https://youtu.be/NHc6OMSu0K4?si=SI_K4goOPEgwo6h2
ಸತತ 34 ವರ್ಷಗಳ ಕಾಲ ಸೇವೆ: ನೆಚ್ಚಿನ ಗುರುವಿಗೆ ಸನ್ಮಾನಿಸಿದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು
ಶಿಕ್ಷಣ ಕ್ಷೇತ್ರದಲ್ಲಿ ನಿಷ್ಠೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಎಂ.ಬಿ. ನಾಗರಾಜ್.
ಕೂಡ್ಲಿಗಿ: ಕಳೆದ 34 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ನಿಷ್ಠೆ, ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದ ಶ್ರೀ ಬಿ.ಕೆ.ವಿ. ಸರ್ಕಾರಿ ಪ್ರೌಢಶಾಲೆ ನಿಂಬಳಗೆರೆಯ ಇಂಗ್ಲಿಷ್ ಶಿಕ್ಷಕ ಶ್ರೀ ಎಂ.ಬಿ. ನಾಗರಾಜ್ ಅವರಿಗೆ ಆಗಸ್ಟ್ 10 ರಂದು ಶಾಲೆಯ ಆವರಣದಲ್ಲಿ ಶಾಲೆಯ ಮುಖ್ಯಗುರುಗಳಾದ ಜಿ. ಫಕೀರಪ್ಪ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಭಾವಪೂರ್ಣ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ಜರುಗಿತು.
ಎಂ.ಬಿ. ನಾಗರಾಜ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾರಿಗನೂರು ಶಾಲೆಯಲ್ಲಿ ಸೇವೆ ಸಲ್ಲಿಸಿ, ನಂತರ ಹೊಸಪೇಟೆಯ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರು. ತದನಂತರ ಶ್ರೀ ಬಿ.ಕೆ.ವಿ. ಸರ್ಕಾರಿ ಪ್ರೌಢಶಾಲೆ ನಿಂಬಳಗೆರೆಯಲ್ಲಿ ಸತತ 7 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಜುಲೈ 31, 2026 ರಂದು ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಇಂಗ್ಲಿಷ್ ವಿಷಯವೆಂದರೆ ಭಯಪಡುವ ಮಕ್ಕಳಿಗೆ ಅತ್ಯಂತ ಸರಳವಾಗಿ ಹಾಗೂ ಸುಲಭವಾಗಿ ಬೋಧಿಸುವ ಮೂಲಕ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಇವರ ಗರಡಿಯಲ್ಲಿ ಪಳಗಿದ ಅಪಾರ ಸಂಖ್ಯೆಯ ಶಿಷ್ಯ ಬಳಗ ಇಂದು ಸಮಾಜದಲ್ಲಿ ಡಾಕ್ಟರ್, ಇಂಜಿನಿಯರ್, ವಕೀಲರು ಹಾಗೂ ಕಾಲೇಜು ಪ್ರೊಫೆಸರ್‌ಗಳಾಗಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಇವರ ಪುತ್ರಿ ಸಹ ಕೆ.ಎ.ಎಸ್ (KAS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಡೀ ಶಾಲೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.
ಒಬ್ಬ ಆದರ್ಶ ಶಿಕ್ಷಕನಿಗೆ ಇರಬೇಕಾದ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿಕೊಂಡಿದ್ದ ಎಂ.ಬಿ. ನಾಗರಾಜ್ ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದ್ದ ಬೃಹತ್ ಜನಸ್ತೋಮ ಮತ್ತು ಅವರ ಹಳೆಯ ವಿದ್ಯಾರ್ಥಿಗಳ ಸಮೂಹವೇ ಅವರ ಸೇವೆಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಸಮಾರಂಭದಲ್ಲಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರು ಭಾಗವಹಿಸಿ, ನಿವೃತ್ತ ಶಿಕ್ಷಕರ ಶ್ರೇಷ್ಠ ಸೇವೆಯನ್ನು ಸ್ಮರಿಸಿ, ಅವರ ಮುಂದಿನ ನಿವೃತ್ತ ಜೀವನವು ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.







More Stories
ಆಗಸ್ಟ್ 14ರಂದು ಹೊಸಪೇಟೆಯಲ್ಲಿ “ನಾ… ಏರಿದ ಎತ್ತರಕ್ಕೆ…!!” ಕೃತಿ ಲೋಕಾರ್ಪಣೆ
ಜೆಸ್ಕಾಂ ನಿರ್ಲಕ್ಷ್ಯಕ್ಕೆ ಯುವರೈತ ಬಲಿ! ಅನಾಥವಾಯ್ತು ಹಸುಗೂಸುಗಳ ಭವಿಷ್ಯ! : ಶಾಸಕ ಕೃಷ್ಣನಾಯ್ಕ ಮೃತನ ಕುಟುಂಬಕ್ಕೆ ಸಾಂತ್ವನ, ಪರಿಹಾರ ಭರವಸೆ
ದೇಶದ ಶೇ. 56 ಜನರಲ್ಲಿ ರಕ್ತಹೀನತೆಯ ಭೀತಿ, ಕುಂಠಿತಗೊಳ್ಳುತ್ತಿದೆ ಮಕ್ಕಳ ಜ್ಞಾಪಕ ಶಕ್ತಿ : ಡಿಎಚ್ಒ ಟಿ ಲಿಂಗರಾಜು