತ್ತು ಲೂಯಿಸ್ ಡಾಗುರೆ ಅವರು ಮೊದಲ ಪ್ರಾಯೋಗಿಕ ಛಾಯಾಗ್ರಹಣ ಪ್ರಕ್ರಿಯೆಯಾದ ‘ಡಾಗುರೊಟೈಪ್’ ಅನ್ನು ಅಭಿವೃದ್ಧಿಪಡಿಸಿದರು. ನಂತರ ಫ್ರೆಂಚ್ ಸರ್ಕಾರವು ಈ ತಂತ್ರಜ್ಞಾನದ ಪೇಟೆಂಟ್ ಅನ್ನು ಖರೀದಿಸಿ ಇಡೀ ಜಗತ್ತಿಗೆ ಉಚಿತ ಕೊಡುಗೆಯಾಗಿ ನೀಡಿತು. ಲಿಯೊನಾರ್ಡೊ ಡಾ ವಿಂಚಿ ಅವರ ಕಾಲದ ಚಿತ್ರಕಲೆಗೆ ಬಳಸುತ್ತಿದ್ದ ವಿಧಾನದಿಂದ ಹಿಡಿದು, ಕನ್ನಡಿ ಮತ್ತು ಮಸೂರಗಳ ಅಳವಡಿಕೆಯ ಮೂಲಕ ಇಂದಿನ ಆಧುನಿಕ ಡಿಜಿಟಲ್ ಕ್ಯಾಮೆರಾಗಳವರೆಗಿನ ತಾಂತ್ರಿಕ ಬೆಳವಣಿಗೆ ವಿಸ್ಮಯಕಾರಿಯಾಗಿದೆ” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಮಂಜುನಾಥ್, ಉಪಾಧ್ಯಕ್ಷ ಕೆ. ನಿಂಗಪ್ಪ, ಕಾರ್ಯದರ್ಶಿ ಸಿರುಸಾಚಾರಿ ಟಿ. ಮೈದೂರು, ಜಿಲ್ಲಾಧ್ಯಕ್ಷ ಬಿ. ಎಂ. ಕರಿಬಸಯ್ಯ, ಉಪಾಧ್ಯಕ್ಷ ಎನ್. ವಿನಯ್ ಕುಮಾರ್ ಚಿಗಟೇರಿ, ರೇಷ್ಮಾ ಹಂಸರಾಜ್ ಹಂಸ, ಡಿಜೆ ಪ್ರೆಸ್ ವಿಜಯ್ ಕುಮಾರ್ ಜಾದವ್, ಕೊಟ್ರೇಶ್ ಕೆ. ವಿ., ಹೊಸಪೇಟೆಯ ಎ. ಎಂ. ಮಲ್ಲಿಕಾರ್ಜುನ ಗೌಡ, ಕೆ. ವೀರೇಶ್, ನವೀನ್ ಗಡಿಗೆ, ಎ. ಎಂ. ಸೋಮಶೇಖರಯ್ಯ, ಸಂತೋಷ್ ಪೂಜಾರ್, ಎ. ಆರ್. ಟಿ. ರಾಘವೇಂದ್ರ, ಎಂ. ಮಹೇಶ್ವರ, ಬಡಿಗೇರ ಗಣೇಶ್, ಮುಜುಬುರ್ ರೆಹಮಾನ್, ಬಸವರಾಜ್ ಹೆಚ್. ಎಸ್., ದೇವರಾಜ್ ಸೇರಿದಂತೆ ತಾಲ್ಲೂಕಿನ ಅನೇಕ ಛಾಯಾಗ್ರಾಹಕರು ಉಪಸ್ಥಿತರಿದ್ದರು.

Please follow and like us:

 

 

 

 

 

 

 

 

 

 

 

 

Translate »
[t4b-ticker]
error: Content is protected !!